ಕವಲುಹಾದಿಯಲ್ಲಿ ರಜನಿಕಾರಣ

Update: 2018-01-06 18:33 GMT

ಸೂಪರ್ ಸ್ಟಾರ್ ರಜನಿಕಾಂತ್ ಕೊನೆಗೂ ತಮಿಳುನಾಡಿನ ರಾಜಕಾರಣವೆಂಬ ನೀರಿಗೆ ಧುಮುಕಿದ್ದಾರೆ. ಹಾಗೆ ನೋಡಿದರೆ, 2002ರಲ್ಲಿ ತೆರೆಗೆ ಬಂದ, ರಜನಿ ನಟಿಸಿದ್ದ ‘ಬಾಬಾ’ ಚಿತ್ರದಲ್ಲಿಯೇ ರಾಜಕೀಯ ಮತ್ತು ಅಧ್ಯಾತ್ಮದ ಬಗ್ಗೆ ಪ್ರಸ್ತಾಪಿಸಿದ್ದರು. ಸುಮಾರು ಹದಿನೈದು ವರ್ಷಗಳ ನಂತರ, ಅದೇ ರಾಜಕೀಯ ಮತ್ತು ಅಧ್ಯಾತ್ಮದ ಮಾತುಗಳನ್ನಾಡುತ್ತಿದ್ದಾರೆ. ಆಗ ರೀಲ್, ಈಗ ರಿಯಲ್. ಆಗ ಮನರಂಜನೆ, ಈಗ ಮತಬೇಟೆ. ಅಭಿಮಾನಿಗಳ ಜೈಕಾರ, ಚಪ್ಪಾಳೆ, ಶಿಳ್ಳೆ ವಾತ್ರ ಆಗಲೂ, ಈಗಲೂ ಹಾಗೆಯೇ ಇದೆ.

‘ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಚಿತ್ರರಂಗದಲ್ಲಿ ಗಳಿಸಿದ ಹೆಸರು ಮತ್ತು ಖ್ಯಾತಿಯಷ್ಟೇ ಸಾಲದು. ಸಾರ್ವಜನಿಕ ವ್ಯವಹಾರಗಳನ್ನು ಒಳಗೊಂಡಿರುವ ರಾಜಕೀಯ ಕ್ಷೇತ್ರಕ್ಕೆ ಇಂತಹ ಸಂಗತಿಗಳಿಗಿಂತ ಹೆಚ್ಚಿನದೇನೋ ಆವಶ್ಯಕತೆಯಿದೆ’ ಎನ್ನುವ ಜ್ಞಾನೋದಯ ಈಗಾಗಲೇ ರಜನಿಗಾಗಿದೆ. ಅಭಿಮಾನಿಗಳನ್ನು ಮತದಾರರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ- ನಿರ್ದೇಶಕ, ನಿರ್ಮಾಪಕ, ನಾಯಕನಟನೂ ಆಗಬೇಕಿದೆ. ಶ್ರಮ, ಹಣ, ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಿದೆ. ಬೀದಿಗಿಳಿದು ಬಡವರ ಹೆಗಲ ಮೇಲೆ ಕೈ ಹಾಕಬೇಕಿದೆ. ಸಾರ್ವಜನಿಕ ಸೇವೆಗೆ ಸಿದ್ಧವಾಗಬೇಕಿದೆ. ಮಾತೆತ್ತಿದರೆ ಅಧ್ಯಾತ್ಮ, ಧ್ಯಾನ, ಧರ್ಮ, ದೀಕ್ಷೆ ಎನ್ನುವ 67ರ ಹರೆಯದ ರಜನಿಗೆ ಇದು ಸಾಧ್ಯವೇ?

