ಜನರಿಕ್ ಔಷಧಿಗಳು: ಕೆಲವು ತಕರಾರುಗಳು
ಎಲ್ಲಾ ಭಿನ್ನಾಭಿಪ್ರಾಯಗಳನ್ನು ಜೊತೆಗಿಟ್ಟುಕೊಂಡೇ ಕೇಂದ್ರ ಸರಕಾರದ ಜನೌಷಧಿ ಮತ್ತು ರಾಜ್ಯ ಸರಕಾರದ ಜನಸಂಜೀವಿನಿ ಎಂಬ ಜನರಿಕ್ ಔಷಧಿ ಯೋಜನೆಯನ್ನು ಅತ್ಯುತ್ತಮ ಯೋಜನೆಗಳೆಂದು ಮುಕ್ತ ಮನಸ್ಸಿನಿಂದ ಒಪ್ಪಬಹುದಾಗಿದೆ.
ಸುಮಾರು ಏಳೆಂಟು ತಿಂಗಳ ಹಿಂದೆ ನಮ್ಮ ಪ್ರಧಾನಿ ಮೋದಿಯವರು ವೈದ್ಯರು ಕಡ್ಡಾಯವಾಗಿ ತಮ್ಮ ಔಷಧಿ ಚೀಟಿಯಲ್ಲಿ ಕೇವಲ ಜನರಿಕ್ ಹೆಸರುಗಳನ್ನೇ ಬರೆಯತಕ್ಕದ್ದು ಎಂಬ ಮಸೂದೆ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅದೇಕೋ ಕೇವಲ ಒಂದು ಹೇಳಿಕೆಗೆ ಮಾತ್ರ ಸೀಮಿತವಾಯಿತು.
ಇಂದಿಗೂ ಬಹುತೇಕ ವೈದ್ಯರು ತಮ್ಮ ಪ್ರಿಸ್ಕ್ರಿಪ್ಷನ್‌ನಲ್ಲಿ ಹಳೇ ಅಭ್ಯಾಸವನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ ಅರ್ಥಾತ್ ಔಷಧಿಗಳ ಬ್ರ್ಯಾಂಡ್ ನೇಮನ್ನೇ ಬರೆಯುತ್ತಾರೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ರೀತಿ ಔಷಧಿ ಗಳ ಬ್ರ್ಯಾಂಡ್ ನೇಮ್ ಬರೆಯುವ ಪದ್ಧತಿ ಇಲ್ಲವೆಂದು ವಿದೇಶಗಳಲ್ಲಿ ಕೆಲಸ ಮಾಡಿದ ಅನೇಕ ವೈದ್ಯ ಮಿತ್ರರು ಹೇಳಿದ್ದನ್ನು ಕೇಳಿದ್ದೇನೆ. ಅನೇಕ ವೈದ್ಯರು ಫಾರ್ಮಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮಗೆ ಆದಾಯ ನೀಡುವ ಕಂಪೆನಿಗಳ ಔಷಧಿಗಳನ್ನೇ ಬರೆಯುತ್ತಾರೆಂಬ ಆರೋಪವಿರುವುದರಿಂದಲೇ ಇಂತಹದ್ದೊಂದು ಪ್ರಸ್ತಾಪ ಹುಟ್ಟಲು ಮುಖ್ಯ ಕಾರಣ. ಹಾಗೆ ಯಾವುದೇ ಕಂಪೆನಿ ವೈದ್ಯರಿಗೆ ಲಾಭ ಅಥವಾ ಕಮಿಷನ್ ನೀಡುತ್ತದಾದರೆ ಆ ಕಂಪೆನಿಯು ಅದನ್ನು ಗ್ರಾಹಕನ ಮೇಲೆಯೇ ಹೇರುತ್ತದೆ ಅಥವಾ ಔಷಧಾಲಯದವರಿಗೆ ನೀಡುವ ಲಾಭ ಕಡಿಮೆ ಮಾಡಿ ಅದನ್ನು ತುಂಬಿಸುತ್ತದೆ.
