ಪ್ರಚೋದನಕಾರಿ ಭಾಷಣ: ಬಜರಂಗದಳದ ಸಂಚಾಲಕನ ವಿರುದ್ಧ ದೂರು ದಾಖಲು

Update: 2018-01-06 11:51 GMT

ಮೂಡಿಗೆರೆ, ಜ.6: ತಾಲೂಕು ಕಚೇರಿ ಆವರಣದಲ್ಲಿ ಜ.5ರಂದು ವಿಎಚ್‍ಪಿ ಮತ್ತು ಬಜರಂಗದಳ ನಡೆಸಿದ ಪ್ರತಿಭಟನೆ ವೇಳೆ ‘ಹಿಂದೂ ಸಂಘಟನೆಗಳು ತಳವಾರು ಹಿಡಿದರೆ ಮುಸ್ಲಿಮರನ್ನು ಕೊಚ್ಚಿ ನಿರ್ನಾಮ ಮಾಡಲು ನಮಗೆ ತಾಕತ್ತಿದೆ’ ಎಂದು ಪ್ರಚೋದನಕಾರಿ ಭಾಷಣ ಮಾಡಿದ ಬಜರಂಗದಳ ತಾಲೂಕು ಸಂಚಾಲಕ ಅವಿನಾಶ್ ವಿರುದ್ಧ ಮಲೆನಾಡು ಮುಸ್ಲಿಂ ಯುವ ವೇದಿಕೆ ಹಾಗೂ ಪೀಸ್ ಆ್ಯಂಡ್ ಅವರ್ನೆಸ್ ಟ್ರಸ್ಟ್ ನ ಪದಾಧಿಕಾರಿಗಳು ಪೊಲೀಸರಿಗೆ ಶನಿವಾರ ಪ್ರತ್ಯೇಕ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಬೆಳಗ್ಗೆ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ತಾಲೂಕಿನ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಈ ವಿಚಾರವಾಗಿ ಚರ್ಚಿಸಿ ಪೊಲೀಸರಿಗೆ ದೂರು ನೀಡಿ, ನಂತರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಮುಸ್ಲಿಮರು ಹಾಗೂ ದಲಿತರ ವಿರುದ್ಧ ದೇಶದ್ರೋಹಿ ಸಂಘಟನೆಗಳಿಂದ ಆಗಾಗ ದೌರ್ಜನ್ಯಗಳು ನಡೆಯುತ್ತಿವೆ. ಇವರಿಗೆ ರಾಜಕೀಯ ಪಕ್ಷವೊಂದು ಗಲಬೆ ನಡೆಸುವಂತೆ ಕುಮ್ಮಕ್ಕು ನೀಡುತ್ತದೆ. ಬೇರೆ ಯಾವುದೋ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಎಳೆದು ತಂದು, ಇಲ್ಲಿನ ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿ, ಪ್ರತಿಭಟನೆಯ ನಾಟಕವಾಡಿ, ಭಾಷಣದಲ್ಲಿ ಬೆದರಿಕೆ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ, ಹಿಂದೂ ಪರರೆಂದು ಸ್ವಯಂ ಘೋಷಿಸಿಕೊಂಡಿರುವ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಬೆದರಿಕೆ ಹಾಕಿರುವ ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸಂಚಾಲಕ ಅವಿನಾಶ್ ಹಾಗೂ ಆತನ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ಬಂಧಿಸಬೇಕು. ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಭವಿಷ್ಯದಲ್ಲಿ ಇನ್ನೆಂದೂ ಅಮಾಯಕ ಮುಸ್ಲಿಂ ಹಾಗೂ ದಲಿತರ ವಿರುದ್ಧ ದೌರ್ಜನ್ಯ ನಡೆಯದಂತೆ ಪೊಲೀಸರು ಹಾಗೂ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಲೆನಾಡು ಮುಸ್ಲಿಂ ಯುವ ವೇದಿಕೆಯ ಆಸೀಫ್ ಬಾಪುನಗರ, ನಾಸೀರ್ ಹುಸೇನ್, ನದೀಮ್, ಅಣ್ಣು, ಬಣಕಲ್‍ನ ಅಬ್ದುಲ್ ಅಝೀಝ್, ಇಮ್ರಾನ್, ಸಫೀಕ್, ಯಾಕೂಬ್ ಗೋಣಿಗದ್ದೆ, ಶಬ್ಬೀರ್ ಅಹಮ್ಮದ್ ಬೇಗ್, ಅಕ್ರಮ್‍ಹಾಜಿ, ಅಜ್ಮಲ್, ಇರ್ಫಾನ್, ಪಪಂ ಸದಸ್ಯ ಕೆ.ವೆಂಕಟೇಶ್, ಜಾಗೃತ ವಿದ್ಯಾರ್ಥಿ ವೇದಿಕೆಯ ಅಂಗಡಿ ಚಂದ್ರು, ಪೀಸ್ ಆ್ಯಂಡ್ ಅವರ್ನೆಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಲ್ತಾಫ್ ಬಿಳಗುಳ, ಆಸೀಫ್ ಗಂಗನಮಕ್ಕಿ, ಯಾದ್‍ಗಾರ್ ಇಬ್ರಾಹಿಂ, ಶಿರಾಜ್, ಶರಿಫ್ ಮತ್ತಿತರರಿದ್ದರು.

ವಿವಿಧ ಸಂಘಟನೆಗಳಿಂದ ಖಂಡನೆ
ಮಂಗಳೂರಿನ ಕಾಟಿಪಳ್ಳದ ಯುವಕನೋರ್ವನ ಕೊಲೆಯ ವಿಚಾರವಾಗಿ ಬಜರಂಗದಳ ವಿಶ್ವಹಿಂದೂ ಪರಿಷತ್ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಬಜರಂಗದಳ ಸಂಚಾಲಕ ಅವಿನಾಶ್ ಎಂಬಾತ ಮುಸ್ಲಿಮರನ್ನು ತಲವಾರಿನಿಂದ ಕೊಚ್ಚಿ ನಿರ್ನಾಮ  ಮಾಡುತ್ತೇವೆಂದು ಪ್ರಚೋಧನಕಾರಿ ಭಾಷಣ ಮಾಡಿರುವುದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣ ವೇದಿಕೆ ತಾಲೂಕು ಕಾರ್ಯದರ್ಶಿ ಕೆ.ಕೆ.ರಾಮಯ್ಯ, ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕವಳ್ಳಿ ರಮೇಶ್, ಹಿರಿಯ ಮುಖಂಡರಾದ ಯು.ಬಿ.ಮಂಜಯ್ಯ, ಬೆಟ್ಟಗೆರೆ ಶಂಕರ್, ಶ್ರೀಕಾಂತ್,  ನಾಗರಾಜು ಮತ್ತಿತರರು ಖಂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News