ಇನ್ನು ಮುಂದೆ ಫೇಸ್ ಬುಕ್ ಖಾತೆ ತೆರೆಯುವಾಗಲೂ ಬೇಕು ಆಧಾರ್!
ಹೊಸದಿಲ್ಲಿ, ಡಿ.27: ಭಾರತದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಫೀಚರೊಂದನ್ನು ಪರೀಕ್ಷಿಸಲಿದ್ದು, ಹೊಸ ಬಳಕೆದಾರರು ಆಧಾರ್ ಕಾರ್ಡ್ ನಲ್ಲಿರುವಂತೆ ತಮ್ಮ ಹೆಸರನ್ನು ನಮೂದಿಸಲು ಪ್ರೋತ್ಸಾಹಿಸಲಿದೆ.
ಹೊಸ ಫೇಸ್ ಬುಕ್ ಖಾತೆ ತೆರೆಯುವವರೊಂದಿಗೆ ಆಧಾರ್ ಕಾರ್ಡ್ ವಿವರಗಳನ್ನೂ ಫೇಸ್ ಬುಕ್ ಕೇಳಲಿದೆ ಎಂದು ಫೇಸ್ ಬುಕ್ ಇಂಡಿಯಾ ದೃಢಪಡಿಸಿದೆ.
ಫೇಸ್ ಬುಕ್ ಖಾತೆಯನ್ನು ತೆರೆಯುವ ಸಂದರ್ಭ ಆಧಾರ್ ಮಾಹಿತಿಗಳನ್ನು ಕೇಳಿದ್ದರ ಸ್ಕ್ರೀನ್ ಶಾಟ್ ಒಂದನ್ನು ಬಳಕೆದಾರನೊಬ್ಬ ರೆಡಿಟ್ ನಲ್ಲಿ ಪೋಸ್ಟ್ ಮಾಡಿದ್ದ, ಆಧಾರ್ ಕಾರ್ಡ್ ನಲ್ಲಿರುವಂತೆಯೇ ಮೊದಲ ಹಾಗು ಕೊನೆಯ ಹೆಸರು ಇರಬೇಕು ಎಂದು ಫೇಸ್ ಬುಕ್ ತಿಳಿಸಿರುವುದು ಸ್ಕ್ರೀನ್ ಶಾಟ್ ನಲ್ಲಿತ್ತು.
ಇಂತಹ ಫೀಚರನ್ನು ಪರೀಕ್ಷಿಸಸುತ್ತಿರುವುದರ ಬಗ್ಗೆ ಫೇಸ್ ಬುಕ್ ದೃಢಪಡಿಸಿದೆ. “ಫೇಸ್ ಬುಕ್ ನಲ್ಲಿರುವಂತೆಯೇ ಜನರು ತಮ್ಮ ಹೆಸರನ್ನು ಬಳಸುತ್ತಿದ್ದಾರೆಯೇ ಎಂಬುದನ್ನು ನಾವು ಬಯಸಿದ್ದೇವೆ. ಈ ಮೂಲಕ ಗೆಳೆಯರ ಹಾಗು ಕುಟುಂಬದವರನ್ನು ತಲುಪಲು ಸುಲಭವಾಗುತ್ತದೆ. ಇದು ಐಚ್ಛಿಕ ಹಾಗು ತಾತ್ಕಾಲಿಕ ಕ್ರಮವಾಗಿದೆ” ಎಂದು ಫೇಸ್ ಬುಕ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಮಾತ್ರ ಫೇಸ್ ಬುಕ್ ಕೇಳುತ್ತದೆಯೇ ಹೊರತು, ಆಧಾರ್ ನಂಬರನ್ನಲ್ಲ.