ಸಿನೆಮಾವನ್ನು ಲಾರ್ಜರ್ ದ್ಯಾನ್ ಲೈಫ್ ಎಂದೇ ವ್ಯಾಖ್ಯಾನಿಸಲಾಗುತ್ತದೆ. ನಾಯಕನ ವರ್ಚಸ್ಸಿಗೆ, ಜನಪ್ರಿಯತೆಗೆ ಹಾಗೂ ಆತನಿಗಿರುವ ಅಭಿಮಾನಿ ಬಳಗಕ್ಕೆ ಬೇಕಾಗುವ ಹಾಗೆ ಕತೆ, ಪಾತ್ರ, ಸಂಭಾಷಣೆಯನ್ನು ಸೃಷ್ಟಿಸಲಾಗುತ್ತದೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ವಿಷಯದಲ್ಲಿಯೂ ಅದು ಚಿತ್ರದಿಂದ ಚಿತ್ರಕ್ಕೆ ಸಾಬೀತಾಗಿದೆ. ಅಸಾಧ್ಯವನ್ನು ಸಾಧ್ಯವಾಗಿಸುವ, ಸಾಮಾನ್ಯನನ್ನು ಅಸಾಮಾನ್ಯನನ್ನಾಗಿಸುವ, ಅಂಗೈನಲ್ಲಿ ಅರಮನೆ ಸೃಷ್ಟಿಸುವ ನಿಟ್ಟಿನಲ್ಲಿ ರಜನಿಕಾಂತ್ ಯಶಸ್ವಿಯಾಗಿದ್ದಾರೆ. ತಮಿಳರ ‘ತಲೈವರ್’ ಆಗಿ ರೂಪಾಂತರಗೊಂಡಿದ್ದಾರೆ. ನಿಜ. ಆದರೆ ಅದೆಲ್ಲ ಬೆಳ್ಳಿತೆರೆಯಲ್ಲಿ. ನಿಜ ಬದುಕಿನಲ್ಲಲ್ಲ.

ತಮಿಳುನಾಡಿನ ರಾಜಕಾರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದು, ಬಣ್ಣದ ಮಂದಿ ರಾಜಕಾರಣಿಗಳಾಗಿ ರಾಜ್ಯ ಆಳಿರುವುದು ಎದ್ದು ಕಾಣುತ್ತದೆ. 1972ರಲ್ಲಿ ರಾಜಕೀಯಕ್ಕಿಳಿದು, 75ರಲ್ಲಿ ಪಾರ್ಟಿ ಕಟ್ಟಿ, 77ರಲ್ಲಿ ಅಧಿಕಾರಕ್ಕೇರಿ 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಚಿತ್ರನಟ ಎಂಜಿಆರ್, ತಮಿಳುನಾಡಿನ ಜನರ ಆರಾಧ್ಯದೈವವಾಗಿ ಅಜರಾಮರರಾಗಿದ್ದಾರೆ. ಹಾಗೆಯೇ ಎಂಜಿಆರ್ ಜೊತೆಗೆ ಗುರುತಿಸಿಕೊಂಡ ಚಿತ್ರನಟಿ ಜಯಲಲಿತಾ ಕೂಡ, ಎಂಜಿಆರ್ ಮರಣಾನಂತರ 1989ರಲ್ಲಿ ರಾಜಕೀಯಕ್ಕಿಳಿದು, 14 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೆರೆದದ್ದು, ತಮಿಳರ ಹೃದಯದಲ್ಲಿ ‘ಅಮ್ಮ’ನ ಸ್ಥಾನ ಪಡೆದದ್ದು ಸಾಮಾನ್ಯ ಸಂಗತಿಯೇನಲ್ಲ. ಇನ್ನು ಸಿನೆಮಾಗಳಿಗೆ ಸಾಹಿತ್ಯ ಸಂಭಾಷಣೆ ಬರೆಯುತ್ತಿದ್ದ ಕರುಣಾನಿಧಿ, ಎಂಜಿಆರ್‌ಗಿಂತಲೂ ಮುಂಚೆಯೇ ರಾಜಕೀಯಕ್ಕಿಳಿದು, ಹಿಂದಿ ವಿರುದ್ಧ ಯುವಕರನ್ನು ಸಂಘಟಿಸಿದ್ದು, ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷದಿಂದ ಐದು ಸಲ ಮುಖ್ಯಮಂತ್ರಿಯಾಗಿ 19 ವರ್ಷಗಳ ಕಾಲ ರಾಜ್ಯಾಳಿದ್ದು ಹುಡುಗಾಟಿಕೆಯ ವಿಷಯವಲ್ಲ.