ಒಂದು ವೇಳೆ ವೈದ್ಯರು ಜನರಿಕ್ ಹೆಸರುಗಳನ್ನೇ ಬರೆದರೂ ಇದರಿಂದ ವೈದ್ಯರ ಅಡ್ಡ ಆದಾಯಕ್ಕೆ ತಡೆ ಬೀಳಬಹುದೇನೋ ಸರಿ, ಆದರೆ ಇದರಿಂದ ಜನತೆಗೆ ಬಿಲ್ಲಿ ಕಾಸಿನ ಪ್ರಯೋಜನವೂ ಆಗದು. ಇದರ ಭರಪೂರ ಲಾಭ ಪಡೆಯುವವರು ಔಷಧಿ ವ್ಯಾಪಾರಿಗಳು. ಅದು ಹೇಗೆಂದು ನೋಡೋಣ.
ಉದಾಹರಣೆಗೆ: ವೈದ್ಯನೊಬ್ಬ Pantaprazole with Domperidone ಎಂಬ ಔಷಧಿಯನ್ನು ಬರೆಯುತ್ತಾನೆ. ಆಗ ಔಷಧಿ ವ್ಯಾಪಾರಿ ಸದ್ರಿ ದ್ರಾವಣವಿರುವ ಯಾವುದೇ ಔಷಧಿ ನೀಡಲು ಮುಕ್ತನಾಗು ತ್ತಾನೆ. ಒಂದು ವೇಳೆ ಬ್ರ್ಯಾಂಡ್ ನೇಮ್ ಬರೆದರೆ ಓದು ಬರಹ ಬಲ್ಲ ಗ್ರಾಹಕ ಅದನ್ನು ಓದಿದಾಗ ವ್ಯತ್ಯಾಸ ಕಂಡರೆ ಅದನ್ನು ಪ್ರಶ್ನಿಸುತ್ತಾನೆ. ಜನರಿಕ್ ಹೆಸರು ಬರೆದಾಗ ಅಂತಹ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಔಷಧಿ ವ್ಯಾಪಾರಿ ತನಗೆ ಯಾವುದರಿಂದ ಹೆಚ್ಚು ಲಾಭ ಸಿಗುತ್ತದೋ ಅದನ್ನೇ ಮಾರುತ್ತಾನೆ. ಓರ್ವ ವ್ಯಾಪಾರಿ ಆ ರೀತಿ ಯೋಚಿಸುವುದು ತಪ್ಪಲ್ಲ. ಆತ ವ್ಯಾಪಾರ ಮಾಡುವುದೇ ಅದಕ್ಕಾಗಿ. ನಿಜವಾದ ಸಮಸ್ಯೆ ಹುಟ್ಟುವುದೇ ಇಲ್ಲಿ. ನಾನು ಈ ಮೇಲೆ ಉಲ್ಲೇಖಿಸಿದ ಯಾವುದೇ ಬ್ರ್ಯಾಂಡ್‌ನ ಔಷಧಿಗೆ ಎಂಟರಿಂದ ಹತ್ತು ರೂಪಾಯಿ ಗರಿಷ್ಠ ಚಿಲ್ಲರೆ ದರ ಮುದ್ರಿತವಾಗಿರುತ್ತದೆ. ಹತ್ತು ರೂಪಾಯಿ ಬೆಲೆಯ ಯಾವುದೇ ಬ್ರ್ಯಾಂಡೆಡ್ ಔಷಧಿ ಮಾರಿದರೆ ಒಂದು ಮಾತ್ರೆಯಲ್ಲಿ ಹೆಚ್ಚೆಂದರೆ ಎರಡು ರೂಪಾಯಿ ಲಾಭ ದೊರೆಯುತ್ತದೆ. ಅದೇ ಔಷಧಿಯಿರುವ ಅನೇಕ ಜನರಿಕ್ ಮಾತ್ರೆಗಳು ರಖಂ ಮಾರುಕಟ್ಟೆಯಲ್ಲಿ ಮೂರರಿಂದ ಮೂರೂವರೆ ರೂಪಾಯಿಗೆ ದೊರಕುತ್ತದೆ. ಆದರೆ ಅದರ ಮುದ್ರಿತ ಗರಿಷ್ಠ ಚಿಲ್ಲರೆ ದರ ಹನ್ನೊಂದರಿಂದ ಹನ್ನೆರಡು ರೂಪಾಯಿಗಳವರೆಗೆ ಇರುತ್ತದೆ. ಸಾಮಾನ್ಯವಾಗಿ ಯಾವುದೇ ವ್ಯಾಪಾರಿಯೂ ಮುದ್ರಿತ ದರಕ್ಕಿಂತ ಕಡಿಮೆ ದರಕ್ಕೆ ಮಾರುವುದಿಲ್ಲ. ಹಾಗೆ ಕಡಿಮೆ ದರಕ್ಕೆ ಮಾರಬೇಕೆಂದೇನೂ ಇಲ್ಲ. ಹೀಗಿರುವಾಗ ಜನರಿಕ್ ಔಷಧಿ ಖರೀದಿಸಿದರೂ ಗ್ರಾಹಕನಿಗೆ ನಷ್ಟವೇ ಹೊರತು ಲಾಭವೇನಿಲ್ಲ. ಒಟ್ಟಿನಲ್ಲಿ ವೈದ್ಯರು ಜನರಿಕ್ ಹೆಸರು ಬರೆಯುವುದ ರಿಂದ ಆಗುವ ಲಾಭ ಔಷಧಿ ವ್ಯಾಪಾರಿಗೇ ಹೊರತು ಗ್ರಾಹಕನಿಗಲ್ಲ. ಇಲ್ಲಿ ಆಗುವ ವ್ಯತ್ಯಾಸವಿಷ್ಟೆ ಕಂಪೆನಿಗಳೊಂದಿಗೆ ಒಳಒಪ್ಪಂದ ಮಾಡಿರುವ ವೈದ್ಯನ ಲಾಭಕ್ಕೆ ಕುತ್ತು. ಔಷಧಿ ವ್ಯಾಪಾರಿಯ ಲಾಭಕ್ಕೆ ಮಿತಿಯೇ ಇಲ್ಲ.
ಇಂದು ಜನರಿಕ್ ಔಷಧಿಗಳನ್ನು ಅನೇಕ ಔಷಧಿ ವ್ಯಾಪಾರಿಗಳು ಜನೌಷಧಿ ಮತ್ತು ಜನಸಂಜೀವಿನಿಯಂತಹ ಮಳಿಗೆಗಳಿಂದಲೂ ಖರೀದಿಸಿ ತಂದು ಮಾರುತ್ತಾರೆ. ಯಾಕೆಂದರೆ ಅಲ್ಲಿ ಲಭ್ಯವಾಗುವ ಕೆಲವು ಜನರಿಕ್ ಗಳು ಸರಕಾರಿ ಪ್ರಾಯೋಜಿತ ಜನರಿಕ್ ಔಷಧಾಲಯಗಳಿಗೆ ಮಾತ್ರ ವಿತರಿಸಲಾಗುವಂತಹವುಗಳು.Glimepiride with Metformin ಎಂಬ ಮಧುಮೇಹದ ಬ್ರ್ಯಾಂಡೆಡ್ ಮಾತ್ರೆಯೊಂದಕ್ಕೆ ಗರಿಷ್ಠ ಚಿಲ್ಲರೆ ದರ ಎಂಟರಿಂದ ಒಂಬತ್ತು ರೂಪಾಯಿಗಳವರೆಗೂ ಇರುತ್ತದೆ. ಅದರ ಮಾರಾಟದಿಂದ ಶೇ. 15-20 ಲಾಭ ದೊರಕಬಹುದು. ಅದೇ ಔಷಧಿಯಿರುವ ಜನರಿಕ್ ಮಾತ್ರೆಯೊಂದರ ಮುದ್ರಿತ ಗರಿಷ್ಠ ಚಿಲ್ಲರೆ ದರವೂ ಹೆಚ್ಚು ಕಡಿಮೆ ಎಂಟರಿಂದ ಒಂಬತ್ತು ರೂಪಾಯಿಗಳೇ ಇರುತ್ತವೆ. ಆದರೆ ಅದು ಗ್ರಾಹಕನಿಗೆ ಜನರಿಕ್ ಔಷಧಾಲಯಗಳಲ್ಲಿ ಎರಡರಿಂದ ಎರಡೂವರೆ ರೂಪಾಯಿಗೆ ದೊರಕುತ್ತದೆ. ಒಂದು ವೇಳೆ ವೈದ್ಯ ಜನರಿಕ್ ಹೆಸರು ಬರೆದರೂ ಅಥವಾ ಜನರಿಕ್ ಔಷಧಿಯ ಬ್ರ್ಯಾಂಡ್ ನೇಮ್ ಬರೆದರೂ ಔಷಧಿ ವ್ಯಾಪಾರಿ ಅದನ್ನು ಅದರ ಮುದ್ರಿತ ದರಕ್ಕೇ ಮಾರಾಟ ಮಾಡುತ್ತಾನೆ.
