ಭೀಮಾ ಕೋರೆಗಾಂವ್ ಹಿಂಸಾಚಾರ: ಬಂದ್ ಹಿಂಪಡೆದ ದಲಿತ ಸಂಘಟನೆಗಳು

Update: 2018-01-03 13:17 GMT

ಮುಂಬೈ, ಜ. 3: ಭೀಮಾ ಕೋರೆಗಾಂವ್‌ನಲ್ಲಿ ದಲಿತ ಸಂಘಟನೆಗಳು ಆಯೋಜಿಸಿದ್ದ ವಿಜಯೋತ್ಸವ ದಿನದ ವೇಳೆ ಸಂಘಪರಿವಾರ ನಡೆಸಿದ ಹಿಂಸಾಚಾರವನ್ನು ವಿರೋಧಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ರಾಜ್ಯಾದ್ಯಂತ ಬಂದ್ ಅನ್ನು ಬುಧವಾರ ಹಿಂಪಡೆದುಕೊಂಡಿದೆ.

ಇದಕ್ಕೂ ಮುನ್ನ ಪ್ರತಿಭಟನಾಕಾರರು ಹಲವು ಬಸ್‌ಗಳು, ಅಂಗಡಿಗಳನ್ನು ಧ್ವಂಸಗೊಳಿಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಈವರೆಗೆ ಓರ್ವ ಸಾವನ್ನಪ್ಪಿದ್ದರೆ, ಪೊಲೀಸರು ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಥಾಣೆ ಪ್ರದೇಶದಲ್ಲಿ ಜನವರಿ 4ರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಕೋರೆಗಾಂವ್ ಹಿಂಸಾಚಾರವನ್ನು ವಿರೋಧಿಸಿ ದಲಿತ ಸಂಘಟನೆಗಳು ಬುಧವಾರದಂದು ರಾಜ್ಯವ್ಯಾಪಿ ಬಂದ್ ಆಚರಿಸುವಂತೆ ಡಾ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದರು.

ಜನವರಿ ಒಂದರಂದು ಮರಾಠಾ ಪೇಶ್ವೆ ಎರಡನೇ ಬಾಜಿ ರಾವ್‌ನ 28,000 ಸದಸ್ಯ ಬಲದ ಸೇನೆಯನ್ನು ಬ್ರಿಟಿಷರ 800 ಸೈನಿಕ ಬಲದ ಸೇನೆ ಕೋರೆಗಾಂವ್ ಯುದ್ಧದಲ್ಲಿ ಸೋಲಿಸಲು ಯಶಸ್ವಿಯಾಗಿತ್ತು. ಬ್ರಿಟಿಷರ ಸೇನೆಯಲ್ಲಿ ಮಹರ್ (ದಲಿತ) ಸೈನಿಕರೂ ಇದ್ದ ಕಾರಣ ಈ ಯುದ್ಧವನ್ನು ಮೇಲ್ಜಾತಿಯ ವಿರುದ್ಧ ದಲಿತರು ಸಾಧಿಸಿದ ವಿಜಯವೆಂದೇ ಭಾವಿಸಲಾಗುತ್ತದೆ. ಹಾಗಾಗಿ ಜನವರಿ ಒಂದರಂದು ಸುಮಾರು ಮೂರು ಲಕ್ಷದಷ್ಟು ದಲಿತರು ಪುಣೆ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿರುವ ಯುದ್ಧ ಸ್ಮಾರಕದತ್ತ ತೆರಳುತ್ತಿದ್ದಾಗ ಕೇಸರಿ ಧ್ವಜವನ್ನು ಹಿಡಿದಿದ್ದ ಸಂಘಪರಿವಾರದ ಸದಸ್ಯರು ಅವರ ಮೇಲೆ ದಾಳಿ ನಡೆಸಿದ್ದರು.

 ಈ ದಾಳಿಯನ್ನು ಖಂಡಿಸಿ ಬುಧವಾರದಂದು ಕರೆ ನೀಡಲಾಗಿದ್ದ ಬಂದ್‌ನಿಂದಾಗಿ ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈ ಭಾಗಶಃ ಸ್ತಭ್ಧವಾಯಿತು. ಮಹಾರಾಷ್ಟ್ರದ ಹಲವೆಡೆ ಹಿಂಸಾಚಾರಗಳು ನಡೆದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ವಿರಾರ್, ಥಾಣೆ, ಗೊರೆಗಾಂವ್, ಚೆಂಬೂರ್ ಹಾಗೂ ಇತರ ರೈಲು ನಿಲ್ದಾಣಗಳಲ್ಲಿ ಪ್ರತಿಭಟನಾಕಾರರು ರೈಲ್ ರೋಕೊ ನಡೆಸಿದ ಕಾರಣ ರೈಲು ಸಂಚಾರಕ್ಕೆ ಅಡ್ಡಿಯುಂಟಾಯಿತು.

