ಸರ್ಜಿಕಲ್ ದಾಳಿ ಬಳಿಕವೂ ಕಡಿಮೆಯಾಗಿಲ್ಲ ಭಾರತೀಯ ಸೈನಿಕರ ಸಾವು

Update: 2017-12-28 06:11 GMT

 ನರೇಂದ್ರ ಮೋದಿ ಸರಕಾರ ಗಡಿನಿಯಂತ್ರಣ ರೇಖೆಯಿಂದಾಚೆ ಕಳೆದ ವರ್ಷ ನಡೆಸಿದ ಸರ್ಜಿಕಲ್ ದಾಳಿಯಿಂದಾಗಿ ಭಾರೀ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಇದ್ದ ಭಾವನೆ ಈಗ ಬದಲಾಗಿದೆ. ಈ ದಾಳಿಯ ಮುಖ್ಯ ಉದ್ದೇಶ ತಮ್ಮ ಬಲಪ್ರದರ್ಶನದ ಮೂಲಕ ಗಡಿಭಾಗ ಹಾಗೂ ಕಣಿವೆಯಲ್ಲಿ ಬಂದೂಕುಗಳ ಸದ್ದಡಗಿಸುವುದು ಎಂದಾಗಿದ್ದರೆ, ಆ ಉದ್ದೇಶ ಈಡೇರಲಿಲ್ಲ ಎನ್ನಲೇಬೇಕಾಗುತ್ತದೆ. ಆ ದಾಳಿಯ ಯಶಸ್ಸನ್ನು ಹುತಾತ್ಮರಾದ ಸೈನಿಕರ ದೇಹದ ಸಂಖ್ಯೆಯಲ್ಲಿ ಅಳೆಯುವುದಾದರೆ ಖಂಡಿತವಾಗಿಯೂ ಪರಿಸ್ಥಿತಿ ಚಿಂತಾಜನಕವಾಗಿದೆ.

ಡಿಸೆಂಬರ್ 23ರಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟರು. ರಾಜ್ಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪಾಲಿಗೆ ಕರಾಳ ಎನಿಸಿರುವ ಘಟನೆ ಈ ವರ್ಷದ ಕೊನೆಯಾಗುವಾಗ ಮತ್ತೆ ನಡೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಯುದ್ಧವಿರಾಮ ಉಲ್ಲಂಘನೆಯ ಘಟನೆಯಿಂದಾಗಿ, ಉಗ್ರಗಾಮಿಗಳ ದಾಳಿ ಮತ್ತು ಕಾಶ್ಮೀರ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಈಗಾಗಲೇ ಸಾಕಷ್ಟು ಸಾವು ನೋವು ಸಂಭವಿಸಿದೆ.
ನರೇಂದ್ರ ಮೋದಿ ಸರಕಾರ ಗಡಿನಿಯಂತ್ರಣ ರೇಖೆಯಿಂದಾಚೆ ಕಳೆದ ವರ್ಷ ನಡೆಸಿದ ಸರ್ಜಿಕಲ್ ದಾಳಿಯಿಂದಾಗಿ ಭಾರೀ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಇದ್ದ ಭಾವನೆ ಈಗ ಬದಲಾಗಿದೆ. ಈ ದಾಳಿಯ ಮುಖ್ಯ ಉದ್ದೇಶ ತಮ್ಮ ಬಲಪ್ರದರ್ಶನದ ಮೂಲಕ ಗಡಿಭಾಗ ಹಾಗೂ ಕಣಿವೆಯಲ್ಲಿ ಬಂದೂಕುಗಳ ಸದ್ದಡಗಿಸುವುದು ಎಂದಾಗಿದ್ದರೆ, ಆ ಉದ್ದೇಶ ಈಡೇರಲಿಲ್ಲ ಎನ್ನಲೇಬೇಕಾಗುತ್ತದೆ. ಆ ದಾಳಿಯ ಯಶಸ್ಸನ್ನು ಹುತಾತ್ಮರಾದ ಸೈನಿಕರ ದೇಹದ ಸಂಖ್ಯೆಯಲ್ಲಿ ಅಳೆಯುವುದಾದರೆ ಖಂಡಿತವಾಗಿಯೂ ಪರಿಸ್ಥಿತಿ ಚಿಂತಾಜನಕವಾಗಿದೆ.
 