ಹೀಗೆ ತಮಿಳುನಾಡಿನಲ್ಲಿ ಸಿನೆಮಾ ಎನ್ನುವುದು ಜನರ ಬದುಕಿನೊಂದಿಗೆ ಬೆಸೆದುಕೊಂಡಿದೆ. ರಾಜಕಾರಣಕ್ಕೆ ಸಂಪರ್ಕ ಸೇತುವೆಯಾಗಿ ಬಳಕೆಯಾಗುತ್ತಲೇ ಬಂದಿದೆ. ಹಲವಾರು ಜನರನ್ನು ಅಧಿಕಾರದ ಸ್ಥಾನದಲ್ಲಿ ಕೂರಿಸಿ ಮೆರೆಸಿದೆ. ಈಗ ರಜನಿಕಾಂತ್ ಕೂಡ ಇದೇ ಇತಿಹಾಸವನ್ನು ಓದಿಕೊಂಡು, ಅದೇ ನಾಯಕರನ್ನು ನೋಡಿಕೊಂಡು ಬೆಳೆದವರೇ ಆದ್ದರಿಂದ, ‘ಮತ್ತೊಬ್ಬ ಎಂಜಿಆರ್’ ಆಗುವ ನಿಟ್ಟಿನಲ್ಲಿ ರಾಜಕಾರಣದತ್ತ ಹೆಜ್ಜೆ ಹಾಕಿದ್ದಾರೆ. ಸಮರ್ಥ ನಾಯಕನ ನಿರೀಕ್ಷೆಯಲ್ಲಿರುವ ತಮಿಳುನಾಡಿನ ಜನರ ಆಶಯಗಳಿಗೆ ಪೂರಕವಾಗಿ ಸ್ಪಂದಿಸುವ, ತಮಿಳುನಾಡಿನ ರಾಜಕೀಯಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಈ ಬೆಳವಣಿಗೆಗೆ ಈಗ ಹೆಚ್ಚು ಮಹತ್ವ ಬಂದಿದೆ. ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಇದು ಸಕಾಲ ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ಪುಷ್ಟೀಕರಿಸಲು ಕರುಣಾನಿಧಿಗೆ ವಯಸ್ಸಾಗಿ, ಅನಾರೋಗ್ಯಕ್ಕೆ ತುತ್ತಾಗಿ ಡಿಎಂಕೆ ಕಳೆಗುಂದಿದೆ. ಗಟ್ಟಿಗಿತ್ತಿ ಜಯಲಲಿತಾರ ನಿರ್ಗಮನದಿಂದ ದೊಡ್ಡದೊಂದು ನಿರ್ವಾತ ಏರ್ಪಟ್ಟಿದೆ. ಶಶಿಕಲಾ ಜೈಲು ಸೇರಿ ಸದ್ದಡಗಿದೆ. ಗುಂಪುಗಾರಿಕೆ, ಒಳಜಗಳ, ಕಿತ್ತಾಟ, ಅತಿಯಾದ ಭ್ರಷ್ಟಾಚಾರದಿಂದಾಗಿ ಎಐಎಡಿಎಂಕೆ ಜನರ ವಿಶ್ವಾಸ ಕಳೆದುಕೊಂಡಿದೆ. ಇವರೆಲ್ಲರ ನಡುವೆ ನಿಜಕ್ಕೂ ತಮಿಳುನಾಡಿನಲ್ಲಿ ಭಿನ್ನ ರಾಜಕಾರಣಕ್ಕೆ ಕೈ ಹಾಕಿದ್ದವರು ಚಿತ್ರನಟ ವಿಜಯಕಾಂತ್. ಕಷ್ಟಪಟ್ಟು ಪಕ್ಷ ಕಟ್ಟಿ, ಜಾತಿ ಧರ್ಮದ ನೆಲೆ ಬಿಟ್ಟು ಪ್ರಗತಿಪರತೆಗೆ ಒತ್ತು ಕೊಟ್ಟು ಒಂದು ಹಂತದವರೆಗೆ ಯಶಸ್ವಿಯಾಗಿದ್ದ ವಿಜಯಕಾಂತ್, ಕಳೆದ ಬಾರಿಯ ಚುನಾವಣೆಯಲ್ಲಿ ರಜನಿಯ ತಮಿಳು ಪ್ರೀತಿಯ ಬಗ್ಗೆ ಮಾತನಾಡಿ, ಒಂದೇ ಒಂದು ಸ್ಥಾನವನ್ನೂ ಗೆಲ್ಲದೆ, ಸೋತು ಸುಸ್ತಾಗಿ ಕೂತಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್‌ಗೆ ತಮಿಳುನಾಡಿನಲ್ಲಿ ಸರಿಸುಮಾರು 50 ಸಾವಿರ ಅಭಿಮಾನಿ ಸಂಘಗಳಿವೆ. ಇವುಗಳಲ್ಲಿ ಒಂದೊಂದು ಸಂಘದಿಂದ ಕಡಿಮೆ ಎಂದರೂ 20ರಿಂದ 30 ಜನ, ರಜನಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಾದ ಅಸಲಿ ಅಭಿಮಾನಿಗಳಿದ್ದಾರೆ. ಮೈ ಮೇಲೆ ತುಂಡು ಬಟ್ಟೆ ಇಲ್ಲದಿದ್ದರೂ ತನ್ನ ‘ತಲೈವರ್’ಗೆ ಸ್ಟಾರ್ ಕಟ್ಟುವ, ಕಟೌಟ್‌ಗೆ ಹೂವಿನಿಂದ ಮುಚ್ಚುವ, ಹಾಲು ಸುರಿದು ಅಭಿಷೇಕ ಮಾಡುವ ಅಂಧಾಭಿಮಾನಿಗಳು ತಮಿಳುನಾಡಿನಾದ್ಯಂತ ಇದ್ದಾರೆ. ಇವರು ರಜನಿಯ ಅಭಿಮಾನಿಗಳೇ ಹೊರತು, ರಜನಿಯ ಹೊಸ ಪಕ್ಷದ ಕಾರ್ಯಕರ್ತರಲ್ಲ. ಈ ಸತ್ಯ ರಜನಿಗೂ ಗೊತ್ತಿದೆ. ಅದಕ್ಕಾಗಿ ಅವರು ಇನ್ನು ಮೂರು ವರ್ಷದಲ್ಲಿ, 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ತಯಾರಿಗಾಗಿ ಇನ್ನಷ್ಟು ಅಭಿಮಾನಿ ಸಂಘಗಳನ್ನು ಹುಟ್ಟುಹಾಕಿ, ಅವುಗಳನ್ನು ಪಕ್ಷದ ಘಟಕಗಳನ್ನಾಗಿ ಪರಿರ್ತಿಸುವ ಯೋಚನೆಯೂ ಇದೆಯಂತೆ.