ಸರಕಾರ ಮಾಡಬೇಕಾದದ್ದೇನು?:
ಜನರಿಕ್ ಔಷಧಾಲಯ ಪ್ರಾರಂಭಿಸಿದ್ದೇವೆಂದು ಯಾವುದೇ ಸರಕಾರ ಇತರ ಖಾಸಗಿ ಔಷಧಾಲಯಗಳನ್ನು ಮುಚ್ಚಿಸಿ ಅವರ ಮತ್ತು ಅವರ ಅವಲಂಬಿತ ಕಾರ್ಮಿಕರ ಹೊಟ್ಟೆಗೆ ಹೊಡೆಯುವಂತಿಲ್ಲ. ಸರಕಾರಗಳಿಗೆ ನಿಜಕ್ಕೂ ಜನಪರ ಕಾಳಜಿಯಿದ್ದರೆ ಸರಕಾರ ಜನರಿಕ್ ಔಷಧಿಯಲ್ಲಿನ ಎರಡು ಪ್ರಮುಖ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಜನೋಪಯೋಗಿಯಾಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು.
1. ಜನರಿಕ್ ಔಷಧಿಗಳಲ್ಲಿ ಮುದ್ರಿಸುವ ಗರಿಷ್ಠ ಚಿಲ್ಲರೆ ದರವನ್ನು ನಿಯಂತ್ರಿಸಬೇಕು. ಔಷಧಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಿರಲಿ, ಆದರೆ ಅದು ಸುಲಿಗೆಯ ಮಟ್ಟಕ್ಕೇರದಿರಲಿ.
2. ಜನರಿಕ್ ಎಂದ ಮೇಲೆ ಪುನಃ ಅದಕ್ಕೂ ಇನ್ನೊಂದು ಬ್ರ್ಯಾಂಡ್ ನೇಮ್ ಏಕೆ? ಜನರಿಕ್‌ಗಳನ್ನು ಹೆಚ್ಚೆಚ್ಚು ವ್ಯಾಪಕಗೊಳಿಸುವುದರಿಂದ ಔಷಧಿ ಕಂಪೆನಿಗಳು ವೈದ್ಯರೊಂದಿಗೆ ಒಳಒಪ್ಪಂದ ಮಾಡಿ ಜನತೆಯ ಮೇಲೆ ಅಸಾಧ್ಯ ಆರ್ಥಿಕ ಪ್ರಹಾರ ಮಾಡುವುದನ್ನು ಕಡಿಮೆ ಮಾಡಬಹುದು. ಆದರೆ ಜನರಿಕ್ ಔಷಧಿಗಳಿಗೂ ಬ್ರ್ಯಾಂಡ್ ನೇಮ್ ಇದ್ದರೆ ಔಷಧಿ ಕಂಪೆನಿ ಮತ್ತು ವೈದ್ಯರ ಒಳಒಪ್ಪಂದದಂತೆಯೇ ವೈದ್ಯ ಮತ್ತು ಸ್ಥಳೀಯ ಔಷಧಾಲಯಗಳ ಒಳಒಪ್ಪಂದ ಗಟ್ಟಿಯಾಗಬಹುದು.
ಜನರಿಕ್ ಎಂದ ಮೇಲೆ ಜನರಿಕ್ ಹೆಸರೇ ಸಾಕಾಗುತ್ತದೆ. ಪುನಃ ಅದರಲ್ಲೂ ಬ್ರ್ಯಾಂಡ್ ನೇಮ್ ಇದ್ದರೆ ಜನರಿಕ್ ಔಷಧಿಗಳೆಂಬ ಎಂಬ ಜನಪರ ಪರಿಕಲ್ಪನೆಯೇ ಅರ್ಥ ಕಳೆದುಕೊಳ್ಳುತ್ತದೆ.