ಮನಕಲಕುವ ಅಂಕಿಅಂಶ

2016ರ ಸೆಪ್ಟಂಬರ್ 28-29ರ ರಾತ್ರಿ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿಮಾಡಲು ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಟಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 90 ಮಂದಿ ಭದ್ರತಾ ಪಡೆ ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ. ದಕ್ಷಿಣ ಏಶ್ಯಾ ಉಗ್ರಗಾಮಿ ಪೋರ್ಟಲ್ ಕ್ರೋಡೀಕರಿಸಿದ ಅಂಕಿ ಸಂಖ್ಯೆಗಳ ಪ್ರಕಾರ, ದಾಳಿ ನಡೆದ ಐದು ತಿಂಗಳಲ್ಲಿ ನಡೆದ ಕದನ ವಿರಾಮ ಉಲ್ಲಂಘನೆಯ 16 ಪ್ರಕರಣಗಳಲ್ಲಿ 30 ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ.
ದಾಳಿ ನಡೆದು ಒಂದು ವರ್ಷದ ಬಳಿಕ ಭಯೋತ್ಪಾದಕ ಸಂಬಂಧಿ ಚಟುವಟಿಕೆಗಳಲ್ಲಿ ಸಂಭವಿಸಿದ ಸಾವು ನೋವು ಶೇ. 31ರಷ್ಟು ಹೆಚ್ಚಿದೆ. ಕದನ ವಿರಾಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಏಶ್ಯಾ ಭಯೋತ್ಪಾದನೆ ಪೋರ್ಟಲ್‌ನ ಅಂಕಿ ಅಂಶಗಳಿಂದ ತಿಳಿದುಬರುವಂತೆ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ 2016ರಲ್ಲಿ 105 ಘಟನೆಗಳು ಸಂಭವಿಸಿವೆ. ಇದರಲ್ಲಿ 13 ಮಂದಿ ಭದ್ರತಾ ಸಿಬ್ಬಂದಿ ಮತ್ತು 15 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. 2017ರ ಡಿಸೆಂಬರ್ 17ರವರೆಗೆ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ 228 ಕದನ ವಿರಾಮ ಉಲ್ಲಂಘನೆ ಘಟನೆಗಳು ನಡೆದಿದ್ದು, 14 ಮಂದಿ ನಾಗರಿಕರು ಹಾಗೂ 23 ಮಂದಿ ಭದ್ರತಾ ಪಡೆ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
 ದಾಳಿ ನಡೆದ ಒಂದು ವರ್ಷದ ಬಳಿಕವೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ‘‘ಇನ್ನೊಂದು ಬದಿಗೆ ನಾವು ಸಂದೇಶ ರವಾನಿಸಿದ್ದೇವೆ’’ ಎಂದು ಹೇಳಿಕೊಂಡಿದ್ದರು. ಆದರೆ ಪರಿಸ್ಥಿತಿ ನೋಡಿದರೆ ಹಿಂಸಾಚಾರಕ್ಕೆ ಇದು ಮುಕ್ತ ಕಾಲ ಎಂಬ ಸಂದೇಶ ಮಾತ್ರ ವಿರೋಧಿ ಪಡೆಗೆ ತಲುಪಿದೆ ಎಂಬಂತೆ ಕಾಣುತ್ತಿದೆ.

