ಅಡ್ಯನಡ್ಯದ 2ನೇ ಕುಟ್ಟಿಚ್ಚಾತನ್
ಬಾಗ 27
ಅಡ್ಯನಡ್ಯದಲ್ಲಿ 1984ರಲ್ಲಿ ಕಂಡು ಬಂದಿದ್ದ ಕುಟ್ಟಿಚ್ಚಾತನ್ ಪೀಡೆಯನ್ನು ನಮ್ಮ ತಂಡ ನಿಲ್ಲಿಸಿತ್ತು. ಆದರೆ ಇದಾಗಿ ಒಂದೂವರೆ ದಶಕದ ಬಳಿಕ ಮತ್ತೊಮ್ಮೆ ನಮಗೆ ಅಲ್ಲಿಂದ ಕರೆ ಬಂದಿತ್ತು. ಈ ಬಾರಿ ಅಡ್ಯನಡ್ಯದ ಬಳಿಯ ನೆಗಳಗುಳಿ ಎಂಬ ಗ್ರಾಮದಿಂದ ಕರೆ ಬಂದಿದ್ದು. ಅಲ್ಲಿನ ಮನೆಯೊಂದರಲ್ಲಿ ಭೂತ ಕಾಟ ನೀಡಲಾರಂಭಿಸಿತ್ತು. ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ಯಾವುದೋ ಮೂಲೆಯಿಂದ ಕಲ್ಲುಗಳು ಮನೆಯ ಹೆಂಚುಗಳ ಮೇಲೆ ಬಿದ್ದು, ಹಂಚುಗಳನ್ನೇ ಪುಡಿ ಮಾಡುತ್ತಿದ್ವು. ಇದರಿಂದ ಭಯಗೊಂಡ ಮನೆಯವರು ಸಹಾಯಕ್ಕಾಗಿ ಮನವಿ ಮಾಡಿದ್ದರು. ಅವರ ಮನವಿಗೆ ಒಪ್ಪಿದ ನಾವು, ಅಲ್ಲಿಗೆ ತೆರಳಿದೆವು. ನೆಗಳಗುಳಿ ಕೇರಳ ರಾಜ್ಯದಲ್ಲಿರುವ ಒಂದು ಗ್ರಾಮ. ಹೊಳೆಯ ಉತ್ತರಕ್ಕೆ ಕರ್ನಾಟಕವಾದರೆ, ದಕ್ಷಿಣಕ್ಕೆ ಕೇರಳ. ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು. ಕಷ್ಟಪಟ್ಟು ಕೂಲಿ ಮಾಡಿ ಜೀವಿಸುತ್ತಿದ್ದ ಕುಟುಂಬವದು. ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ, ಇಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿರುತ್ತಿದ್ದರು. ಮೂರನೆಯವರು ಪಕ್ಕದಲ್ಲಿ ಒಂದು ಗುಡಿಸಲು ಕಟ್ಟಿಕೊಂಡಿದ್ದಳು. ಅವಳ ಮನೆಯೆದುರು ಒಂದು ಗಂಡಸಿನ ಫೋಟೊ ಇತ್ತು. ವಿಚಾರಿಸಿದಾಗ, ಅದು ಆಕೆಯ ಪತಿಯದ್ದೆಂದು, ಆಕೆಯನ್ನು ಮದುವೆಯಾಗಿ ಇಬ್ಬರು ಮಕ್ಕಳಾದ ಬಳಿಕ ಆತ ನಾಪತ್ತೆಯಾಗಿರುವುದಾಗಿ ನಮಗೆ ಮಾಹಿತಿ ದೊರೆಯಿತು. ನಮ್ಮೆಂದಿಗೆ ಬಂದಿದ್ದ ಸ್ಥಳೀಯರು ಆ ಹೆಣ್ಣು ಮಕ್ಕಳಿಗೆ ನಮ್ಮನ್ನು ಪರಿಚಯಿಸಿದರು. ಇಬ್ಬರೂ ಅನಕ್ಷರಸ್ಥರು. ಆದರೂ ಕೇಳಿದ ಪ್ರಶ್ನೆಗಳಿಗೆ ತುಳು ಮತ್ತು ಕನ್ನಡದಲ್ಲಿ ಉತ್ತರಿಸಿದರು. ಅವರು ಹೇಳಿದ ಪ್ರಕಾರ ಈ ಭೂತದ ಕಾಟ ಕೆಲ ತಿಂಗಳ ಹಿಂದೆ ಆರಂಭವಾಗಿತ್ತು. ಮೊದಲು ಚಿಕ್ಕಪುಟ್ಟ ವಸ್ತುಗಳ ಸ್ಥಳಾಂತರದಿಂದ ಆರಂಭಗೊಂಡ ಭೂತ ಚೇಷ್ಟೆ ನಂತರ ಮಾಡಿನ ಹೆಂಚುಗಳನ್ನು ಒಡೆಯುವುದು, ಕೊಡಪಾನ ಅಡ್ಡ ಹಾಕುವುದು, ತಂಬಿಗೆಗಳು ಹಾರಾಡುವವರೆಗೆ ಮುಂದುವರಿಯಿತು. ಇದನ್ನು ತಡೆಯಲಾರದೆ ಮನೆಯವರು ಮಂತ್ರವಾದಿಯ ಮೊರೆ ಹೋದರು. ಅನೇಕ ರೀತಿಯ ಮಂತ್ರಾದಿ ಕಾರ್ಯಗಳು ನಡೆದವು. ಆದರೆ ಪ್ರಯೋಜನ ಮಾತ್ರ ಆಗಿರಲಿಲ್ಲ. ಭೂತ ಚೇಷ್ಟೆ ಮಾತ್ರ ಮುಂದುವರಿದಿತ್ತು. ಮನೆಯಲ್ಲಿದ್ದವರನ್ನು ಒಬ್ಬೊಬ್ಬರಾಗಿಯೇ ವಿಚಾರಿಸಲಾಯಿತು. ಆ ಸಂದರ್ಭ ನಮಗೆ ಆ ಭೂತವನ್ನು ಕಂಡು ಹಿಡಿಯುವುದು ತ್ರಾಸದಾಯಕವಾಗಲಿಲ್ಲ. ನಾವಿದ್ದ ಸಂದರ್ಭದಲ್ಲೇ ಅಲ್ಲಿ ಒಂದು ಬಾಟಲೂ ಒಡೆಯಿತು. ಆಗ ಅಲ್ಲಿದ್ದ ಒಬ್ಬಾಕೆಯನ್ನು ಉದ್ದೇಶಿಸಿ, ‘ಇನ್ನು ಮುಂದೆ ಇದೆಲ್ಲಾ ಸಾಕು’ ಎಂದು ಹೆಸರು ಹೇಳಿ ಆಕೆಯನ್ನು ಕರೆದೆವು. ಆಕೆಗೂ ತನ್ನ ಭೂತ ಚೇಷ್ಟೆಯ ಕುತಂತ್ರ ಬಯಲಾದ ಬಗ್ಗೆ ಅರಿವಾಗಿತ್ತು. ಸ್ಥಳೀಯರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲೆತ್ನಿಸಿದಾಗ, ಆ ಹೆಣ್ಣು ಮಗಳ ಭೂತ ಚೇಷ್ಟೆಯ ಕಾರಣ ನಮಗೆ ಸ್ಪಷ್ಟವಾಗಿತ್ತು. ಆ ಮನೆಯ ಹೆಣ್ಣು ಮಕ್ಕಳಿಗೆ ಮದುವೆಯಾಗಿರದಿದ್ದರೂ ಅವರೆಗೆಲ್ಲಾ ಪ್ರಿಯಕರರು ಇದ್ದರು. ಗಂಡ ಕಾಣೆಯಾಗಿದ್ದಾಳೆಂದು ಹೇಳಿದಾಕೆಯ ಕತೆಯೂ ಇದೇ. ಎರಡನೆಯವಳಿಗೆ ಒಬ್ಬ ಪ್ರಿಯಕರನಿದ್ದು, ಆತ ದಿನಾ ಮನೆಗೆ ಬಂದು ಹೋಗುತ್ತಿದ್ದ. ಇದನ್ನೆಲ್ಲಾ ಗಮನಿಸುತ್ತಿದ್ದ ಕೊನೆಯಾಕೆ ಸಹಿಸಲಾಗದೆ ಈ ಭೂತ ಚೇಷ್ಟೆಯನ್ನು ಸೃಷ್ಟಿಸಿದ್ದಳು. ನಾವು ಆಕೆಯ ಸಹೋದರನ್ನು ಮಾತನಾಡಿಸಿ, ಆಕೆಗೆ ಮನೋರೋಗ ತಜ್ಞರಿಂದ ಚಿಕಿತ್ಸೆ ನೀಡುವಂತೆ ಸಲಹೆ ಮಾಡಿದೆವು. ಆಕೆಯನ್ನು ಮಂಗಳೂರಿಗೆ ಕರೆತರುವಂತೆ ಹೇಳಿದೆವು. ಅವರು ನಮ್ಮ ಮಾತಿಗೆ ಒಪ್ಪಿಕೊಂಡರು. ಆದರೆ ಕೆಲ ದಿನಗಳಾದರೂ ಅವರು ಬರಲಿಲ್ಲ. ಅವರಿಗೆ ಚಿಕಿತ್ಸೆಯಲ್ಲಿ ಆಸಕ್ತಿ ಇಲ್ಲದ್ದು ನಮಗೆ ಸ್ಪಷ್ಟವಾಯಿತು. ಆದರೆ ಆ ಬಳಿಕ ಆ ಮನೆಯಲ್ಲಿ ಭೂತ ಚೇಷ್ಟೆಗಳು ಮಾತ್ರ ಸಂಪೂರ್ಣವಾಗಿ ನಿಂತು ಹೋಗಿತ್ತು. ಇನ್ನೂ ತಲುಪಬೇಕಾಗಿದೆ ಮೂಢನಂಬಿಕೆ ವಿರುದ್ಧದ ಸಂದೇಶ...
