ಬಸವಣ್ಣ ಬಿಟ್ಟರೆ ತಮ್ಮ ಸಾಹಿತ್ಯದಲ್ಲಿ ನಿಷ್ಠುರವಾಗಿ ಬರೆಯುತ್ತಿದ್ದವರು ಕುವೆಂಪು: ಡಾ.ಎಸ್.ಜಿ.ಸಿದ್ಧರಾಮಯ್ಯ

Update: 2017-12-31 15:31 GMT

ಮೈಸೂರು, ಡಿ. 31: ಬಸವಣ್ಣ ಬಿಟ್ಟರೆ, ನಿಷ್ಠುರವಾಗಿ ಆತ್ಮಕ್ಕೆ ಒಳವು ಮಾಡಿಕೊಂಡು ತಮ್ಮ ಸಾಹಿತ್ಯದಲ್ಲಿ ಆತ್ಮ ವಿಮರ್ಶೆ ಮಾಡುತ್ತ ನಿಷ್ಠುರವಾಗಿ ಕುವೆಂಪು ಅವರು ಬರೆಯುತ್ತಿದ್ದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಿಸಿದರು.

ನಗರದ ಜಯಲಕ್ಷ್ಮಿಪುರಂನಲ್ಲಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‍ನಲ್ಲಿ ರವಿವಾರ ಶ್ರೀಕುವೆಂಪು ಟ್ರಸ್ಟ್ ಮತ್ತು ದೇಜಾಗೌ ಟ್ರಸ್ಟ್ ಸಂಯುಕ್ತವಾಗಿ ಕುವೆಂಪು ಅವರ 114ನೇ ಜಯಂತಿ ಮತ್ತು ವಿಶ್ವಮಾನವ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಸಾಮಾಜಿಕ ಹಾಗೂ ಸಮುದಾಯಿಕ ಚಿಂತನೆಗಳಿಗೆ ತಮ್ಮ ಬರೆವಣಿಗೆಯನ್ನು ಬಳಸಿಕೊಂಡಿದ್ದಾರೆ. ನವ್ಯ ಕೆಟ್ಟ ವಾತಾವರಣದ ಸಂದರ್ಭದಲ್ಲಿ ಕುವೆಂಪು ಕವಿ ಅಲ್ಲ ಎಂದು ಹೇಳುತ್ತಿದ್ದರು. ಅಂತಹವರ ಮುಂದೆ ತಮ್ಮ ಶಕ್ತಿ ತೋರಿಸಿ ಸಾಹಿತ್ಯದಲ್ಲಿ ಎತ್ತರೆತ್ತರಕ್ಕೆ ಬೆಳೆದು ನಿಂತರು ಎಂದರು. 

ಕುವೆಂಪು ಅವರ ಬದುಕನ್ನು ಜೀವಸಾರವಾಗಿ ನೋಡಿದ್ದಾರೆ.ಆದರೆ ಬೇರೆಯವರು  ಮನುಷ್ಯ ಕೇಂದ್ರವಾಗಿ ನೋಡಿದ್ದಾರೆ. ಶ್ರೀರಾಮಾಯಣ ದರ್ಶನಂ ಬರೆದಾಗ, ಕೆಲವರು ಪ್ರಬಂಧ ವಿಮರ್ಶೆ ಎಂದು ಹೇಳಿದರು.ಆದರೆ ಅದಕ್ಕೆಲ್ಲ ಮನಸ್ಸು ಕೊಡದ ಅವರು ತಮ್ಮ ಸಾಹಿತ್ಯ ಕ್ಷೇತ್ರವನ್ನು ಮುಂದುವರಿಸಿ,ಒಳ್ಳೆಯ ಹೆಸರು ಗಳಿಸಿದರು. ಮಲೆಗಳಲ್ಲಿ ಮದುಮಗಳು ಹಾಗೂ ಕಾನೂನು ಹೆಗ್ಗಡತಿ ಕಾದಂಬರಿಯ ಕೆಲವು ವಿಷಯಗಳನ್ನು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿ ಮಾತನಾಡಿದರು. 

