ಶ್ರೀರಾಮ ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ್ದು ಸರಿಯೇ?: ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನೆ

Update: 2018-01-04 13:27 GMT

ಶಿವಮೊಗ್ಗ,ಜ.4: 'ಶ್ರೀರಾಮ ತನ್ನ ಗರ್ಭಿಣಿ ಪತ್ನಿ ಸೀತೆಯನ್ನು ಕಾಡಿಗಟ್ಟಿದ್ದು ಎಷ್ಟರ ಮಟ್ಟಿಗೆ ಸರಿ?' ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಂಗಳೂರು ಜಿಲ್ಲೆ ಕಾಟಿಪಳ್ಳದ ದೀಪಕ್‍ರಾವ್ ಹತ್ಯೆಯ ಕುರಿತಂತೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಈ ರೀತಿಯ ಘಟನೆಗಳು ಭಾರತದಲ್ಲಿ ಸದಾ ನಡೆಯುತ್ತಿರುತ್ತವೆ. ಹುಟ್ಟಿದ ಮೇಲೆ ಸಾವು ಖಚಿತವಾಗಿದೆ. ಆದರೆ ಕೋಮುವಾದಿ ಪಕ್ಷಗಳು ಅವಕಾಶ ಸಿಕ್ಕರೆ ಇದನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತವೆ' ಎಂದರು. 
'ಬಹು ಸಂಸ್ಕೃತಿಯ ದೇಶದಲ್ಲಿ ಆಗಾಗ ಈ ರೀತಿಯ ಘಟನೆ ನಡೆಯುತ್ತಿರುತ್ತವೆ. ಪುರಾಣಗಳು ಕೂಡ ಇದಕ್ಕೆ ಹೊರತಾಗಿಲ್ಲ. ಶ್ರೀರಾಮನೇ ತನ್ನ ಗರ್ಭೀಣಿ ಪತ್ನಿಯನ್ನು ವನವಾಸಕ್ಕೆ ತಳ್ಳಿದ್ದ. ಇದು ಎಷ್ಟರ ಮಟ್ಟಿಗೆ ಸರಿ?' ಎಂದು ಪ್ರಶ್ನಿಸಿದರು. 

ಇಂಡಿಯನ್ ಪೀನಲ್ ಕೋಡ್ ಬ್ರಿಟಿಷರ ಆಡಳಿತ ಕಾಲದಲ್ಲೂ ಇದೆ. ವೈಯಕ್ತಿಕ ಮತ್ತು ಬೇರೆ ಬೇರೆ ಕಾರಣಗಳಿಂದಲೂ ಕೊಲೆಗಳು ನಡೆಯುತ್ತವೆ. ಅದಕ್ಕೆಂದೆ ಐಪಿಸಿ ಸೆಕ್ಷನ್‍ಗಳಿವೆ. ಅದರನ್ವಯ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಅಗತ್ಯ ಬಿದ್ದರೆ ಮಂಗಳೂರಿಗೆ ಗೃಹ ಸಚಿವರು ಹೋಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಪ್ರಾಪರ್ಟಿ ಕಾರ್ಡ್: ಶಿವಮೊಗ್ಗ ನಗರದಲ್ಲಿ ಸ್ಥಿರಾಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸುವುದಿಲ್ಲ. ಪಿ.ಆರ್. ಕಾರ್ಡ್ ಯೋಜನೆಯು ಅತ್ಯಂತ ಉತ್ತಮವಾದುದಾಗಿದೆ. ಪ್ರಾರಂಭ ಹಂತದಲ್ಲಿ ಕೊಂಚ ಸಮಸ್ಯೆಯಾಗಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಇಷ್ಟರಲ್ಲಿಯೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

ಈಗಾಗಲೇ ರಾಜ್ಯದಲ್ಲಿ ಹೊಸದಾಗಿ 53 ತಾಲೂಕುಗಳ ಘೋಷಣೆ ಮಾಡಲಾಗಿದೆ. ತಾಲೂಕು ರಚನೆ ಪ್ರಕ್ರಿಯೆ ಆದಷ್ಟು ಶೀಘ್ರ ಪೂರ್ಣಗೊಳ್ಳಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಹೊಸ ತಾಲೂಕು ರಚನೆ ಮಾಡುವುದಿಲ್ಲ. ಆ ರೀತಿಯ ಯಾವುದೇ ಪ್ರಸ್ತಾಪವೂ ಸದ್ಯಕ್ಕೆ ತಮ್ಮ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದ್ದಾರೆ. 

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಪಕ್ಷ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೆನೆ. ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ದ. 1975 ರವರೆಗೆ ಸಮಾಜವಾದಿ ಪಕ್ಷದಲ್ಲಿದ್ದ ನಾನು ಅಲ್ಲಿಂದೀಚೆಗೆ ಕಾಂಗ್ರೆಸ್‍ನಲ್ಲಿದ್ದೇನೆ. ಸಾಯುವವರೆಗೂ ಕಾಂಗ್ರೆಸ್‍ನಲ್ಲೇ ಇರುತ್ತೇನೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News