ತಮಿಳುನಾಡು ಹೇಳಿಕೇಳಿ ದ್ರಾವಿಡ ನಾಡು. ಬೀದಿಯಲ್ಲಿ ದೇವರ ಪಟಕ್ಕೆ ಮೆಟ್ಟಿನಿಂದ ಹೊಡೆದು ವೈಚಾರಿಕ ಪ್ರಜ್ಞೆ ಬಿತ್ತಿದ ಪೆರಿಯಾರ್ ಬೀಡು. ಸಾಮಾಜಿಕ ನ್ಯಾಯ, ಜಾತಿ ವಿಮೋಚನೆ, ಸಮಾನತೆ ಮುಂತಾದ ಸೋಷಿಯಲಿಸ್ಟ್ ವಿಚಾರಧಾರೆಯ ಭದ್ರ ಅಡಿಪಾಯವಿರುವ; ಉತ್ತರ ಭಾರತದ ಹಿಂದಿಯನ್ನು ಪ್ರಬಲವಾಗಿ ವಿರೋಧಿಸುವ ರಾಜ್ಯ. ತಮಿಳು ಭಾಷೆ, ನೆಲ, ಜಲಕ್ಕಾಗಿ ಭಾವನಾತ್ಮಕವಾಗಿ ಕೆರಳುವ, ತಮಿಳು ಅಸ್ಮಿತೆಯನ್ನು ಕರುಳಿನಂತೆ ಕಾಪಿಟ್ಟುಕೊಂಡವರು ತಮಿಳಿಗರು. ಇಂತಹ ಜನರ ನಡುವೆ ಕನ್ನಡಿಗ ರಜನಿಯ ವೈದಿಕ ವಿಚಾರಧಾರೆಯ ರಾಜಕಾರಣ ಹೇಗೆ ಎನ್ನುವ ಪ್ರಶ್ನೆಯೂ ಶುರುವಾಗಿದೆ. ಜೊತೆಗೆ ಐದು ದಶಕಗಳ ಕಾಲ ದ್ರಾವಿಡ ರಾಜಕಾರಣ ತಮಿಳರಿಗೆ ಬೇಸರ ತರಿಸಿ, ಬದಲಾವಣೆ ಬಯಸಿರಬಹುದು ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ.