ಪ್ರತಿಭಟನಾಕಾರರು ರಸ್ತೆತಡೆ ನಡೆಸಿದ ಕಾರಣ ನಗರದ ವಿವಿಧ ಭಾಗಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೇವಲ ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.

ನಗರದಲ್ಲಿ ಆಟೋ ರಿಕ್ಷಾಗಳು ಎಂದಿನಂತೆ ಕಾರ್ಯಾಚರಿಸಿದರೂ ಅಲ್ಲಲ್ಲಿ ಆಟೋಗಳ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆಗಳು ವರದಿಯಾಗಿವೆ. ಪ್ರತಿಭಟನಾಕಾರರ ಕಲ್ಲೆಸೆತಕ್ಕೆ ಗುರಿಯಾಗಿ ಹದಿಮೂರು ಬೆಸ್ಟ್ ಬಸ್‌ಗಳು ಹಾನಿಗೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರದಂದು ಥಾಣೆಯಲ್ಲಿ ಸೆಕ್ಷನ್ 144 ಜಾರಿ ಮಾಡಿದರೂ ಬಸ್‌ಗಳು ಮತ್ತು ರಿಕ್ಷಾಗಳ ಮೇಲೆ ಕಲ್ಲೆಸೆತ ಮುಂದುವರಿದಿತ್ತು. ವರ್ಲಿಯ ಮಾಲ್‌ವೊಂದರಲ್ಲಿ ಅಂಗಡಿಗಳನ್ನು ಮುಚ್ಚಲು ಪ್ರತಿಭಟನಾಕಾರರು ಮುಂದಾದಾಗ ಅಂಗಡಿ ಮಾಲಕರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದ ಬಗ್ಗೆಯೂ ವರದಿಯಾಗಿದೆ.

ಬಂದ್‌ನಿಂದಾಗಿ ರಾಜ್ಯದ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು ಮತ್ತು ಉಳಿದ ಶಾಲೆಗಳು ಕೂಡಾ ಹಾಜರಾತಿ ಕೊರತೆಯಿಂದಾಗಿ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಿದವು. ಮುಂಬೈ ವಿಶ್ವವಿದ್ಯಾಲಯದ ಪರೀಕ್ಷೆಗಳು ಬಂದ್‌ನಿಂದಾಗಿ ಭಾದಿಸಲ್ಪಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಎರಡು ಗಂಟೆ ವಿಳಂಬವಾಗಿ ಬರಬಹುದು ಎಂದು ಸೂಚಿಸಲಾಗಿದ್ದರೂ ರಸ್ತೆತಡೆಯಿಂದಾಗಿ ಹಲವು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೊಠಡಿಯಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ ದಲಿತ ವ್ಯಕ್ತಿಯ ಸಾವು ಸಂಭವಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶವನ್ನು ಹರಡಲಾಗಿದೆ. ಜನರು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿಯು ತಕ್ಕಮಟ್ಟಿಗೆ ಶಾಂತಿಯುತವಾಗಿದೆ.

 ಕೇಂದ್ರ ಗೃಹ ಗ್ರಾಮೀಣ ರಾಜ್ಯ ಸಚಿವ, ದೀಪಕ್ ಕೆಸರ್ಕರ್.

 ದಲಿತರ ಬೆಂಬಲವನ್ನು ಯಾರು ಕೂಡಾ ಕ್ಷುಲ್ಲಕವೆಂದು ಭಾವಿಸಬಾರದು. ಸದ್ಯಕ್ಕೆ ನಾವು ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸುತ್ತಿದ್ದೇವೆ. ಆದರೆ ಯಾವುದೇ ಸಂಘಟನೆ ತೊಂದರೆಯನ್ನು ನೀಡಲು ಬಯಸುತ್ತಿದ್ದರೆ ದಲಿತರು ಕೂಡಾ ಸುಮ್ಮನಿರುವುದಿಲ್ಲ.

ರಾಮದಾಸ್ ಅಠಾವಳೆ, ಕೇಂದ್ರ ಸಾಮಾಜಿಕ ನ್ಯಾಯ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News