ಶ್ರೀರಾಮಾಯಣ ದರ್ಶನಂನ ಬಗ್ಗೆ ಅಪಸ್ವರ ಬಂದಿತ್ತು.ಆದರೆ ಅಪಸ್ವರಗಳ ನಡುವೆ ತನ್ನ ಸಾಹಿತ್ಯ ಸಿರಿಯನ್ನು ಇದು ಉಳಿಸಿಕೊಂಡಿದೆ. ರಾಮಾಯಣ ಹಾಗೂ ಮಹಾಭಾರತವನ್ನು ವೈದಿಕ ಹಾಗೂ ಆರ್ಯರ ಧರ್ಮದ ದೃಷ್ಠಿಯಲ್ಲಿ ನೋಡಿಬೇಡಿ. ಇವೆರಡು ಕೃತಿಗಳಿಗೆ ಆಯಾಯ ಕಾಲಘಟ್ಟದಲ್ಲಿ ಬದಲಾವಣೆಯಾಗಿ, ಜನಸಾಮಾನ್ಯರಿಗೆ ಹತ್ತಿರವಾಗುವಂತೆ ರಚಿಸಲಾಗಿದೆ. ರಾಮಾಯಣ ದರ್ಶನಂನಲ್ಲಿ ಸೀತೆ ಅಗ್ನಿ ಪರೀಕ್ಷೆಯಾದರೆ, ಜಾನಪದ ರಾಮಾಯಣದಲ್ಲಿ ಸೀತೆ ಜಲಸಂಸ್ಕøತಿ ಪರೀಕ್ಷೆಯಿದೆ. ಎಲ್ಲ ಕಾಲಘಟ್ಟದಲ್ಲಿಯೂ ನಾಯಕ ಹಾಗೂ ಪ್ರತಿನಾಯಕನ ಪ್ರಶಂಸೆ ಇದೆ ಎಂದು ಹೇಳಿದರು.

ನಂತರ ಮಹಿಳಾ ಸಾಹಿತಿ ತಾರಿಣಿ ಚಿದಾನಂದ ಗೌಡ ಅವರಿಗೆ ವಿಶ್ವಮಾನವ ಪ್ರಶಸ್ತಿ, ಮಹಿಳಾ ಹಾಗೂ ರೈತ ಪರ ಹೋರಾಟಗಾರರಾದ  ಕೆ.,ಎಸ್.ನಂದಿನಿ ಜಯರಾಂ ಅವರಿಗೆ ಶ್ರೀಮತಿ ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ, ಪ್ರತಕರ್ತರಾ ಡಾ.ಎನ್.ಜಗದೀಶ್ ಕೊಪ್ಪ ಅವರಿಗೆ ದಿವಂಗತ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 
ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್‍ನ ಅಧ್ಯಕ್ಷ ಡಾ.ಜೆ.ಶಶಿಧರ ಪ್ರಸಾದ್, ಶ್ರೀಕುವೆಂಪು ವಿದ್ಯಾಪರಿಷತ್ತು ಅಧ್ಯಕ್ಷ ಡಾ.ಡಿ.ಕೆ.ರಾಜೇಂದ್ರ ಮತ್ತಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕುವೆಂಪು ಅವರು ಸಾಯುವವರೆಗೂ ವಿಶ್ವಮಾನವ ಸಂದೇಶವನ್ನು ಹೇಳುತ್ತಿದ್ದರು. ನನ್ನ ಸಾಹಿತ್ಯವನ್ನು ಮರೆತರು ಪರವಾಗಿಲ್ಲ.ಆದರೆ ವಿಶ್ವಮಾನವ ಸಂದೇಶವನ್ನು ಮರೆಯಬೇಡಿ ಎನ್ನುವುದು ಅವರ ಅಭಿಮತವಾಗಿತ್ತು.

-ತಾರಿಣಿ ಚಿದಾನಂದಗೌಡ, ಮಹಿಳಾ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News