ಕಳೆದ ಸುಮಾರು 30 ವರ್ಷಗಳಿಂದೀಚೆಗೆ ನಾನು ಹಾಗೂ ನಮ್ಮ ತಂಡ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನವನ್ನು ಮುಂದುವರಿಸಿದ್ದೇವೆೆ. ಈ ನಡುವೆ ನನ್ನನ್ನು ಲಕ್ಷಾಂತರ ಮಂದಿ ಭೇಟಿಯಾಗಿದ್ದಾರೆ. ಇವರಲ್ಲಿ ಕೆಲವು ಮಂದಿಯಾದರೂ ತಮ್ಮ ಜೀವನದಲ್ಲಿ ಮೂಢನಂಬಿಕೆಗಳಿಂದ ದೂರವಿದ್ದಾರೆ ಎಂಬ ತೃಪ್ತಿ ನನಗಿದೆ. ಆದರೂ ಇನ್ನೂ ಕೋಟಿಗಟ್ಟಲೆ ಮಂದಿಗೆ ಮೂಢನಂಬಿಕೆ ವಿರುದ್ಧದ ಸಂದೇಶ ತಲುಪಬೇಕಿದೆ ಎಂಬ ಕೊರಗು ನನ್ನಲ್ಲಿದೆ.
ಹಾಗಾದರೆ ಈ ಮೂಢನಂಬಿಕೆಗಳ ವಿರುದ್ಧದ ಹೋರಾಟ ಹೇಗೆ? ನಮ್ಮ ಜಾತಿ- ಮತ ಧರ್ಮಕ್ಕೆ ಸಂಬಂಧಪಟ್ಟ ಆಚರಣೆ ಗಳನ್ನು ನಿಲ್ಲಿಸಿ, ಚರಂಡಿಗೆ ಎಸೆಯಬೇಕೆ? ಖಂಡಿತಾ ಬೇಡ. ಯಾರನ್ನೂ ಶೋಷಿಸದ, ಸಮಾಜದ ನಡುವೆ ವೌಢ್ಯಗಳನ್ನು ಬಿತ್ತದ, ಸಹಬಾಳ್ವೆ, ಸಂಭ್ರಮಕ್ಕೆ ಕಾರಣವಾಗುವ ನಮ್ಮ ಹಬ್ಬಗಳ ಆಚರಣೆ, ಆರಾಧನೆಗಳ ವಿಧಾನಗಳು, ಪರಂಪರೆಯಿಂದ ಬಂದ ಆಚಾರಗಳು ಇವೆಲ್ಲವೂ ನಮ್ಮ ಶ್ರೀಮಂತ ಸಂಸ್ಕೃತಿಯ ಕುರುಹುಗಳು. ಹಬ್ಬಗಳನ್ನು ಆಚರಿಸುವಾಗ, ವಿಶಿಷ್ಟ ರೀತಿಯ ತಿಂಡಿ ತಿನಿಸು ಗಳನ್ನು ತಯಾರಿಸಿ, ಹೊಸಬಟ್ಟೆ ಧರಿಸಿ, ಬಂಧು ಮಿತ್ರರೊಡಗೂಡಿ ಸಂತೋಷ ಪಡುತ್ತೇವೆ. ಇದರಲ್ಲೇನು ತಪ್ಪಿಲ್ಲ. ಜೀವನದಲ್ಲಿ ಹಬ್ಬ, ಉತ್ಸವಗಳು ಉಲ್ಲಾಸಕ್ಕೆ ಕಾರಣವಾಗುತ್ತವೆ. ಆದರೆ ಇಂತಹ ಆಚರಣೆಗಳಿಂದ ನಮ್ಮ ಆರ್ಥಿಕ, ಸಾಮಾಜಿಕ, ಮಾನಸಿಕ ಸ್ವಾಸ್ಥಕ್ಕೆ ಧಕ್ಕೆಯಾಗುವುದಾದರೆ ಜಾಗರೂಕತೆ ಅಗತ್ಯ. ಹೃದಯಾಘಾತವಾಗಿ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ ವೇಳೆ ಹಬ್ಬವೆಂದು ಓಡಾಡಿದರೆ ಹೃದಯ ಮತ್ತೆ ಆಘಾತಕ್ಕೊಳಗಾಗುವ ಅಪಾಯವಿದೆ ಎಂಬುದನ್ನು ಮರೆಯಬಾರದು. ನಮ್ಮ ಸಂಸ್ಕೃತಿಯಲ್ಲಿ ಹಾಡು, ನೃತ್ಯ, ಶಿಲ್ಪಕಲೆ, ಇತ್ಯಾದಿಗಳ ಭವ್ಯ ಪರಂಪರೆಯಿದೆ. ಭಜನೆ ಮತ್ತು ಪ್ರಾರ್ಥನೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇವುಗಳನ್ನು ಕೇಳಬಾರದೇ? ಹಾಡಬಾರದೇ? ಎಂದು ಕೇಳಬಹುದು. ಖಂಡಿತವಾಗಿಯೂ ಇವುಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಭೂತಾರಾಧನೆಯ ನೃತ್ಯಗಳು ಪರಂಪರೆಯಿಂದ ಬಂದಿವೆ. ಇವುಗಳನ್ನು ಮುಂದುವರಿಸಬೇಕು. ಆದರೆ ನಮಗೆ ಬೇಕಿರುವುದು ಈ ಮೂಢನಂಬಿಕೆಗಳಿಗೆ ಸಂಬಂಧಪಟ್ಟ ಆಚರಣೆ ಗಳು, ಶೋಷಣೆ, ಅಪಾಯಗಳ ಬಗ್ಗೆ ಜಾಗರೂಕರಾಗಿರುವುದು. ಒಬ್ಬ ವ್ಯಕ್ತಿಗೆ ಅನಾರೋಗ್ಯ ಕಾಡಿದಾಗ, ಆ ಸಮಯದಲ್ಲಿ ವೈದ್ಯಕೀಯ ಸಹಾಯ ಪಡೆಯಬೇಕು. ಅದು ಬಿಟ್ಟು ಮೂಢ ನಂಬಿಕೆಗೆ ಬಲಿಯಾಗಬಾರದು. ಹಿಂದಿನ ಕಾಲದಲ್ಲಿ ಸಿಡುಬು ರೋಗ ಬಂದಾಗ ಮಾರಿಯಮ್ಮನ ಪೂಜೆ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಸಿಡುಬು ರೋಗ ಹೇಗೆ ಹಬ್ಬುತ್ತದೆ ಅಥವಾ ಅದು ಬಾರದಂತೆ ಏನು ಮಾಡಬೇಕು ಎಂಬುದು ತಿಳಿದಿರಲಿಲ್ಲ. ಆದರೆ ಇಂದು ಸಿಡುಬು ರೋಗಕ್ಕೆ ಕಾರಣವೂ ಗೊತ್ತು. ರೋಗ ಬಾರದಂತೆ ಏನು ಮಾಡಬೇಕೆಂಬುದೂ ಗೊತ್ತು. ಅದಕ್ಕೆ ಮಾರಮ್ಮನ ಪೂಜೆಗಿಂತ ಮುಖ್ಯವಾಗಿ ದಾಕು ಹಾಕುವುದು ಅಗತ್ಯ. ಪ್ರಾರ್ಥನೆಗಳಿಂದ ರೋಗ ಗುಣವಾಗಬಹುದೆಂಬ ಭ್ರಮೆ ಅದು ಜೀವಕ್ಕೆ ಅಪಾಯ ತರಬಲ್ಲದು. ರೋಗ ಗುಣವಾಗುವ ಸ್ಥಿತಿಯಲ್ಲಿದ್ದಾಗ ಚಿಕಿತ್ಸೆ ಪಡೆಯದೆ, ಅವೈಜ್ಞಾನಿಕ ವಿಧಾನಗಳ ಮೊರೆಹೋಗಿ ಮತ್ತೆ ಅದು ಗುಣವಾಗದೆ ಉಲ್ಬಣಾವಸ್ಥೆಗೆ ಹೋದಾಗ ವೈದ್ಯಕೀಯ ಸಹಾಯ ಪಡೆಯಲು ಹೋದಾಗ ಏನೂ ಮಾಡಲಾಗದ ಪರಿಸ್ಥಿತಿ ಎದುರಾಗಬಹುದು. ಹಿಂದಿನ ಕಾಲದ ನಂಬಿಕೆಗಳು ಅವೈಜ್ಞಾನಿಕವೇ ಎಂಬ ಪ್ರಶ್ನೆಯೂ ನಮ್ಮಲ್ಲಿ ಕೇಳಿಬರುತ್ತದೆ. ಒಂದು ಗಿಡದ ಎಲೆಯನ್ನು ಪೂಜೆ ಮಾಡಿ ಸೇವಿಸಿದರೆ, ಆ ರೋಗ ಗುಣವಾಗುತ್ತದೆ ಎಂದು ನಂಬಿರಬಹುದು. ರೋಗ ಗುಣವಾಗಲೂ ಬಹುದು. ಆದರೆ ಇದಕ್ಕೆ ಕಾರಣ ತಿಳಿಯದಿದ್ದರೆ ಇದು ಮೂಢನಂಬಿಕೆಯಾಗುತ್ತದೆ. ಆದರೆ ಈ ಎಲೆಯಲ್ಲಿರುವ ಔಷಧಯುಕ್ತ ಅಂಶದಿಂದ ರೋಗ ಗುಣವಾಗುವುದೆಂದಾದರೆ, ಅದರ ಬಗ್ಗೆ ತಿಳಿದು ಉಪಯೋಗಿಸುವುದು ವೈಜ್ಞಾನಿಕ. ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದೆ ಬಂದೊಡನೆ ಎಲ್ಲಾ ಮೂಢನಂಬಿಕೆಗಳು ಅವೈಜ್ಞಾನಿಕ ಎನ್ನಲಾಗದು. ನಂಬಿಕೆಗಳಲ್ಲಿ ಯಾವುದು ವಿಜ್ಞಾನದ ವಿಚಾರದ ಒರೆಗಲ್ಲಿಗೆ ತಿಕ್ಕಿದಾಗ ಸತ್ಯವೆನಿಸುವುದೋ ಅದನ್ನು ಸತ್ಯವೆನ್ನಬಹುದು. ಕೆಲವೊಮ್ಮೆ ಒಳ್ಳೆಯ ಉದ್ದೇಶದಿಂದ ಆರಂಭವಾದ ಪದ್ಧತಿಗಳು ಮಾರಕವಾಗಲೂ ಬಹುದು. ಉದಾಹರಣೆಗೆ, ಸತ್ತಾಗ ಶ್ರಾದ್ಧ, ವೈಕುಂಠ ಸಮಾರಾಧನೆ, ಮೃತರನ್ನು ನೆನಪಿಸಬಹುದು. ಆದರೆ ಇಂತಹ ಕಾರ್ಯಗಳು ಬದುಕಿರುವವರು ಸಾಲ ಮಾಡಿ, ಕಷ್ಟಪಟ್ಟು ಒದ್ದಾಡಬೇಕಾದರೆ ಇದನ್ನು ಒಳ್ಳೆಯದು ಎನ್ನಲಾಗದು. ಇದೇ ರೀತಿ ವರದಕ್ಷಿಣೆಯಂತಹ ಸಂಪ್ರದಾಯಗಳು ಕೂಡಾ ಸಂಸಾರವನ್ನೇ ನಾಶ ಮಾಡುವ ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ನಮ್ಮಲ್ಲಿ ಹಲವರಿಗೆ ಮುಖ್ಯವಾಗಿ ಆರ್ಥಿಕವಾಗಿ, ಸಾಮಾಜಿಕ ವಾಗಿ, ಹಿಂದುಳಿದ ಜಾತಿಗಳಿಗೆ ಸೇರಿದವರಿಗೆ, ಮೇಲ್ಜಾತಿ ಗಳನ್ನು ಅನುಸರಿಸುವ ಅಭ್ಯಾಸವಿದೆ. ಅವರ ಆಚರಣೆಗಳು ಉತ್ತಮ. ನಮ್ಮವು ಕೀಳು ಎಂಬ ಭಾವನೆ ಇರುತ್ತದೆ. ಇವೆಲ್ಲವೂ ಮನಸ್ಸಿನ ತೊಳಲಾಟವೇ ಹೊರತು ನಂಬಿಕೆಗಳಲ್ಲ. ಇದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ.