ಮರೆಯಲಾಗದ ತ್ಯಾಗ, ಬದ್ಧತೆ

Update: 2024-10-21 06:02 GMT

ಭೂಪತಿ ಅವರು ನಮ್ಮ ನಡುವೆ ಇಲ್ಲ. ಆದರೆ ಅವರ ಆತ್ಮೀಯತೆ ಮತ್ತು ಪ್ರೀತಿ, ನಂಬಿದವರಿಗಾಗಿ ಎಂಥ ತ್ಯಾಗಕ್ಕೂ ಸಿದ್ಧವಿರುವ ಬದ್ಧತೆ ಇವುಗಳನ್ನೆಲ್ಲ ಮರೆಯಲು ಸಾಧ್ಯವಿಲ್ಲ. ಭೂಪತಿಯವರ ಅಗಲಿಕೆ ನಂತರವೂ ಡಾ.ವಸುಂಧರಾ ಮತ್ತು ಅವರ ಪುತ್ರರಾದ ಅಭಿಮನ್ಯು, ಸಿದ್ಧಾರ್ಥ ಕ್ರಿಯಾಶೀಲರಾಗಿ ಇದ್ದಾರೆಂದರೆ ಅದಕ್ಕೆ ಕಾರಣ ಕಣ್ಣೆದುರಿಗೆ ಇಲ್ಲದಿದ್ದರೂ ನಿತ್ಯವೂ ಸ್ಫೂರ್ತಿ ನೀಡುವ ಭೂಪತಿಯವರ ನೆನಪಿನ ಸೆಲೆಯಾಗಿದೆ.

ಯು.ಭೂಪತಿ ಅವರನ್ನು ನಾನು ಮೊದಲು ನೋಡಿದ್ದು 80ರ ದಶಕದಲ್ಲಿ. ಅಂದರೆ 1983ರ ನವೆಂಬರ್ ತಿಂಗಳಲ್ಲಿ. ಆಗ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎಐಟಿಯುಸಿ ರಾಷ್ಟ್ರೀಯ ಸಮ್ಮೇಳನಕ್ಕೆ ಅವರು ಬಳ್ಳಾರಿ ಪ್ರತಿನಿಧಿಯಾಗಿ ಬಂದಿದ್ದರು. ನಾನು ಹುಬ್ಬಳ್ಳಿಯಿಂದ ಬಂದಿದ್ದೆ. ಆಗ ಪರಿಚಯವಾಗಿ ಕೆಲ ನಿಮಿಷ ಮಾತನಾಡಿದೆವು. ಅದನ್ನು ಬಿಟ್ಟರೆ, ಅವರ ನಿಕಟ ಒಡನಾಟ ಸಾಧ್ಯವಾಗಿದ್ದು 1985ರಲ್ಲಿ. ಅವರು ಸೊಂಡೂರಿನ ಕಮ್ಯುನಿಸ್ಟ್ ಶಾಸಕರಾಗಿ ವಿಧಾನಸಭೆಗೆ ಬಂದಿದ್ದರು. ಆಗ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ನಾನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗವಾಗಿ ಬಂದಿದ್ದೆ. ಆಗ ಶಾಸಕರ ಭವನದಲ್ಲಿ ನಾನು ಪಂಪಾಪತಿ ಮತ್ತು ಕೆ.ಬಿ.ಶಾಣಪ್ಪಅವರ ಕೊಠಡಿಗಳಲ್ಲಿ ತಾತ್ಕಾಲಿಕ ವಾಸ್ತವ್ಯ ಮಾಡಿದ್ದೆ. ಭೂಪತಿಯವರಿಗೆ ನಮ್ಮ ಪಕ್ಕದ ಕೊಠಡಿ ದೊರಕಿತ್ತು. ಹೀಗಾಗಿ ನಿತ್ಯವೂ ಅವರ ಒಡನಾಟದ ಅವಕಾಶ ಸಿಕ್ಕಿತು. ಅತ್ಯಂತ ಚಿಕ್ಕವಯಸ್ಸಿನಲ್ಲಿ ಶಾಸಕರಾಗಿ ಗೆದ್ದು ಬಂದ ಭೂಪತಿಯವರು ತಮ್ಮ ಕುಟುಂಬ ಸಮೇತ ಬಂದು ಶಾಸಕರ ಭವನದಲ್ಲಿ ತಂಗಿದ್ದರು. ಆಗ ಅವರೊಂದಿಗೆ ಮಾತನಾಡುವ, ಚರ್ಚಿಸುವ ಅವಕಾಶದಿಂದ ಅವರಲ್ಲಿ ಇರುವ ಸಾಹಿತ್ಯ, ಕಲೆ ಮತ್ತು ಸಂಗೀತದ ಆಸಕ್ತಿ ಬಗ್ಗೆ ನನಗೆ ತಿಳಿಯಿತು.

ಭೂಪತಿಯವರು ಶಾಸಕರಾಗಿದ್ದಾಗ ನಾನು ಶಾಸನ ಸಭೆಯ ಕಲಾಪಗಳನ್ನು ವರದಿ ಮಾಡಲು ಹೋಗುತ್ತಿದ್ದೆ. ಆಗ ಮೊದಲ ಬಾರಿ ಶಾಸಕರಾಗಿ ಬಂದ ಭೂಪತಿಯವರು ಆಡುತ್ತಿದ್ದ ವಿದ್ವತ್‌ಪೂರ್ಣ ಮಾತುಗಳನ್ನು ಕೇಳಿ, ನಾವು ಪತ್ರಕರ್ತರು ಮಾತ್ರವಲ್ಲ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಪ್ರತಿಪಕ್ಷದ ನಾಯಕ ಬಂಗಾರಪ್ಪಅವರು ಅಚ್ಚರಿಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ 30ರೊಳಗಿನ ಭೂಪತಿಯವರು ನುರಿತ ಸಂಸದೀಯ ಪಟುಗಳಂತೆ ಅಂಕಿ ಸಂಖ್ಯೆಗಳ ಸಮೇತ ತಮ್ಮ ವಿಚಾರ ಮಂಡಿಸುತ್ತಿದ್ದರು.
ಸದನಕ್ಕೆ ಬರುವ ಮೊದಲು ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಬರುತ್ತಿದ್ದ ಭೂಪತಿ ಅವರಲ್ಲಿ ಅತ್ಯಂತ ಸಹಜವಾದ ವಾಕ್‌ಚಾತುರ್ಯ ಮೈಗೂಡಿತ್ತು. ಎಂಥ ಕ್ಲಿಷ್ಟ ವಿಷಯಗಳನ್ನಾದರೂ ಅವರು ಅತ್ಯಂತ ಸರಳವಾಗಿ ಇಡೀ ಸದನವೇ ಒಪ್ಪಿ, ತಲೆದೂಗುವಂತೆ ಪ್ರತಿಪಾದಿಸುತ್ತಿದ್ದರು. ನಡುನಡುವೆ ಹಾಸ್ಯ ಚಟಾಕಿ ಹಾರಿಸುತ್ತಿದ್ದರು.
ಕಡು ಬಡತನದ ಹಿನ್ನೆಲೆಯ, ಜೇಬಿನಲ್ಲಿ 10 ರೂಪಾಯಿ ಇಲ್ಲದೆ ಭೂಪತಿ ಅವರು ಶಾಸನ ಸಭೆಗೆ ಗೆದ್ದು ಬಂದಿರುವುದು ಪವಾಡವೆಂದೇ ಕರೆಯಬೇಕು. ಸೊಂಡೂರಿನಿಂದ ಸಿಪಿಐ ನಾಯಕರು ಚುನಾವಣೆಗೆ ತಮ್ಮ ಅಭ್ಯರ್ಥಿಯೆಂದು ಆರಿಸಿದಾಗ, ಬಳ್ಳಾರಿಯಲ್ಲಿ ಭೂಪತಿಯವರು ಸೈಕಲ್‌ನಲ್ಲಿ ಓಡಾಡುತ್ತಿದ್ದರು. ನಾಮಪತ್ರ ಸಲ್ಲಿಸಲು ಅವರ ಬಳಿ ಹಣವಿರಲಿಲ್ಲ. ಕೆಲ ಸ್ನೇಹಿತರು ಹಣ ಸಂಗ್ರಹಿಸಿ, ನಾಮಪತ್ರ ಸಲ್ಲಿಸುವಂತೆ ಮಾಡಿದರು. ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಪ್ರಚಾರ ಮಾಡಲು ವಾಹನ ಇರಲಿಲ್ಲ. ಕೆಲವೆಡೆ ಸೈಕಲ್ ಮೇಲೆ ಓಡಾಡಿ, ಪ್ರಚಾರ ಮಾಡಿದರು. ಆದರೂ ಸೊಂಡೂರಿನ ಜನ ಅವರನ್ನು ಕೈಬಿಡಲಿಲ್ಲ. ಆ ಬಾರಿ ಮಾಜಿ ಸಚಿವ ಎಂ.ವೈ.ಘೋರ್ಪಡೆಯವರಿಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದಾಗಿ ಘೋರ್ಪಡೆ ಅವರನ್ನು ಆಯ್ಕೆ ಮಾಡುತ್ತಿದ್ದ ಜನರು ಕಾಂಗ್ರೆಸ್ ತಿರಸ್ಕರಿಸಿ, ಭೂಪತಿ ಅವರನ್ನು ಆಯ್ಕೆ ಮಾಡಿದರು.
