ಅರುಣಾಚಲಪ್ರದೇಶ ಪ್ರವೇಶಿಸಿದ ಚೀನಾದ ರಸ್ತೆ ನಿರ್ಮಾಣ ತಂಡ: ಸಲಕರಣೆಗಳನ್ನು ವಶಪಡಿಸಿಕೊಂಡ ಭಾರತ

Update: 2018-01-04 15:58 GMT

ಹೊಸದಿಲ್ಲಿ/ಗುವಾಹಟಿ, ಜ. 4: ಸಿಕ್ಕಿಂ-ಭೂತಾನ್ ಗಡಿಯಲ್ಲಿರುವ ಡೋಕಾ ಲಾದಲ್ಲಿ ಎರಡು ರಾಷ್ಟ್ರಗಳ ಬಿಕ್ಕಟ್ಟು ಶಮನಗೊಂಡ ಎರಡು ತಿಂಗಳ ಬಳಿಕ ಅರುಣಾಚಲ ಪ್ರದೇಶ ಟುಟಿಂಗ್ ಪ್ರದೇಶದ ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭಾಗದಲ್ಲಿ ಚೀನಾ ಪಡೆಯ ರಸ್ತೆ ನಿರ್ಮಾಣ ಪ್ರಯತ್ನವನ್ನು ಭಾರತೀಯ ಸೇನೆ ಹಾಗೂ ಇಂಡೊ ಟಿಬೆಟಿನ್ ಗಡಿ ಪೊಲೀಸ್ ವಿಫಲಗೊಳಿಸಿದೆ.

ಚೀನ ಕಾರ್ಮಿಕರಿಗೆ ನೈಜ ಗಡಿ ನಿಯಂತ್ರಣ ರೇಖೆಯ ಅವರ ಭಾಗಕ್ಕೆ ಮರಳಲು ತಿಳಿಸಲಾಯಿತು, ಅವರ ರಸ್ತೆ ನಿರ್ಮಾಣ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಯಿತು. ಆದಾಗ್ಯೂ, ನೈಜ ನಿಯಂತ್ರಣ ರೇಖೆಯ ನಿರ್ಮಾಣ ನಿವೇಶನದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗಿರುವುದನ್ನು ಮೂಲಗಳು ನಿರಾಕರಿಸಿವೆ. ಈ ಘಟನೆ ಸಂದರ್ಭ ಭಾರತ ಹಾಗೂ ಚೀನ ಯೋಧರು ನೇರವಾಗಿ ಮುಖಾಮುಖಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಡಿಸೆಂಬರ್ 26ರಂದು ಸಂಭವಿಸಿದೆ. ಅಂದು ಚೀನ ನಾಗರಿಕರ ರಸ್ತೆ ನಿರ್ಮಾಣ ತಂಡ ಯೋಧರಿಲ್ಲದೆ ಅರುಣಾಚಲ ಪ್ರದೇಶದ ಟುಟಿಂಗ್ ಪ್ರದೇಶದ ಬಿಶಿಂಗ್ ಸಮೀಪ ನೈಜ ನಿಯಂತ್ರಣ ರೇಖೆಯ ಭಾರತೀಯ ಭಾಗವನ್ನು ದಾಟಿದರು. ಈ ಪ್ರದೇಶ ಟಿಬೆಟ್‌ನಿಂದ ಅರುಣಾಚಲ ಪ್ರದೇಶಕ್ಕೆ ಹರಿಯುತ್ತಿರುವ ಸಿಯಾಂಗ್ ನದಿಯ ಕಪಾಂಗ್‌ಲಾ ಸಮೀಪ ಇದೆ. ಆದರೆ, ಚೀನ ಕೆಲಸಗಾರರು ಈ ನದಿಯನ್ನು ದಾಟಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿರುವ ನಿವಾಸಿಗಳು ಮೊದಲ ಬಾರಿಗೆ ಚೀನ ರಸ್ತೆ ನಿರ್ಮಿಸುವುದನ್ನು ಗಮನಿಸಿದರು. ಅನಂತರ ಐಟಿಬಿಪಿಗೆ ಮಾಹಿತಿ ನೀಡಿದರು.

