ಕರಿ ಕಣಗಿಲ-ತೆಲುಗು ದಲಿತ ಕಾವ್ಯ
ದಲಿತರು ಬರೆಯಲು ಆರಂಭಿಸಿದ ದಿನದಿಂದಲೇ ಈ ನೆಲದ ನಿಜವಾದ ಮಾತುಗಳು ಹೊರಬರತೊಡಗಿದವು. ಅವುಗಳು ಬರೇ ಬರಹಗಳಲ್ಲ. ಬೆಂಕಿಯ ಕುಲುಮೆಯಿಂದ ಎದ್ದ ಚೂರುಗಳು ಅವು. ಅವುಗಳ ತೀವ್ರತೆ ಹೇಗಿತ್ತು ಎಂದರೆ, ಸಮಾಜ ಬೆಚ್ಚಿ ಬಿತ್ತು. ಸಿದ್ದಲಿಂಗಯ್ಯ ‘ಇಕ್ರಲಾ, ವದೀರ್ಲಾ...’ ಎಂದು ಬರೆದಾಗ, ಛೆ ಛೆ ಕವಿತೆ ಬರೆಯುವ ರೀತಿ ಹೀಗಲ್ಲ ಎಂದು ಮೇಲ್ಜಾತಿಯ ಹಲವು ಬರಹಗಾರರು ಕೈ ಕೈ ಹಿಸುಕಿಕೊಂಡದ್ದಿತ್ತು. ಶಿವರಾಮ ಕಾರಂತರು ಬರೆದ ಚೋಮನ ದುಡಿಗೂ, ದೇವನೂರು ಬರೆದ ಒಡಲಾಳಕ್ಕೂ ಇರುವ ವ್ಯತ್ಯಾಸವನ್ನು ನೋಡಿದ್ದೇವೆ. ದಲಿತನಾಗಿ ಬದುಕಿ ಬರೆಯುವುದಕ್ಕೂ, ಅದನ್ನು ಹೊರಗಿನಿಂದ ನೋಡಿ ಬರೆಯುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಈ ಎರಡು ಕೃತಿಗಳು ಹೇಳಿದವು. ದಲಿತ ಸಾಹಿತ್ಯ ಬರೇ ಕನ್ನಡದಲ್ಲಿ ಮಾತ್ರವಲ್ಲ ಮರಾಠಿ, ತೆಲುಗಿನಲ್ಲೂ ಕ್ರಾಂತಿಯನ್ನು ಮಾಡಿದೆ. ‘ಕರಿ ಕಣಗಿಲ’ ತೆಲುಗಿನ ದಲಿತ ಕವಿಗಳು ಬರೆದಂತಹ ಕವಿತೆಗಳು. ಇಂಗ್ಲಿಷ್ ಮೂಲದಿಂದ ಇದನ್ನು ಕನ್ನಡಕ್ಕಿಳಿಸಲಾಗಿದೆ. ಇಂಗ್ಲಿಷ್ ಮೂಲದಲ್ಲಿ ಕೆ. ಪುರುಷೋತ್ತಮ್ ಅವರು ಅನುವಾದಿಸಿ ಸಂಪಾದಿಸಿದರೆ, ಅದನ್ನು ಡಾ. ಎಚ್. ಎಸ್. ಅನುಪಮಾ ಅವರು ಕನ್ನಡಕ್ಕಿಳಿಸಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ, ತೆಲುಗು ಸಾಹಿತ್ಯವು ವಾಸ್ತವವಾದಿಯಾಗುವಂತೆ ದಲಿತ ಸಾಹಿತ್ಯ ಒತ್ತಾಯಿಸಿತು. ಬೋರು ಹೊಡೆಸುವ ಕಾಲ್ಪನಿಕ ರೋಮ್ಯಾಂಟಿಕ್ ಕವಿತೆಯ ಏಕತಾನತೆ ಮತ್ತು ಪುನರುಜ್ಜೀವನ ಕಾಲದ ನವೋದಯ ಕವಿತೆಯಿಂದ ದೂರ ಸರಿದು, ದಲಿತ ಕವಿತೆ ತನ್ನದೇ ಸ್ಥಾನ ಸೃಷ್ಟಿಸಿಕೊಂಡಿತು. ಸ್ವಾತಂತ್ರೋತ್ತರ ಕಾಲದಲ್ಲಿ ಬೆಚ್ಚಗೆ ಕುಳಿತು ಬರೆಯುತ್ತಿದ್ದ ಓಲೈಕೆ ಕವಿಗಳನ್ನು, ಆರು ಜನ ದಿಗಂಬರ ಕವಿಗಳು ಕಟು ಮಾತುಗಳಲ್ಲಿ ಚಚ್ಚಿ ಬಿಸಾಡಿದರು. ಅದು ತೆಲುಗು ಕವಿತೆಗೆ ಬಹು ಅವಶ್ಯವಿದ್ದ ಒಂದು ತಿರುವನ್ನೊದಗಿಸಿತು. ಸಾಹಿತ್ಯ ಮತ್ತು ಸಮಾಜವನ್ನು ಬೆಸೆಯಿತು. ಕದ್ದನೆಂಬ ಹುಸಿ ಆರೋಪ ಹೊರಿಸಲ್ಪಟ್ಟು, ಮೇಲ್ಜಾತಿಯವರಿಂದ ಜೀವಂತ ಸುಡಲ್ಪಟ್ಟ ದಲಿತ ಹುಡುಗ ಕಂಚಿಕರ್ಲ ಕೋಟೇಶನಿಗೆ ದಿಗಂಬರ ಕವಿಗಳು ತಮ್ಮ 1968ರ ಕವನ ಸಂಗ್ರಹವನ್ನು ಅರ್ಪಿಸಿದರು. ಆನಂತರದ ಮಹಿಳಾ, ದಲಿತ, ಆದಿವಾಸಿ ಇತ್ಯಾದಿ ಅಸ್ಮಿತೆಯ ಚಳವಳಿಗಳಿಗೆ ಇದು ಮುನ್ನುಡಿ ಬರೆಯಿತು.
ಇಲ್ಲಿ ಒಟ್ಟು 39 ಕವಿಗಳಿದ್ದಾರೆ. ಗುರ್ರಂ ಜಾಷುವ, ಕುಸುಮಾ ಧರ್ಮಣ್ಣ, ಬೋಯಿ ಭೀಮಣ್ಣ, ಗದ್ದರ್ ಅವರಿಂದ ಹಿಡಿದು ಕದಿರೆ ಕೃಷ್ಣ, ತೈದಲ ಅಂಜಯ್ಯ, ಐನಲ ಸೈದುಲು ವರೆಗೆ ದಲಿತರ ನೋವುಗಳನ್ನು ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ದಲಿತ ಕವಿತೆಗಳನ್ನು ಅನುವಾದಿಸುವಾಗ ಎದುರಾಗುವ ಅತಿ ದೊಡ್ಡ ಸಮಸ್ಯೆ ಭಾಷೆ. ದೇವನೂರು ಅವರ ಒಡಲಾಳ ಕಾದಂಬರಿಯನ್ನೇ ತೆಗೆದುಕೊಳ್ಳೋಣ. ಆ ಕಾದಂಬರಿಯ ಸೊಗಡು ಆ ಭಾಷೆಯೊಂದಿಗೆ ಬೆಸೆದುಕೊಂಡಿದೆ. ದಲಿತರ ಆಡುಕನ್ನಡದಲ್ಲಿ ಬರೆದಿರುವುದನ್ನು ಇನ್ನೊಂದು ಭಾಷೆಗೆ ಅನುವಾದಿಸುವಾಗ ಅದರ ಆತ್ಮವೇ ಇಲ್ಲವಾಗಿ ಬಿಡಬಹುದು. ಕರಿಕಣಗಿಲ ಕವಿತೆಗಳ ಅನುವಾದದ ಸಂದರ್ಭದಲ್ಲಿ ಆ ದಲಿತ ಭಾಷೆಯ ಸೊಗಡು ಮಾಯವಾಗದಂತೆ ಗರಿಷ್ಠ ಶ್ರಮಿಸಲಾಗಿದೆ. ಹೆಚ್ಚಿನ ಕವಿತೆಗಳಿಗೆ ದಲಿತ ಕನ್ನಡವನ್ನು ಬಳಸಿರುವುದು ಮೆಚ್ಚುವಂತಹದು. ನಿಮ್ಮನ್ನು ಅಲುಗಾಡಿಸುವ ಶಕ್ತಿ ಇಲ್ಲಿರುವ ಕವಿತೆಗಳಿಗಿವೆ.
ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 140 ರೂಪಾಯಿ.