ಇವೆಲ್ಲವುಗಳ ನಡುವೆಯೇ ಡಿಎಂಕೆಯ ಕರುಣಾನಿಧಿಯನ್ನೂ ಭೇಟಿ ಮಾಡಿ ಮಾತನಾಡುವ; ರಾಜಕಾರಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿರುವ ಮತ್ತೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ಜೊತೆಗೂ ಉತ್ತಮ ಒಡನಾಟವಿಟ್ಟುಕೊಂಡಿರುವ; ಚೆನ್ನೈನಲ್ಲಿರುವ ರಾಮಕೃಷ್ಣ ಮಿಷನ್ ಸ್ವಾಮೀಜಿಯನ್ನು ಭೇಟಿ ಮಾಡಿ ರಾಜಕೀಯ ನಡೆಯ ಬಗ್ಗೆ ಆಧ್ಯಾತ್ಮಿಕ ಮಾರ್ಗದರ್ಶನವನ್ನೂ ಪಡೆಯುವ; ‘ಕಬಾಲಿ’ ಚಿತ್ರದ ಪಾ. ರಂಜಿತ್ ಎಂಬ ಸಂವೇದನಾಶೀಲ ಸಿನೆಮಾ ನಿರ್ದೇಶಕನ ಜೊತೆ ಸೇರಿ ದಲಿತ ರಾಜಕಾರಣವನ್ನೂ ಚರ್ಚಿಸುವ; ‘ತುಘಲಕ್’ ಪತ್ರಿಕೆಯ ಸಂಪಾದಕರಾದ, ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ಗುರುಮೂರ್ತಿಯ ಮಾತನ್ನೂ ಕೇಳುವ; ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನೂ ಭೇಟಿ ಮಾಡುವ ರಜನಿಯ ನಡೆ- ತಮಿಳುನಾಡಿನ ಜನಕ್ಕಲ್ಲ, ಸ್ವತಃ ರಜನಿಯನ್ನೇ ಗೊಂದಲಕ್ಕೆ ಕೆಡವಿದ್ದರೆ ಆಶ್ಚರ್ಯವಿಲ್ಲ.

ಹಾಗೆಯೇ ತಮಿಳುನಾಡಿನ ರೈತರು ಅರೆಬೆತ್ತಲೆಯಾಗಿ ದಿಲ್ಲಿಯಲ್ಲಿ ಧರಣಿ ಕೂತಾಗ ಸೊಲ್ಲೆತ್ತದ, ಕೂಡಂಕುಳಂ ಅಣುಸ್ಥಾವರದ ವಿರೋಧಿ ಹೋರಾಟವನ್ನು ಬೆಂಬಲಿಸದ, ರಾಮೇಶ್ವರ-ಕನ್ಯಾಕುಮಾರಿ ಸುತ್ತಮುತ್ತಲಿನ ಮೀನುಗಾರರ ಇತ್ತೀಚಿನ ಸಾವು-ನೋವಿನ ಬಗ್ಗೆ ಮಾತನಾಡದ, ತಮಿಳುನಾಡಿನ ಸಾಮಾಜಿಕ ಹೋರಾಟಗಳಲ್ಲಿ ಒಂದರಲ್ಲೂ ಭಾಗಿಯಾಗದ ರಜನಿ, ‘‘ನಾನು ತಮಿಳುನಾಡು ರಾಜಕೀಯದಲ್ಲಿ ಕ್ರಾಂತಿ ಬಯಸಿದ್ದೇನೆ. ಈಗ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದರೆ ಭವಿಷ್ಯದ ಜನಾಂಗಕ್ಕೆ ಒಳ್ಳೆಯದಾಗುತ್ತದೆ’’ ಎಂದಿರುವುದು- ಯಾವುದೋ ಸಿನೆಮಾದ ಡೈಲಾಗಿನಂತೆ, ಕ್ಯಾಮರಾ ಮುಂದಿನ ನಟನೆಯಂತೆ ಕಾಣಿಸುತ್ತಿದೆ ಎನ್ನುವವರಿದ್ದಾರೆ.

