ಬೊಳುವಾರು ಬದುಕು-ಬರಹ-ವ್ಯಕ್ತಿತ್ವ

Update: 2017-12-29 18:34 GMT

ನವಕರ್ನಾಟಕ ಸಾಹಿತ್ಯ ಸಂಪದ ಪುಸ್ತಕ ಮಾಲೆಯಲ್ಲಿ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದೆ. ಡಾ. ಪ್ರಧಾನ್ ಗುರುದತ್ತ ಈ ಸರಣಿಯ ಸಂಪಾದಕರಾಗಿದ್ದಾರೆ. ಈ ಬಾರಿ ಬೊಳುವಾರು ಮಹಮದ್ ಕುಂಞಿ ಅವರ ಕುರಿತಂತೆ ಪ್ರೊ. ಟಿ.ಪಿ. ಅಶೋಕ್ ಅವರು ಬರೆದಿದ್ದಾರೆ. ಬೊಳುವಾರು ಕನ್ನಡ ಬರಹಗಾರರಾಗಿ ಹಲವು ವಿಷಯಗಳಲ್ಲಿ ಪ್ರಥಮರು. ಕೇಂದ್ರ ಸಾಹಿತ್ಯ ಅಕಾಡಮಿಯ ಇತಿಹಾಸದಲ್ಲಿ ತಮ್ಮ ಸೃಜನಶೀಲ ಗದ್ಯ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದಿರುವ ಸಾಹಿತಿ ಇವರು. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಮೊದಲಿಗರೂ ಇವರೇ. ಮಾತ್ರವಲ್ಲ, ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಪರಿಚಯಿಸಿದ ಮೊತ್ತ ಮೊದಲಿಗರೂ ಇವರೇ.

 ಬೊಳುವಾರು ವ್ಯಕ್ತಿತ್ವವನ್ನು ಅಶೋಕ್ ಅವರು ಬೇರೆ ಬೇರೆ ನೆಲೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಬೊಳುವಾರು ಅವರ ಬದುಕನ್ನು ಇಟ್ಟು ಗ್ರಹಿಸಿರುವ ಕ್ರಮ ಒಂದಾದರೆ, ಬೊಳುವಾರು ಕೃತಿಗಳ ಮೂಲಕ ಬೊಳುವಾರು ವ್ಯಕ್ತಿತ್ವವನ್ನು ಗ್ರಹಿಸಿರುವ ಕ್ರಮ ಇನ್ನೊಂದು. ಬೊಳುವಾರು ಅವರ ಸಾಹಿತ್ಯವನ್ನು ಇನ್ನಷ್ಟು ಹತ್ತಿರವಾಗಿಸುವಲ್ಲಿ, ಈ ಕೃತಿ ಸಹೃದಯರಿಗೆ ನೆರವಾಗುತ್ತದೆ. ಇಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಒಂದು ಬೊಳುವಾರು ಅವರ ಬದುಕಿಗೆ ಸಂಬಂಧಪಟ್ಟಿರುವುದು. ಬೊಳುವಾರು ಬೆಳೆದ ಪರಿಸರ, ಅವರ ಬಾಲ್ಯ, ಯೌವನ ಮತ್ತು ಅವರನ್ನು ಬರಹಗಾರರಾಗಿ ರೂಪಿಸಲು ಕಾರಣವಾದ ಪುತ್ತೂರಿನ ಪರಿಸರದ ಪಕ್ಷಿನೋಟ ಇಲ್ಲಿದೆ. ಹಾಗೆಯೇ ಅವರು ಬರಹಗಾರನಾಗುವ ಹಂತವನ್ನೂ ಇಲ್ಲಿ ಕುತೂಹಲಕರವಾಗಿ ನಿರೂಪಿಸಲಾಗಿದೆ. ಬೊಳುವಾರು ಅವರು ಕತೆ ಬರೆಯಲು ಕಾರಣವಾದ ಒಂದು ಸಣ್ಣ ಘಟನೆ ಹಾಗೆಯೇ ಮುಂದೆ ಅವರು ಸಾಹಿತಿಯಾಗಿ ಬೆಳೆದ ರೀತಿ, ಅವರ ಮದುವೆ, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಅವರ ಅನುಭವ ಎಲ್ಲವನ್ನು ತುಂಬಾ ಲವಲವಿಕೆಯಿಂದ ಕಟ್ಟಿಕೊಡಲಾಗಿದೆ. ಎರಡನೆ ಅಧ್ಯಾಯ ಬರಹ. ಇಲ್ಲಿ ಸಣ್ಣಕತೆಗಳನ್ನೇ ಮುಖ್ಯವಾಗಿ ಆಯ್ದುಕೊಳ್ಳಲಾಗಿದೆ. ಅವುಗಳ ಹುಟ್ಟಿನ ಹಿನ್ನೆಲೆ, ಸಮಾಜ ಪ್ರತಿಕ್ರಿಯಿಸಿದ ರೀತಿ ಇತ್ಯಾದಿಗಳನ್ನೂ ಇಲ್ಲಿ ಹೇಳಲಾಗಿದೆ. ಜೊತೆಗೆ ಆ ಕತೆಗಳನ್ನು ಸಣ್ಣದಾಗಿ ವಿಶ್ಲೇಷಣೆ ಮಾಡುತ್ತಾ, ಅಲ್ಲಿ ಬೊಳುವಾರು ಅವರನ್ನು ಹಿಡಿದಿಡುವ ಪ್ರಯತ್ನ ನಡೆದಿದೆ. ಮೂರನೇ ಅಧ್ಯಾಯ ಕಾದಂಬರಿ ಲೋಕದಲ್ಲಿ ಅವರ ಮಹಾಕಾದಂಬರಿ ಸ್ವಾತಂತ್ರದ ಓಟ ಹಾಗೆಯೇ ಓದಿರಿ, ಜಿಹಾದ್ ಕೃತಿಗಳನ್ನು ಮುಖ್ಯವಾಗಿ ಚರ್ಚಿಸಲಾಗಿದೆ. ಮೂಲತಃ ಮಗುವಿನ ಮನಸ್ಸಿನವರಾಗಿರುವ ಬೊಳುವಾರರ ‘ಮಕ್ಕಳ ಸಾಹಿತ್ಯ’ದ ಅಧ್ಯಾಯವೂ ಆಸಕ್ತಿಕರ ವಾಗಿದೆ. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಮತ್ತು ಗಾಂಧಿಯ ಕುರಿತಂತೆ ಬರೆದಿರುವ ಅವರ ಕಿರು ಕೃತಿಯನ್ನು ಇಟ್ಟುಕೊಂಡು ಅವರ ಸೃಜನಶೀಲ ಕಸುಬುದಾರಿಕೆಯ ಹಿರಿಮೆಯನ್ನು ಚರ್ಚಿಸಲಾಗಿದೆ. 108 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News