ಭಾರತ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಯೋಜಿತ ಎಐಎಸ್‌ಎಫ್ ವಿದ್ಯಾರ್ಥಿ ಸಂಘಟನೆಯಲ್ಲಿ ಬೆಳೆದು ಬಂದ ಭೂಪತಿ ಅವರು ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. 1970ರ ದಶಕದ ಕೊನೆಯಲ್ಲಿ ಸಮುದಾಯ ಸಂಘಟನೆ ಕಟ್ಟಲು ಬಳ್ಳಾರಿ ಜಿಲ್ಲೆಗೆ ಬಂದಿದ್ದ ಸಿಜಿಕೆ ಅವರು ಭೂಪತಿ ಅವರ ಪ್ರತಿಭೆ ಗುರುತಿಸಿ, ತಮ್ಮ ತಂಡದಲ್ಲಿ ಸೇರಿಸಿಕೊಂಡರು. ಭೂಪತಿ ಅವರು ಶಾಸಕರಾಗಿದ್ದಾಗ, ಒಮ್ಮೆ ಶಾಸಕರ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಗ ಭೂಪತಿಯವರು ಹಿರಿಯ ಕಮ್ಯುನಿಸ್ಟ್ ನಾಯಕ ಎಂ.ಎಸ್.ಕೃಷ್ಣನ್ ಜೊತೆಗೂಡಿ ಹಾಡಿದ ಓ ತಾಯಿ ಓಸ್ಲೋವಾ ಎಂಬ ‘ತಾಯಿ’ ನಾಟಕದ ಹಾಡು ಸಭಿಕರ ಗಮನ ಸೆಳೆಯಿತು. ಬಂಗಾರಪ್ಪ ಅವರು ಅದನ್ನು ತುಂಬಾ ಮೆಚ್ಚಿಕೊಂಡು ಮಾತನಾಡಿದರು.
ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಪ್ರಚಲಿತದಲ್ಲಿದೆ. ಭೂಪತಿಯವರ ಯಶಸ್ಸಿನ ಹಿಂದೆ ಅವರ ಪತ್ನಿ ಡಾ.ವಸುಂಧರಾ ಭೂಪತಿಯವರ ಕೊಡುಗೆಯೂ ಸಾಕಷ್ಟಿದೆ. ಇವರಿಬ್ಬರ ದಾಂಪತ್ಯದಲ್ಲಿ ಈ ಮಾತು ಇಬ್ಬರಿಗೂ ಅನ್ವಯವಾಗುತ್ತದೆ. ಪ್ರತಿಯೊಬ್ಬ ಮಹಿಳೆಯ ಸಾಧನೆ ಹಿಂದೆ ಒಬ್ಬ ಪುರುಷನೂ ಇರುತ್ತಾನೆ ಎಂಬುದಕ್ಕೆ ಇವರ ದಾಂಪತ್ಯ ಸಾಕ್ಷಿಯಾಗಿದೆ. ಡಾ.ವಸುಂಧರಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದಿರುವುದಕ್ಕೆ ಮತ್ತು ಸಾರ್ವಜನಿಕ ರಂಗದ ವ್ಯಕ್ತಿತ್ವದ ಹಿಂದೆ ಭೂಪತಿಯವರ ಕೊಡುಗೆ ಸಾಕಷ್ಟು ಇದೆ.
