ಹೊಸವರ್ಷದ ಮೊದಲದಿನ ಭಾರತದಲ್ಲಿ ಜನಿಸಿದ ಮಕ್ಕಳ ಸಂಖ್ಯೆಯೆಷ್ಟು ಗೊತ್ತಾ?

Update: 2018-01-02 15:56 GMT

ಹೊಸದಿಲ್ಲಿ, ಜ.2: ಹೊಸವರ್ಷದ ದಿನದಂದು ಜಗತ್ತಿನಾದ್ಯಂತ 3,86,000 ಮಕ್ಕಳು ಜನಿಸಿದ್ದು, ಈ ಪೈಕಿ ಭಾರತದಲ್ಲಿ ಅತೀ ಹೆಚ್ಚು ಅಂದರೆ 69,070 ಮಕ್ಕಳು ಜನಿಸಿದ್ದಾರೆ ಎಂದು ಸಂಯುಕ್ತ ರಾಷ್ಟ್ರ ಮಕ್ಕಳ ನಿಧಿ (ಯುನಿಸೆಫ್) ಅಂದಾಜಿಸಿದೆ. ಅಂದು ಜನಿಸಿದ ಮಕ್ಕಳಲ್ಲಿ ಶೇಕಡಾ ತೊಂಬತ್ತು ಮಕ್ಕಳು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೊಸವರ್ಷದಂದು ಆದ ಜನನಗಳಲ್ಲಿ ಅರ್ಧದಷ್ಟು ಜನನಗಳು ಕೇವಲ ಒಂಬತ್ತು ದೇಶಗಳಲ್ಲಿ ಆಗಿವೆ ಎಂದು ಯುನಿಸೆಫ್ ತಿಳಿಸಿದೆ. ಭಾರತ (69,070), ಚೀನಾ (44,760), ನೈಜೀರಿಯ (20,210), ಪಾಕಿಸ್ತಾನ (14,910), ಇಂಡೋನೇಶ್ಯಾ (13,370), ಅಮೆರಿಕ (11,280), ಕಾಂಗೊ ಪ್ರಜಾಸತಾತ್ಮಕ ಗಣರಾಜ್ಯ (9,400), ಇಥಿಯೋಪಿಯ (9,020) ಮತ್ತು ಬಾಂಗ್ಲಾದೇಶ (8,370). ಜನಿಸಿರುವ ಇಷ್ಟು ಮಕ್ಕಳ ಪೈಕಿ ಕೆಲವೊಂದು ಐದು ದಿನಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ ಎಂದು ಯುನಿಸೆಫ್ ತಿಳಿಸಿದೆ.

2016ರಲ್ಲಿ ವರ್ಷದ ಪ್ರತಿದಿನ ಜನಿಸಿದ ಮಕ್ಕಳ ಪೈಕಿ 2,600 ಮಕ್ಕಳು ಜನಿಸಿದ 24 ಗಂಟೆಗಳ ಒಳಗೆ ಸಾವನ್ನಪ್ಪಿದ್ದವು. ಎರಡು ಮಿಲಿಯನ್ ಮಕ್ಕಳು ಜನಿಸಿದ ಮೊದಲ ವಾರವೇ ಸಾವನ್ನಪ್ಪಿದ್ದವು ಎಂದು ಸಂಸ್ಥೆ ತಿಳಿಸಿದೆ.

ಒಟ್ಟಾರೆಯಾಗಿ 2.6 ಮಿಲಿಯನ್ ಮಕ್ಕಳು ಹುಟ್ಟಿದ ಮೊದಲ ತಿಂಗಳೇ ಸಾವನ್ನಪ್ಪಿವೆ. ಅವುಗಳಲ್ಲಿ ಶೇಕಡಾ 80 ಮಕ್ಕಳು ತಡೆಯಬಹುದಾಗಿದ್ದ ಮತ್ತು ಚಿಕಿತ್ಸೆ ನೀಡಬಹುದಾಗಿದ್ದ ಕಾರಣಗಳಿಂದ ಅಂದರೆ ಅವಧಿಗೂ ಮುನ್ನ ಜನನ, ಹೆರಿಗೆ ಸಮಯದಲ್ಲಿ ತೊಂದರೆ ಮತ್ತು ನ್ಯುಮೋನಿಯದಂಥ ಕಾಯಿಲೆಗಳಿಂದ ಮೃತಪಟ್ಟಿರುವುದಾಗಿ ಯುನಿಸೆಫ್ ತಿಳಿಸಿದೆ.

ತಾಯಿ ಮತ್ತು ನವಜಾತ ಶಿಶುವಿಗೆ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಕೈಗೆಟಕುವ ದರದಲ್ಲಿ ಒದಗಿಸಲು ಆಗ್ರಹಿಸಿ ಮುಂದಿನ ತಿಂಗಳು ಯುನಿಸೆಫ್ ‘ಪ್ರತಿ ಮಗುವೂ ಜೀವಂತ’ ಎಂಬ ಅಭಿಯಾನವನ್ನು ಆಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News