ನ್ಯಾ.ಸದಾಶಿವ ಆಯೋಗದ ವರದಿಗೆ ಯಾವುದೇ ಆಧಾರವಿಲ್ಲ: ಡಾ.ಪರಮೇಶ್ ನಾಯ್ಕ್

Update: 2018-01-03 18:02 GMT

ತುಮಕೂರು,ಜ.03:ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ವಾಗಿದ್ದು,ಅವರ ನೀಡಿರುವ ವರದಿಗೆ ಯಾವುದೇ ಆಧಾರವಿಲ್ಲ ಎಂದು ಕೆಪಿಸಿಸಿ ಐಟಿ ಸೇಲ್ ಅಧ್ಯಕ್ಷ ಡಾ.ಪರಮೇಶ್ ನಾಯಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2004ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದಲ್ಲಿ ಸರಕಾರ ನೀಡುತ್ತಿರುವ ಸರಕಾರಿ ಸವಲತ್ತುಗಳು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ನೇಮಿಸಿದ್ದರೂ, ಅವರು ತಮ್ಮ ವ್ಯಾಪ್ತಿ ಮೀರಿ ಮೀಸಲಾತಿಯ ಪ್ರಮಾಣವನ್ನು ಹಂಚಿಕೆ ಮಾಡುವ ಮೂಲಕ ಅವೈಜ್ಞಾನಿಕ ವರದಿ ನೀಡಿದ್ದಾರೆ. ಆದ್ದರಿಂದ ಇದನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದರು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಅಂಜನೇಯ ಅವರ ಸಮುದಾಯದ ಜನರಿಗಲ್ಲದೇ, ಇಡೀ ರಾಜ್ಯದ ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ನಾನು ಇಡೀ ವರದಿಯ ಇಂಚಿಂಚು ಅಭ್ಯಾಸ ಮಾಡಿದ್ದು, ಇಡೀ ವರದಿಗೆ ಯಾವುದೇ ಆಧಾರವಿಲ್ಲ. ಇದೇ ಕಾರಣಕ್ಕೆ ತಜ್ಞರ ಸಮಿತಿಯೂ ವರದಿಯ ಪರಿಷ್ಕರಣೆಗೂ ಮುಂದಾಗಿಲ್ಲ. ಹಾಗಾಗಿ ವರದಿ ಜಾರಿ ಹೋಗಲಿ, ಅದನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ ಎಂದು ಡಾ.ಪರಮೇಶ್ ನಾಯಕ್ ಸ್ಪಷ್ಟಪಡಿಸಿದರು.

ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಎನ್.ಎಸ್.ಯು.ಐ, ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ, ಮುಖಂಡನಾಗಿ ಕೆಲಸ ಮಾಡುತ್ತಿದ್ದು,ಪ್ರಸ್ತುತ ಕೆ.ಪಿ.ಸಿ.ಸಿ. ಐಟಿ ಸೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಕಳೆದ 5 ಚುನಾವಣೆಯಿಂದ ಪಾವಗಡ ಮೀಸಲು ಕ್ಷೇತ್ರದ  ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೇಳುತಿದ್ದು,ಜಿಲ್ಲಾ ಕಾಂಗ್ರೆಸ್ ನಿಂದ ಹೆಸರು ಶಿಫಾರಸ್ಸುಗೊಂಡರೂ ಟಿಕೇಟ್ ದೊರೆಯುತ್ತಿಲ್ಲ. ಪ್ರತಿಭಾರಿಯೂ ಬಂಜಾರ ಸಮುದಾಯಕ್ಕೆ ನೀಡುವ ಎಲ್ಲಾ ಟಿಕೇಟ್‍ಗಳನ್ನು ಉತ್ತರ ಕರ್ನಾಟಕಕ್ಕೆ ನೀಡಿ, ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಬಂಜಾರ ಜನಸಂಖ್ಯೆ ಇದ್ದರೂ ನಮ್ಮನ್ನು ಕಡೆಗಣಿಸ ಲಾಗುತ್ತಿದೆ.ಈ ಬಾರಿ ಟಿಕೇಟ್ ದೊರೆಯದಿದ್ದರೆ, ಪಕ್ಷೇತರನಾಗಿಯಾದರೂ ಸ್ಪರ್ಧೆಗೆ ಇಳಿಯಲು ಸಿದ್ದ ಎಂದು ಡಾ.ಪರಮೇಶ್ವರ ನಾಯ್ಕ್ ನುಡಿದರು.

ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ 2.50 ಲಕ್ಷ ಬಂಜಾರ ಜನರಿದ್ದು,11 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಬಂಜಾರ ಸಮುದಾಯದ ಜನರು ನಿರ್ಣಾಯಕ ಮತದಾರರಾಗಿದ್ದಾರೆ.ಮೀಸಲು ಕ್ಷೇತ್ರವಾದ ಪಾವಗಡದಲ್ಲಿ 25 ಸಾವಿರ, ಚಿಕ್ಕನಾಯಕನಹಳ್ಳಿಯಲ್ಲಿ 40 ಸಾವಿರ, ಶಿರಾ 20, ಕೊರಟಗೆರೆ 10, ಮಧುಗಿರಿ 15, ತಿಪಟೂರು 10, ತುಮಕೂರು 5 ಸಾವಿರ ಮತದಾರರಿದ್ದಾರೆ. ಪಾವಗಡದಲ್ಲಿ ನನಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರೆ ಗೆಲುವು ಸುಲಭವಾಗುತ್ತದೆ. ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ನನಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಂಬಾಶಿವರೆಡ್ಡಿ,ಜಯಕುಮಾರ್, ನಾಗೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News