ವೈದಿಕರು ಹಿಂದೂಗಳಲ್ಲ: ಪತ್ರಕರ್ತ ಅಗ್ನಿ ಶ್ರೀಧರ್

Update: 2018-01-05 14:15 GMT

ಬೆಂಗಳೂರು, ಜ.5: ವೈದಿಕತೆ ಎಂಬುದೊಂದು ಸಿದ್ಧಾಂತ. ಹೀಗಾಗಿ, ವೈದಿಕರು ಹಿಂದೂಗಳಲ್ಲ. ವೈದಿಕರಿಗೆ ಹಿಂದೂಗಳ ಬಗ್ಗೆ ಒಂದಿಷ್ಟು ಪ್ರೀತಿ, ಕಾಳಜಿಯಿಲ್ಲ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಇಂದಿಲ್ಲಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಕೋರೆಗಾಂವ್ ಕದನ ಸ್ಮರಣೆ ಅಂದು ಮತ್ತು ಇಂದು: ಒಂದು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ವಲಸೆ ಬಂದಿದ್ದ ವೈದಿಕರು ಇಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಬ್ರಾಹ್ಮಣರಾಗಿದ್ದಾರೆ ಎಂದು ತಿಳಿಸಿದರು.

ವೈದಿಕರಿಗೆ ಹಿಂದೂಗಳ ಮೇಲೆ ಒಂದಿಷ್ಟು ಪ್ರೀತಿ, ಕಾಳಜಿಯಿಲ್ಲ. ಅದು ಇದ್ದಿದ್ದರೆ ಇಷ್ಟು ದಿನಗಳು ಉಡುಪಿ ಮಠದಲ್ಲಿ ನಡೆಯುವ ಸಹಪಂಕ್ತಿ ಭೋಜನದಲ್ಲಿ ಬೇರೆ ಹಿಂದೂಗಳನ್ನು ಸೇರಿಸಿಲ್ಲವೇಕೆ ಎಂದ ಅವರು, ಮಾಂಸ ತಿನ್ನುವವರು ಬರುತ್ತಾರೆ ಎಂಬ ಕಾರಣಕ್ಕೆ ಸೇರಿಸುವುದಿಲ್ಲ ಎಂಬ ಕಾರಣ ಕೊಡುತ್ತಾರೆ. ಆದರೆ, ಮಾಜಿ ಪ್ರಧಾನಿ ವಾಜಪೇಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಮಾಂಸಾಹಾರಿಗಳಾಗಿದ್ದರು. ಅವರನ್ನು ದೂರವಿಡಲಾಗಿತ್ತಾ ಎಂದು ಪ್ರಶ್ನಿಸಿದರು.

ವೈದಿಕರು ಧರ್ಮವನ್ನು ರಕ್ಷಣೆ ಮಾಡುವವರಲ್ಲ. ಬದಲಿಗೆ, ಜನರನ್ನು ಒಡೆಯುವ, ಜನರ ನಡುವೆ ವಿಷ ಬೀಜ ಬಿತ್ತುವ ಸಿದ್ಧಾಂತವೇ ವೈದಿಕ ಧರ್ಮ. ಇಡೀ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ವೈದಿಕರು ಹವಣಿಸಿದರು. ಆ ದಾರಿಯಲ್ಲಿ ಒಂದಷ್ಟು ಸಾಧನೆಯನ್ನೂ ಮಾಡಿದ್ದರು. ಆದರೆ, ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ರಚನೆ ಮೂಲಕ ಇದಕ್ಕೆ ತಡೆಯೊಡ್ಡಿದರು ಎಂದ ಶ್ರೀಧರ್, ವೈದಿಕರು ಸಂವಿಧಾನದ ವಿರೋಧಿಗಳಲ್ಲ. ಅದನ್ನು ರಚನೆ ಮಾಡಿದವರ ವಿರೋಧಿಗಳು. ಅಂಬೇಡ್ಕರ್ ಬದಲಿಗೆ, ಯಾರಾದರೂ ಶಾಸ್ತ್ರಿ ಎಂದಿದ್ದರೆ 12ನೆ ವಿಷ್ಣು ಅವತಾರ ಎಂದು ಪೂಜಿಸುತ್ತಿದ್ದರು ಎಂದು ನುಡಿದರು.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋ ಮಾಂಸದ ಹೆಸರಿನಲ್ಲಿ ತೆರೆ ಮರೆಯಲ್ಲಿ ನಡೆಯುತ್ತಿದ್ದ ಗಲಾಟೆ, ಗಲಭೆಗಳು ಬೀದಿಗೆ ಬಂದವು. ಅಲ್ಲದೆ, ಅದು ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಮೇವು ನೀಡದ, ಹಿಂಡಿ, ಬೂಸ, ನೀರು ಕೊಡದ ವೈದಿಕರು ಗೋವನ್ನು ರಕ್ಷಿಸಿ ಎಂದರು. ಭಾವನಾತ್ಮಕವಾಗಿ ಜನರ ಮನಸ್ಸನ್ನು ದಿಕ್ಕು ತಪ್ಪಿಸಿದರು. ಅದನ್ನು ಜಾರಿ ಮಾಡಲು ದೌರ್ಜನ್ಯಗಳನ್ನು ಆರಂಭಿಸಿದರು ಎಂದು ಹೇಳಿದರು.

ದೇಶದಾದ್ಯಂತ ಅರ್ಧದಷ್ಟಿರುವ ಮಾಂಸಾಹಾರಿಗಳು, ಮುಸ್ಲಿಮರು, ದಲಿತರು ಇದರ ವಿರುದ್ಧ ದಂಗೆ ಏಳಲಿಲ್ಲ. ಹೀಗಾಗಿ, ಅರ್ಧದಷ್ಟು ವಿಜಯ ಸಾಧಿಸಿದ್ದೇವೆ ಎಂದು ಬೀಗುತ್ತಿದ್ದಾರೆ. ಆದರೆ, ಅವರ ಗುರಿ ಅದಾಗಿರಲಿಲ್ಲ. ಮನುವಾದವನ್ನು ಸಂಪೂರ್ಣವಾಗಿ ಜಾರಿ ಮಾಡುವುದು ಅವರ ಮೂಲ ಉದ್ದೇಶವಾಗಿದೆ. ಹೀಗಾಗಿ, ದೌರ್ಜನ್ಯಗಳ ಮುಂದುವರಿದ ಭಾಗವಾಗಿ ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ದಲಿತರ ಮೇಲೆ ದಾಳಿ ಮಾಡಿದರು. ಆದರೆ, ದಲಿತರು ಈ ಸಂದರ್ಭದಲ್ಲಿ ವೈದಿಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಇದರಿಂದ ಹೆದರಿರುವ ವೈದಿಕರು ಮತ್ತೊಂದು ಯೋಜನೆ ರೂಪಿಸುವಷ್ಟರಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಇಂದೂಧರ ಹೊನ್ನಾಪುರ, ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಎನ್.ಅಂಬರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈದಿಕರು ಸಂವಿಧಾನದ ವಿರೋಧಿಗಳಲ್ಲ. ಅದನ್ನು ರಚನೆ ಮಾಡಿದವರ ವಿರೋಧಿಗಳು. ಅಂಬೇಡ್ಕರ್ ಬದಲಿಗೆ, ಯಾರಾದರೂ ಶಾಸ್ತ್ರಿ ಎಂದಿದ್ದರೆ 12ನೆ ವಿಷ್ಣು ಅವತಾರ ಎಂದು ಪೂಜಿಸುತ್ತಿದ್ದರು.
-ಅಗ್ನಿ ಶ್ರೀಧರ್, ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News