ಡಿಸೆಂಬರ್ 28ರಂದು ಐಟಿಬಿಪಿ ಹಾಗೂ ಸೇನೆ ಜಂಟಿ ಗಸ್ತು ನಡೆಸಿತು ಹಾಗೂ ತಮ್ಮ ಭೂಭಾಗಕ್ಕೆ ಹಿಂದಿರುಗುವಂತೆ ಚೀನ ಕೆಲಸಗಾರರಿಗೆ ತಿಳಿಸಿತು. ಎರಡು ಜೆಸಿಬಿ ಹಾಗೂ ನೀರು ಸಿಂಪಡಿಸುವ ಸಾಧನ ವಶಪಡಿಸಿಕೊಂಡಿತು. ಟಯರ್‌ಗಳನ್ನು ಉರಿಸಿತು. ಜೆಸಿಬಿ ಚೈನನ್ನು ಬೇರ್ಪಡಿಸಿತು. ಈ ಪ್ರದೇಶಕ್ಕೆ ಬ್ಯಾರಿಕೇಡ್ ಅವಳವಡಿಸಲಾಯಿತು ಹಾಗೂ ಐಟಿಬಿಪಿ ಹಾಗೂ ಸೇನೆ ಜಂಟಿಯಾಗಿ ಕಾವಲು ನಡೆಸಿತು ಎಂದು ಸೇನಾ ಮೂಲಗಳು ತಿಳಿಸಿವೆ. ಎರಡೂ ರಾಷ್ಟ್ರಗಳ ನಡುವಿನ ಸ್ಥಾಪಿತ ಸಂಯೋಜನಾ ಕಾರ್ಯವಿಧಾನದ ಮೂಲಕ ಈ ವಿವಾದ ಪರಿಹರಿಸಲಾಗುತ್ತಿದೆ. ಆದಾಗ್ಯೂ, ಚೀನದ ಸಲಕರಣೆಗಳನ್ನು ಹಿಂದಿರುಗಿಸಲು ಯಾವುದೇ ಸಮಯ ಮಿತಿ ನೀಡಲು ಭಾರತ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ರಸ್ತೆ ನಿರ್ಮಾಣ ತಂಡ 12 ಅಡಿ ಅಗಲದ, 1 ಕಿ.ಮೀ ಉದ್ದದ ರಸ್ತೆಯನ್ನು ಭಾರತೀಯ ಪ್ರದೇಶದೊಳಗೆ ನಿರ್ಮಿಸುತ್ತಿತ್ತು. ಪರ್ವತ ಪ್ರದೇಶದಲ್ಲಿ ರಸ್ತೆ ವಕ್ರವಾಗಿತ್ತು. ಇದರಿಂದಾಗಿ ಈ ರಸ್ತೆ ಸುಮಾರು 400 ಮೀಟರ್ ಅರುಣಾಚಲಪ್ರದೇಶದ ಒಳಗೆ ಬಂದಿತ್ತು.

‘ಭಾರತ-ಚೀನಾ ಸೇನೆಗಳು ಮುಖಾಮುಖಿಯಾಗಿಲ್ಲ’

ಅರುಣಾಚಲ ಪ್ರದೇಶದ ಟುಟಿಂಗ್‌ನಲ್ಲಿ ಚೀನದೊಂದಿಗಿನ ಬಿಕ್ಕಟ್ಟನ್ನು ಭಾರತೀಯ ಸೇನೆ ನಿರಾಕರಿಸಿದೆ. ನೈಜ ನಿಯಂತ್ರಣ ರೇಕೆಯ ಭಾರತೀಯ ಭಾಗದಲ್ಲಿ ಕಳೆದ ವಾರ ಚೀನ ನಾಗರಿಕರ ಗುಂಪು ರಸ್ತೆ ನಿರ್ಮಿಸುವುದನ್ನು ತಡೆಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಬಿಕ್ಕಟ್ಟು ಸ್ಥಳದಲ್ಲಿ ಎರಡೂ ಸೇನೆ ಮುಖಾಮುಖಿಯಾಗಿಲ್ಲ. ಭಾರತೀಯ ಸೇನೆ ಹಾಗೂ ಪೀಪಲ್ಸ್ ಲಿಬರೇಶನ್

ಸೇನೆಯ ನಡುವೆ ನೇರ ಮುಖಾಮುಖಿಯಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News