 ಹಾಗೆ ನೋಡಿದರೆ, ರಜನಿಕಾಂತ್ ಶ್ರಮಜೀವಿ. ತಮಿಳರ ಬದುಕನ್ನು, ದ್ರಾವಿಡ ಸಂಸ್ಕೃತಿಯನ್ನು, ಪ್ರಾದೇಶಿಕ ಪಕ್ಷ ರಾಜಕಾರಣವನ್ನು ಕಣ್ಣಾರೆ ಕಂಡವರು. ಅದಕ್ಕಿಂತಲೂ ಮುಖ್ಯವಾಗಿ ಸ್ವತಃ ರಜನಿಕಾಂತ್ ಬಡತನವನ್ನು, ಹಸಿವನ್ನು, ಅವಮಾನವನ್ನು ಅನುಭವಿಸಿದವರು. ಕಡು ಕಷ್ಟದಲ್ಲಿ ಒದ್ದಾಡಿ, ಕೈಗೆ ಸಿಕ್ಕ ಕೆಲಸ ಮಾಡಿ ಬೆಳೆದವರು. ನಾಟಕ-ಸಿನೆಮಾ ಎಂದು ಹುಚ್ಚು ಹತ್ತಿಸಿಕೊಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಬಿಟಿಎಸ್ ಕಂಡಕ್ಟರ್ ಆದವರು. ಸ್ನೇಹಿತರ ಸಹಾಯದಿಂದ ಮದ್ರಾಸ್ ಸೇರಿ ನಟನೆಯ ತರಬೇತಿ ಪಡೆದವರು. ಕೆ.ಬಾಲಚಂದರ್, ಪುಟ್ಟಣ್ಣ ಕಣಗಾಲ್, ಬಾಲುಮಹೇಂದ್ರ, ಮಣಿರತ್ನಂರಂತಹ ಸೃಜನಶೀಲ ನಿರ್ದೇಶಕರ ಕೈಗೆ ಸಿಕ್ಕು ಕಲಾವಿದರಾದವರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು. ಚಿತ್ರವೊಂದಕ್ಕೆ ನೂರಾರು ಕೋಟಿ ಸಂಪಾದನೆ ಮಾಡುವ ಅತಿಶ್ರೀಮಂತ ನಟ ಎಂಬ ಖ್ಯಾತಿಗೆ ಒಳಗಾಗಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದವರು. ಬದುಕಿನಲ್ಲಿ ಬಯಸಿದ್ದೆಲ್ಲ ಸಿಕ್ಕಾಗ, ಬದುಕು ನಶ್ವರ ಎಂದು ಆಧ್ಯಾತ್ಮಿಕದತ್ತ ಒಲವು ತೋರಿ, ಹಿಮಾಲಯ ಪರ್ವತವೇರಿ ಇಳಿದುಬಂದವರು.

ಹೀಗಾಗಿ ರಜನಿ ಎಂಬ ಬಾಬಾಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ಏನು ಬೇಕಾಗಿಯೂ ಇಲ್ಲ. ಆದರೂ ಅವರ ಆಧ್ಯಾತ್ಮಿಕ ರಾಜಕಾರಣದ ಬಗ್ಗೆ ಜನರಲ್ಲಿ ವಿಶ್ವಾಸವೇ ಹುಟ್ಟುತ್ತಿಲ್ಲ. ಅದಕ್ಕೆ ಕಾರಣ, ಈ ಆಧ್ಯಾತ್ಮಿಕ ರಾಜಕಾರಣ ಬಯಸುವ ರಜನಿ ಮನಸ್ಥಿತಿ ಬಿಜೆಪಿಗೆ ಕೊಂಚ ಹತ್ತಿರವಾಗಿರುವುದರಿಂದ, ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲು ರಜನಿಯನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದೆಯೇ ಎಂಬ ಅನುಮಾನ ತಮಿಳುನಾಡಿನ ಜನರಲ್ಲಿ ದಟ್ಟವಾಗಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ರಜನಿ ತೆಗೆದುಕೊಳ್ಳುವ ನಿಲುವು-ನಿರ್ಧಾರಗಳ ಮೇಲೆ, ರಜನಿಯ ಭವಿಷ್ಯದ ರಾಜಕೀಯ ಬದುಕು ನಿಂತಿದೆ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News