ಅಮ್ಮನ ಕಣ್ಣಲ್ಲಿ ವರ್ಣಮಾಲೆ
ಕನ್ನಡದ ವರ್ಣಮಾಲೆಯನ್ನು ಅಂದರೆ ಅಕ್ಷರಗಳನ್ನು ಬಳುಕುವ ಬಳ್ಳಿಗೆ ಹೋಲಿಸಿದ ಕವಿಗಳಿದ್ದಾರೆ. ಅಕ್ಷರಗಳೇ ಚೆಲುವಿನ ಚಿತ್ತಾರವೆಂದು ಬಣ್ಣಿಸಿದ್ದಾರೆ. ಹಾಗೆಯೇ ಪ್ರತೀ ಅಕ್ಷರವೂ ಒಂದು ಲೇಖನದ ಬೀಜವಾಗಿ ಹೊರಹೊಮ್ಮುವುದನ್ನು ಜ್ಯೋತಿ ಗುರುಪ್ರಸಾದ್ ಅವರ ‘ಕಣ್ಣ ಭಾಷೆ’ ಕೃತಿಯಲ್ಲಿ ನೋಡಬಹುದು. ಅ ದಿಂದ ಹಿಡಿದು ಳದವರೆಗೆ ಒಂದೊಂದು ಅಕ್ಷರದಿಂದ ಹೊಮ್ಮುವ ಪದಗಳನ್ನು ಹಿಡಿದು ಅದಕ್ಕೆ ಹೃದಯಸ್ಪರ್ಶಿ ಟಿಪ್ಪಣಿಗಳನ್ನು ಈ ಕೃತಿಯಲ್ಲಿ ಜ್ಯೋತಿ ಅವರು ನೀಡಿದ್ದಾರೆ. ಮೂಲತಃ ಕವಯಿತ್ರಿಯಾಗಿರುವ ಜ್ಯೋತಿ ಗುರುಪ್ರಸಾದ್ ಕಣ್ಣಲ್ಲಿ ಅಕ್ಷರಗಳು ಪದಗಳಾಗಿ, ವಾಕ್ಯಗಳಾಗಿ, ಲೇಖನಗಳಾಗಿ, ಅಂತಿಮವಾಗಿ ದಿನದ ಬದುಕಾಗಿ ಒಡಮೂಡಿವೆ. ಇದನ್ನು ಹೊಸ ಪ್ರಯೋಗವೆಂದೂ ಕರೆಯಬಹುದು. ಈ ಪ್ರಯೋಗದ ಹಿಂದಿನ ಕಾರಣವನ್ನೂ ಲೇಖಕಿ ಹಂಚಿಕೊಳ್ಳುತ್ತಾರೆ. ‘‘ಅ ಆ ಇ ಈ ಎಂದು, ಅಮ್ಮ ಎಂದು ಐದು ವರ್ಷ ತುಂಬಿದ ಮೇಲೆ ನಾನು ಬರೆಯುತ್ತಾ ಹೋದ ಕನ್ನಡದ ಮುತ್ತಿನ ಮಣಿಗಳು ಇಂದು ನನ್ನ ಅಂತರಂಗದ ಭಾಷೆಯೂ ಆಗಿ, ಕವಿತೆಯಾಗಿ ನನ್ನ ಉಸಿರೊಡನೆ ಬೆರೆತು ಹೋಗಿದೆ’’ ಎನ್ನುತ್ತಾ ವರ್ಣಮಾಲೆಯ ಜೊತೆಗೆ ಲೇಖಕಿಗಿರುವ ಬಂಧವನ್ನು ಕಟ್ಟಿಕೊಡುತ್ತಾರೆ. ಒಂದನೇ ತರಗತಿಯಲ್ಲಿ ನಾವು ಅ ಅಂದರೆ ಅಗಸ, ಈ ಎಂದರೆ ಈಶ ಎಂದು ಓದಿದಂತೆಯೇ ಒಂದೊಂದು ಅಕ್ಷರಕ್ಕೆ ಒಂದೊಂದು ವಸ್ತುವನ್ನು ಜೋಡಿಸಿ ಅದರ ಕುರಿತಂತೆ ಪುಟ್ಟ ಲೇಖನವನ್ನು ಲೇಖಕಿ ಬರೆದಿದ್ದಾರೆ.
ಇಲ್ಲಿ ವರ್ಣಮಾಲೆಗೆ ತಕ್ಕಂತೆಯೇ 46 ಅಕ್ಷರಗಳಿಗೆ ಪೂರಕವಾದ ಲೇಖನಗಳಿವೆ. ಆರ್ ಅಂಕುಸಮಿಟ್ಟೊಡಂ, ಇನಿದನಿ, ಈಶ, ಉಷೆ, ಊರ್ಮಿಳೆ, ಋಷಿ, ಎಲೆ, ಏಳು, ಐಶ್ವರ್ಯ, ಒರತೆ, ಓಲೆ, ಔಷಧ, ಅಂಕಣ, ಕವಿತೆ, ಖಡ್ಗ, ಗಮನ, ಘನ, ಚರಕ, ಛಂದ ಹೀಗೆ ಬಗೆ ಬಗೆಯೇ ವಿಷಯಗಳನ್ನು ನೀವು ಎದುರುಗೊಳ್ಳುತ್ತೀರಿ. ಮತ್ತು ಆ ವಿಷಯದ ಕುರಿತಂತೆ ಗದ್ಯ, ಪದ್ಯ ಸಮ್ಮಿಶ್ರಿತವಾದ ಲೇಖನ ನಿಮ್ಮನ್ನು ಎದುರುಗೊಳ್ಳುತ್ತದೆ. ಅ ಎಂದರೆ ಅಮ್ಮ ಎನ್ನುವಂತೆ ಇಲ್ಲಿರುವ ಪ್ರತೀ ಲೇಖನಗಳೂ ಅಮ್ಮನ ಹೃದಯದಿಂದ ಹುಟ್ಟಿರುವಂತಹದು. ಹೃದಯದಿಂದ ಹೊರಹೊಮ್ಮಿರುವಂತಹದು. ಪ್ರತೀ ಶಬ್ದಗಳ ವಿವರಣೆಯಲ್ಲಿ ವ್ಯಾಕರಣೀಯ ಶಿಸ್ತು, ಭಾಷಾ ವಿಜ್ಞಾನಿಯ ಕ್ರಿಯಾಶೀಲತೆ, ಕವಿಯ ಸೃಜನ ಶೀಲತೆ, ದಾರ್ಶನಿಕನ ಚಿಂತನ, ಸಮಾಜ ವಿಜ್ಞಾನಿಯ ಹೊರನೋಟ, ಸಾಂಸ್ಕೃತಿಕ ಮಾನವ ಶಾಸ್ತ್ರಜ್ಞನ ಒಳನೋಟ ಮತ್ತು ಜನಪದರ ಕುತೂಹಲ ಹಾಸು ಹೊಕ್ಕಾಗಿದೆ.
ಹೊಸ ಸಂಜೆ ಪ್ರಕಾಶನ, ಕಾರ್ಕಳ ಈ ಕೃತಿಯನ್ನು ಹೊರತಂದಿದೆ. 116 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ. ಆಸಕ್ತರು 93423 26655ಕ್ಕೆ ದೂರವಾಣಿಯನ್ನು ಸಂಪರ್ಕಿಸಬಹುದು.