ಸರ್ಜಿಕಲ್ ದಾಳಿ

ಉರಿ ಸೇನಾ ನೆಲೆಯ ಮೇಲೆ 2016ರ ಸೆಪ್ಟಂಬರ್ 18ರಂದು ನಡೆದ ದಾಳಿಯಲ್ಲಿ 19 ಸೈನಿಕರು ಮೃತಪಟ್ಟಿದ್ದು, ಇದಕ್ಕೆ ಪ್ರತೀಕಾರವಾಗಿ ಅದೇ ತಿಂಗಳು ಸರ್ಜಿಕಲ್ ದಾಳಿಯನ್ನು ಕೈಗೊಳ್ಳಲಾಯಿತು. ಇದು ಮೋದಿ ಸರಕಾರದ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಣವಾಯಿತು. ಕಾಶ್ಮೀರ ಮತ್ತು ಪಾಕಿಸ್ತಾನದ ಜತೆ ಹೊಂದಿದ್ದ ಗಡಿಯಾಚೆಗಿನ ಸಂಬಂಧದ ಬಗ್ಗೆ ಮತ್ತಷ್ಟು ಕಟು ನಿರ್ಧಾರಗಳನ್ನು ಕೈಗೊಳ್ಳಲುಕಾರಣವಾಯಿತು. ಉರಿ ದಾಳಿಯಿಂದಾಗಿ ಅಸಹನೆ ಮತ್ತಷ್ಟು ಹೆಚ್ಚಿತು. ದಶಕಗಳ ಕಾಲದಿಂದ ಭಾರತ ಅನುಸರಿಸಿಕೊಂಡು ಬಂದ ಪ್ರಮುಖ ಹತೋಟಿ ಕ್ರಮದ ಸಿದ್ಧಾಂತ ಬದಲಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಣವಾಯಿತು.

ಹಲವು ಕಾರಣಗಳಿಗಾಗಿ ಭಾರತೀಯ ಪಡೆಗಳು ಗಡಿನಿಯಂತ್ರಣ ರೇಖೆಯನ್ನು ದಾಟಿ ಇದಕ್ಕೂ ಮುನ್ನ ಕನಿಷ್ಠ ಒಂಬತ್ತು ಬಾರಿ ದಾಳಿ ಮಾಡಿದ್ದವು. ಇದರ ಏಕೈಕ ಭಿನ್ನತೆ ಎಂದರೆ, ಹಿಂದೆ ಗುಪ್ತವಾಗಿ ನಡೆಯುತ್ತಿದ್ದ ಮಿಲಿಟರಿ ಕಾರ್ಯಾಚರಣೆಗಳಿಗೆ ಈ ಬಾರಿ ವ್ಯಾಪಕ ಪ್ರಚಾರ ನೀಡಲಾಯಿತು. ಹೊಸ ಶಕ್ತಿ ಪ್ರದರ್ಶನ ನೀತಿಯ ಅಂಗವಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಯಿತು. 2003ರಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರ ಪ್ರಕಾರ ಗಡಿಭಾಗದಲ್ಲಿ ಶಾಂತಿಯನ್ನು ಕಾಪಾಡಬೇಕು. ಆದರೆ ಇದು ಈಗ ಸಂಪೂರ್ಣವಾಗಿ ಅಪ್ರಸ್ತುತ ಎನಿಸಿಕೊಂಡಿದೆ. ಈ ಬೆಳವಣಿಗೆ ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವಂಥದ್ದು ಎಂದು ತಜ್ಞರು ಅಂದಾಜು ಮಾಡುತ್ತಾರೆ.

ಅವರ ಊಹೆ ಸರಿಯಾಗಿದೆ. ಸರ್ಜಿಕಲ್ ದಾಳಿಯ ಬಳಿಕ ಬಹುಶಃ ಪ್ರತಿದಿನ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ. ಭಾರತೀಯ ಸೈನಿಕರ ಶಿರಚ್ಛೇದ, ಸೇನಾ ಶಿಬಿರಗಳ ಮೇಲೆ ಪದೇಪದೇ ದಾಳಿಯಂಥ ಘಟನೆಗಳು ಹೆಚ್ಚುತ್ತಿವೆ. ಸರ್ಜಿಕಲ್ ದಾಳಿ ನಡೆದ ಕೆಲವೇ ದಿನಗಳಲ್ಲಿ ಮತ್ತೆ ದಾಳಿಯಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮತ್ತೊಂದು ದಾಳಿ ನಡೆಸುವ ಪ್ರಯತ್ನ ಮಾಡಲಾಗಿದೆ. ಎರಡು ತಿಂಗಳ ಬಳಿಕ ಮತ್ತೆ ದಾಳಿ ನಡೆದಿದೆ. ಈ ಬಾರಿ ಜಮ್ಮು ಬಳಿಯ ನಗ್ರೋತಾ ಶಿಬಿರದ ಮೇಲೆ ದಾಳಿ ಮಾಡಿ ಏಳು ಸೈನಿಕರನ್ನು ಹತ್ಯೆ ಮಾಡಲಾಗಿದೆ. ಗಡಿನಿಯಂತ್ರಣ ರೇಖೆಯುದ್ದಕ್ಕೂ ಗಡಿ ನುಸುಳುವಿಕೆ ಮುಂದುವರಿದಿದ್ದು, ಸ್ಥಳೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿದ್ದಾರೆ.

