ತುಮಕೂರು: ಎಂ.ಜಿ.ರಸ್ತೆಯಲ್ಲಿ ಪುಟ್‍ಪಾತ್ ವ್ಯಾಪಾರಕ್ಕೆ ಅವಕಾಶ ನೀಡಲು ಒತ್ತಾಯ

Update: 2018-01-04 11:40 GMT

ತುಮಕೂರು,ಜ.04:ಕಳೆದ ಮೂರು ತಿಂಗಳಿನಿಂದ ಪೊಲೀಸರು ಎಂ.ಜಿ.ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳ ಪುಟ್‍ಪಾತ್‍ಗಳಲ್ಲಿ ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಕಿರುಕುಳ ನೀಡುತ್ತಿದ್ದು, ನಮಗೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಆರೋಪಿಸಿ ಬೀದಿ ಬದಿ ವ್ಯಾಪಾರಿಗಳು ಇಂದು ಟೌನ್‍ಹಾಲ್ ಬಳಿ ಪ್ರತಿಭಟನೆ ನಡೆಸಿದರು.

ಬೀದಿ ಬದಿ ವ್ಯಾಪಾರಿ ಕೃಷ್ಣಮೂರ್ತಿ ಮಾತನಾಡಿ,ನಾನು ಹಲವಾರು ವರ್ಷಗಳಿಂದ ಎಂ.ಜಿ.ರಸ್ತೆಯ ಪುಟ್‍ಪಾತ್‍ನಲ್ಲಿ ತಳ್ಳು ಗಾಡಿಯಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಪೊಲೀಸರು ವ್ಯಾಪಾರ ಮಾಡಲು ಬಿಡುತ್ತಿಲ್ಲ. ಒಂದು ಕಡೆ ನಿಂತು ವ್ಯಾಪಾರ ಮಾಡಲು ಅವಕಾಶ ನೀಡದೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಆಲ್ಲಿಗೆ ಎಂಬಂತೆ ಅಟ್ಟಾಡಿಸುತ್ತಿದ್ದು, ಸರಿಯಾಗಿ ವ್ಯಾಪಾರವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ.ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಪಾಲಿಕೆ ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಈ ಹಿಂದೆ ಎಂ.ಜಿ.ರಸ್ತೆಯ ಪುಟ್‍ಪಾತ್ ವ್ಯಾಪಾರಿಗಳಿಗಾಗಿ ನಾಲ್ಕು ಕರ್ನವೆನ್ಸಿಗಳನ್ನು ಸ್ವಚ್ಚಗೊಳಿಸಿ, ತಳ್ಳು ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸಲು ಅನುವು ಮಾಡಲು ಮುಂದಾಗಿತ್ತು. ಆದರೆ ಕೆಲ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನಮಗೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು, ತಳ್ಳು ಗಾಡಿಯವರಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿ ವನಜಮ್ಮ ಮಾತನಾಡಿ,ನಗರದ ಎಂ.ಜಿ.ರಸ್ತೆಯ ಎರಡು ಬದಿ ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದುಕಡೆ ಕಾರು,ಮತ್ತೊಂಡೆ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾರೆ. ಆದರೆ ತಳ್ಳುವ ಗಾಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಓದು, ಮನೆ ಬಾಡಿಗೆ ಇನ್ನಿತರ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗಿದ್ದು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಗರಪಾಲಿಕೆ ಅಧಿಕಾರಿಗಳು ನಮಗೆ ಎಂ.ಜಿ.ರಸ್ತೆಯ ಪುಟ್‍ಪಾತ್‍ನಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಮಕೃಷ್ಣ,ವಾಸಿಂ ಅಕ್ರಮ,ಮುತ್ತುರಾಜ್,ಚಾಂದು,ಬಾಬು ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News