ಬೆಂಗಳೂರಿನಲ್ಲಿ ಯಾವುದೇ ಸಭೆ, ಸಮಾರಂಭ ಮತ್ತು ಪ್ರತಿಭಟನೆಯಿದ್ದರೂ ಕೂಡ ಈ ದಂಪತಿ ಅಲ್ಲಿ ಪ್ರತ್ಯಕ್ಷರಾಗು ತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿದ್ದರೂ ಕೂಡ ಭೂಪತಿ ಅವರು ಎಡಪಂಥೀಯ ವಿಚಾರಗಳೊಂದಿಗೆ ಗುರುತಿಸಿಕೊಂಡಿದ್ದರು. ಹೀಗಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ಇಲ್ಲವೇ ಯಾವುದೇ ಜನಪರ ಬೇಡಿಕೆಗಳಿಗಾಗಿ ಸಭೆ, ಸಮಾರಂಭ ನಡೆದರೂ ತಾವೇ ವಾಹನ ಚಾಲನೆ ಮಾಡುತ್ತಾ, ವಸುಂಧರಾ ಜೊತೆ ಬರುತ್ತಿದ್ದರು.
ಭೂಪತಿ ಮತ್ತು ವಸುಂಧರಾ ಅವರು ಮದುವೆಯಾದ ಘಟನೆ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆಗ ಶಾಸಕರ ಭವನದಲ್ಲಿ ನಾನು, ಭೂಪತಿ ಒಟ್ಟಿಗೆ ಇದ್ದಾಗ, ಒಂದು ದಿನ ಬೆಳಗಿನ ಜಾವ ಆರು ಗಂಟೆಗೆ ವಸುಂಧರಾ ಅವರು ಒಂದು ಸೂಟ್‌ಕೇಸ್ ಹಿಡಿದುಕೊಂಡು ರಾಯಚೂರಿನಿಂದ ಬೆಂಗಳೂರಿಗೆ ಬಂದೇಬಿಟ್ಟರು. ತುರ್ತಾಗಿ ಅವರಿಬ್ಬರ ಮದುವೆಯಾಗಬೇಕಿತ್ತು. ಆ ಸಂದರ್ಭದಲ್ಲಿ ನಾನು ಮತ್ತು ನಾಶೀಮಠ ಇವರಿಬ್ಬರನ್ನು ಕರೆದುಕೊಂಡು ಕಾಮ್ರೇಡ್ ಅನಂತ ಸುಬ್ಬರಾವ್ ಅವರ ಮನೆಗೆ ಹೋದೆವು. ಮದುವೆ ಬಗ್ಗೆ ಅವರೊಂದಿಗೆ ಮಾತನಾಡುತ್ತಿರುವಾಗಲೇ, ಆಗ ಶಾಸಕರಾಗಿದ್ದ ಪಂಪಾಪತಿಯವರಿಗೆ ಈ ವಿಷಯ ಗೊತ್ತಾಯಿತು. ತಕ್ಷಣ ಚಿತ್ರದುರ್ಗಕ್ಕೆ ಹೊರಟು ಬನ್ನಿ. ಅಲ್ಲಿ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನವಿದೆ. ಅಲ್ಲಿ ಮದುವೆ ಮಾಡೋಣ ಎಂದರು.
ನಂತರ ನಾವೆಲ್ಲ ಚಿತ್ರದುರ್ಗಕ್ಕೆ ಹೊರಟೆವು. ಅಲ್ಲಿ ನಡೆದಿದ್ದ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನದಲ್ಲಿ ಯಾವುದೇ ಮುಹೂರ್ತ, ವಿಧಿವಿಧಾನಗಳು ಇಲ್ಲದೆ ಭೂಪತಿ ಮತ್ತು ವಸುಂಧರಾ ಅವರ ಮದುವೆ ನಡೆಯಿತು. ಮದುವೆ ನಂತರ ಭೂಪತಿಯವರು ಬೆಂಗಳೂರಿನಲ್ಲೇ ಮನೆ ಮಾಡಿದರು. ವಸುಂಧರಾ ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದರು. ಆರಂಭದಲ್ಲಿ ಇವರ ಮದುವೆಗೆ ಕೊಂಚ ವಿರೋಧ ವ್ಯಕ್ತಪಡಿಸಿದ ವಸುಂಧರಾ ಮನೆಯವರು ನಂತರ ಭೂಪತಿ ಅವರು ತಮ್ಮ ಅಳಿಯ ಎಂದು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದರು. ಮದುವೆಯಾದ ನಂತರ ಎಷ್ಟೇ ಕಷ್ಟ, ಸುಖ ಬರಲಿ ಅದನ್ನು ಇವರಿಬ್ಬರೂ ಒಟ್ಟಾಗಿ ಎದುರಿಸಿದರು. ಇವರ ಹಾಲುಜೇನಿನಂತಹ ದಾಂಪತ್ಯ ಅಬಾಧಿತವಾಗಿತ್ತು.
ತಮ್ಮ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡ ಭೂಪತಿ ಅವರು ಕಳೆದ ವರ್ಷ ಗೋವಾ ವಿಧಾನಸಭೆ ಚುನಾವಣೆಗೆ ಹೋದಾಗ, ಹೃದಯಾಘಾತದಿಂದ ಕುಸಿದುಬಿದ್ದರೆಂದು ಸುದ್ದಿ ಕೇಳಿ ಎದೆ ದಸಕ್ಕೆಂದಿತು. ಅದು ಅವರ ಸಾಯುವ ವಯಸ್ಸಲ್ಲ. ಆದರೆ ತನ್ನನ್ನು ತಾನು ಮರೆತು ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ತೊಡಗಿಸಿ ಕೊಂಡಿದ್ದ ಭೂಪತಿ ಅವರು ಅವಿಶ್ರಾಂತವಾಗಿ ದುಡಿದು, ತುಂಬಾ ಆಯಾಸ ಮಾಡಿಕೊಂಡಿದ್ದರು. ಕಮ್ಯುನಿಸ್ಟ್ ಪಕ್ಷದಲ್ಲಿ ಕಲಿತ ಶಿಸ್ತು ಮತ್ತು ಬದ್ಧತೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಧಾರೆಯೆರೆದರು. ಕೊನೆಗೆ ಅದಕ್ಕಾಗಿ, ತಮ್ಮ ಪ್ರಾಣವನ್ನೇ ಕೊಟ್ಟರು.
ಭೂಪತಿ ಅವರು ನಮ್ಮ ನಡುವೆ ಇಲ್ಲ. ಆದರೆ ಅವರ ಆತ್ಮೀಯತೆ ಮತ್ತು ಪ್ರೀತಿ, ನಂಬಿದವರಿಗಾಗಿ ಎಂಥ ತ್ಯಾಗಕ್ಕೂ ಸಿದ್ಧವಿರುವ ಬದ್ಧತೆ ಇವುಗಳನ್ನೆಲ್ಲ ಮರೆಯಲು ಸಾಧ್ಯವಿಲ್ಲ. ಭೂಪತಿಯವರ ಅಗಲಿಕೆ ನಂತರವೂ ಡಾ.ವಸುಂಧರಾ ಮತ್ತು ಅವರ ಪುತ್ರರಾದ ಅಭಿಮನ್ಯು, ಸಿದ್ಧಾರ್ಥ ಕ್ರಿಯಾಶೀಲರಾಗಿ ಇದ್ದಾರೆಂದರೆ ಅದಕ್ಕೆ ಕಾರಣ ಕಣ್ಣೆದುರಿಗೆ ಇಲ್ಲದಿದ್ದರೂ ನಿತ್ಯವೂ ಸ್ಫೂರ್ತಿ ನೀಡುವ ಭೂಪತಿಯವರ ನೆನಪಿನ ಸೆಲೆಯಾಗಿದೆ.

Writer - ಸನತ್ ಕುಮಾರ, ಬೆಳಗಲಿ

contributor

Editor - ಸನತ್ ಕುಮಾರ, ಬೆಳಗಲಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News

ಜಗದಗಲ
ಜಗ ದಗಲ