 ಒಟ್ಟಾರೆಯಾಗಿ ಕಾಶ್ಮೀರ ಬಗೆಗಿನ ಮೋದಿ ಸರಕಾರದ ಬಲಪ್ರಯೋಗ ನೀತಿ ಭಾರತಕ್ಕೆ ಮಾರಕವಾಗಿ ಪರಿಣಮಿಸಿದೆ. ಮೋದಿ ಸರಕಾರದ ಮೊದಲ ಮೂರು ವರ್ಷಗಳಲ್ಲಿ ಭದ್ರತಾ ಪಡೆಯಲ್ಲಿ ಆಗಿರುವ ಸಾವು ನೋವಿನ ಪ್ರಮಾಣದಲ್ಲಿ ಯುಪಿಎ ಸರಕಾರದ ಆಡಳಿತಾವಧಿಯ ಕೊನೆಯ ಮೂರು ವರ್ಷಗಳಲ್ಲಿ ಆದ ಸಾವಿನ ಪ್ರಮಾಣಕ್ಕಿಂತ ಶೇ. 72ರಷ್ಟು ಹೆಚ್ಚಳ ಕಂಡುಬಂದಿದೆ. ಸಂವಾದ ಮಾರ್ಗ ಹಾಗೂ ಸಂಧಾನದ ಬಾಗಿಲು ಮುಚ್ಚಿ ಹೋಗಿದೆ. ರಾಜಕೀಯ ಮತ್ತು ಭದ್ರತಾ ಪಡೆಗಳಿಗೆ ದೊಡ್ಡದಾಗಿ ದಾಳಿಯ ಬಗ್ಗೆ ಮಾತನಾಡುವುದಕ್ಕಿಂತ ಭಿನ್ನ ಮಾರ್ಗವಿಲ್ಲ.

ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಹತ್ಯೆಗೀಡಾದ ಭಯೋತ್ಪಾದಕರ ಸಂಖ್ಯೆ ಏಳು ವರ್ಷಗಳಲ್ಲೇ ಮೊದಲ ಬಾರಿಗೆ 200ನ್ನು ತಲುಪಿದೆ. ಇದು ಯಶಸ್ಸು ಎಂದು ಬಿಂಬಿಸಲಾದ ಕಥೆಯ ಕರಾಳ ಮುಖವನ್ನು ಪರಿಚಯಿಸುತ್ತದೆ. ಆದರೆ ಸರಕಾರ, ಸೇನೆ ಮತ್ತು ಪೊಲೀಸರು ಪ್ರತಿಪಾದಿಸುತ್ತಿರುವ ಯಶಸ್ಸಿನ ಕಥೆ, ತಮ್ಮದೇ ಸಿಬ್ಬಂದಿಯ ರಕ್ತದಲ್ಲಿ ಬರೆದಂಥದ್ದು.

ಕೃಪೆ: scroll.in

Writer - ಇಪ್ಸಿತಾ ಚಕ್ರವರ್ತಿ

contributor

Editor - ಇಪ್ಸಿತಾ ಚಕ್ರವರ್ತಿ

contributor

Similar News

ಜಗದಗಲ
ಜಗ ದಗಲ