ಹಸ್ತಪ್ರತಿಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣೆ

Update: 2018-01-07 11:48 GMT

ಕಳೆದ ಎರಡು ದಶಕಗಳಿಗೂ ಹಿಂದೆ, ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನಗಳ ಹೊರತಾಗಿ, ಮೈಕ್ರೋಫಿಲ್ಮ್ ತಂತ್ರಜ್ಞಾನವು ಅತ್ಯುತ್ತಮ ಕೊಡುಗೆಯನ್ನು ನೀಡಿತು. ಫೋಟೋಗ್ರಫಿ ತಂತ್ರಜ್ಞಾನದ ಸಹಾಯದಿಂದ ಹಸ್ತಪ್ರತಿಗಳನ್ನು ಮೈಕ್ರೋಫಿಲ್ ್ಮಗಳನ್ನಾಗಿ ಪರಿವರ್ತಿಸಿ ಸಂರಕ್ಷಿಸುವುದು ಆ ಕಾಲದ ಮಹತ್ವದ ತಂತ್ರಜ್ಞಾನವಾಗಿತ್ತು. ಅಗತ್ಯವಿದ್ದಾಗ, ಮೈಕ್ರೋಫಿಲ್ಮ್‌ನ್ನು ಬಳಸಿ, ಹಸ್ತಪ್ರತಿಯ ಮರುಮುದ್ರಣವನ್ನು ಪಡೆಯಬಹುದಾಗಿತ್ತು. ಮೈಕ್ರೋಫಿಲ್ಮ್ ರೀಡರ್‌ಗಳನ್ನು ಬಳಸಿ ಅವುಗಳನ್ನು ಓದಬಹುದಾಗಿತ್ತು. ನೂರಾರು ಪುಟಗಳನ್ನು ಒಂದೇ ಪ್ಲಾಸ್ಟಿಕ್ ಹಾಳೆಯ ಮೇಲೆ ಮುದ್ರಿಸುವ, ‘ಮೈಕ್ರೋಫಿಶ್’ ಅಥವಾ ‘ಮೈಕ್ರೋಫಿಲ್ಮ್’ ತಂತ್ರಜ್ಞಾನ ಇಂದು ತೆರೆಮರೆಗೆ ಸರಿದಿದೆ. ಗ್ರಂಥಾಲಯಗಳಲ್ಲಿ ನೋಡಲು ಲಭ್ಯವಿದ್ದ ಮೈಕ್ರೋಫಿಲ್ಮ್ ರೀಡರ್‌ಗಳು ವಸ್ತುಸಂಗ್ರಹಾಲಯವನ್ನು ಸೇರಿಕೊಂಡಿವೆ. ಹಸ್ತಪ್ರತಿಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆಗಾಗಿ ಇಂದಿನ ಡಿಜಿಟಲ್ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಈಗ ಬಳಸಿಕೊಳ್ಳಲಾಗುತ್ತಿದೆ. ಹಸ್ತಪ್ರತಿಯ ಮೂಲರೂಪವನ್ನೇ ನೇರವಾಗಿ ಕಂಪ್ಯೂಟರ್‌ನಲ್ಲಿ ದಾಖಲಿಸಲು, ಅದರ ಪ್ರತೀ ಪುಟವನ್ನು ಸ್ಕ್ಯಾನ್ ಮಾಡಿ ಚಿತ್ರರೂಪದಲ್ಲಿ ಉಳಿಸುವುದನ್ನು ‘ಹಸ್ತಪ್ರತಿಗಳ ಡಿಜಿಟಲೀಕರಣ’ ಎನ್ನಬಹುದು. ಮೂಲರೂಪದಲ್ಲಿಯೇ ಹಸ್ತಪ್ರತಿಯ ಬಿಂಬವನ್ನಾಗಿ ಸ್ಕ್ಯಾನ್ ಮಾಡಿ ಉಳಿಸಿ ಕಂಪ್ಯೂಟರ್ ಕಡತಗಳನ್ನಾಗಿಸಲು ‘ಡಾಕ್ಯುಮೆಂಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್’ನ್ನು ಬಳಸಲಾಗುತ್ತದೆ. ಹಸ್ತಪ್ರತಿಯಲ್ಲಿನ ಮೂಲಪುಟದಲ್ಲಿರುವ ಅಕ್ಷರಗಳು ಮಸುಕಾಗಿದ್ದರೆ, ತ್ರುಟಿತಗೊಂಡಿದ್ದರೆ, ಅಂತಹ ಅಕ್ಷರಗಳನ್ನು ತಂತ್ರಜ್ಞಾನ ಬಳಸಿ ಮರುಸೃಷ್ಟಿಸಲು ಸಾಧ್ಯವಿದೆ. ಬೇರೆಡೆಯಲ್ಲಿರುವ ಅಕ್ಷರಗಳನ್ನು ನಕಲಿಸಿ ತಂದು ಅಗತ್ಯವಿದ್ದೆಡೆಯಲ್ಲಿ ಅಂಟಿಸುವ ಮೂಲಕ ಇಂತಹ ತೊಡಕುಗಳನ್ನು ಸರಿಪಡಿಸಿಕೊಂಡು, ಹಸ್ತಪ್ರತಿಯನ್ನು ಸಂವೃದ್ಧಿಸಬಹುದು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಸ್ತಪ್ರತಿ ವಿಭಾಗವು ಕನ್ನಡದ ಹಸ್ತಪ್ರತಿಗಳ ಇಂತಹ ಡಿಜಿಟಲೀಕರಣ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದೆ. ಲೇಖಕರ ಮೂಲ ಕೈಬರಹದ ರೂಪದಲ್ಲಿಯೇ ಪುಸ್ತಕ ಮುದ್ರಣವಾಗಬೇಕು ಎಂದಾದರೆ, ಅದಕ್ಕೆ ‘ಇಮೇಜ್ ಸ್ಕ್ಯಾನಿಂಗ್’ ತಂತ್ರಜ್ಞಾನವನ್ನೇ ಬಳಸಬೇಕು.

               ಹಸ್ತಪ್ರತಿಗಳ ಜೊತೆ ಡಾ. ವಿರೇಂದ್ರ ಹೆಗಡೆ

ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ ಕವಿಯ ಸ್ವಹಸ್ತಾಕ್ಷರದಲ್ಲಿಯೇ ಮುದ್ರಿಸಿ, ಪ್ರಕಟಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರಯತ್ನವು ಇದಕ್ಕೆ ಉತ್ತಮ ಉದಾಹರಣೆಯಾಗಿ ನಮ್ಮ ಮುಂದೆ ಇದೆ. ‘ಶ್ರೀ ರಾಮಾಯಣ ದರ್ಶನಂ’ ಹಸ್ತಪ್ರತಿಯಲ್ಲಿ ತ್ರುಟಿತಗೊಂಡಿದ್ದ ಅಕ್ಷರಗಳನ್ನು ಸರಿಪಡಿಸಲು, ಬೇರೆ ಪುಟದಲ್ಲಿನ ಅದೇ ಅಕ್ಷರಗಳನ್ನು ನಕಲಿಸಿ ತಂದು, ತ್ರುಟಿತಗೊಂಡಿದ್ದ ಅಕ್ಷರಗಳ ಸ್ಥಾನದಲ್ಲಿ ಉಪಾಯವಾಗಿ ಕೂರಿಸಲಾಯಿತು. ಇಷ್ಟೆಲ್ಲಾ ಸಾಹಸವನ್ನು ಮಾಡಿ, ಕವಿಯ ಹಸ್ತಾಕ್ಷರದಲ್ಲಿಯೇ ಮಹಾಕಾವ್ಯವನ್ನು ಓದುವ ಸಂತಸವನ್ನು ಓದುಗರಿಗೆ ನೀಡಲು ಸಾಧ್ಯವಾಯಿತು. ಹಸ್ತಪ್ರತಿಗಳ ಡಿಜಿಟಲೀಕರಣದ ಉದ್ದೇಶಗಳು ಬೇರೆಬೇರೆ ಇರಬಹುದು. ಸಂಗ್ರಹಣೆ ಮತ್ತು ಸಂಸ್ಕರಣೆ ಹಾಗೂ ಸುರಕ್ಷತೆಯು ಪ್ರಥಮ ಆದ್ಯತೆಯಾಗಿರುತ್ತದೆ. ಪರಾಮರ್ಶೆಗಾಗಿ, ಪ್ರತಿಬಾರಿ ಮೂಲ ಹಸ್ತಪ್ರತಿಯನ್ನು ತೆಗೆದು ಬಳಸುವ ಬದಲಾಗಿ, ಸಂಗ್ರಹಿತ ಹಸ್ತಪ್ರತಿಗಳ ಡಿಜಿಟಲ್ ರೂಪವನ್ನು ಪರಾಮರ್ಶೆಗಾಗಿ ಬಳಸಬಹುದು. ಅದಕ್ಕಾಗಿ, ಹಸ್ತಪ್ರತಿಗಳ ಕುರಿತಾದ ಒಂದು ಮಾಹಿತಿ ದತ್ತಸಂಚಯವನ್ನು (ಡೇಟಾಬೇಸ್) ಸಿದ್ಧಪಡಿಸಬಹುದು. ಆ ದತ್ತಸಂಚಯದೊಂದಿಗೆ, ಹಸ್ತಪ್ರತಿಗಳ ಸ್ಕ್ಯಾನ್‌ಮಾಡಲಾದ ಎಲ್ಲಾ ಡಿಜಿಟಲ್ ಪುಟಗಳನ್ನೂ ಸಹ ಅಳವಡಿಸಬಹುದು. ಇದೇ ದತ್ತಸಂಚಯವನ್ನು ಬಳಸಿ ಪರಾಮರ್ಶೆ ಮಾಡಲು ಒಂದು ಆನ್ವಯಿಕ ತಂತ್ರಾಂಶವನ್ನೂ ಸಹ ಸಿದ್ಧಪಡಿಸಿ ಬಳಸಿಕೊಳ್ಳಬಹುದು. ಇಂತಹ ಆನ್ವಯಿಕ ತಂತ್ರಾಂಶವು ಸಂಶೋಧಕರಿಗಂತೂ ಅತ್ಯುಪಯುಕ್ತವಾಗಿರುತ್ತದೆ. ಯಾವುದೇ ‘ಡಿಜಿಟಲ್ ಸಂಗ್ರಹಣೆ’ಯನ್ನು ಕಾಲಕಾಲಕ್ಕೆ ಬರುವ ಹೊಸ ತಂತ್ರಜ್ಞಾನಗಳನ್ನು ಬಳಸಿ ಉನ್ನತೀಕರಿಸಿಕೊಳ್ಳಲೇಬೇಕು. ಫ್ಲಾಪಿಗಳು ಇಂದು ಕಣ್ಮರೆಯಾಗಿವೆ, ಸಿಡಿಗಳು ಹಳತಾಗಿ ಡಿವಿಡಿಗಳು ಬಂದವು. ಡಿವಿಡಿಗಳ ಸ್ಥಾನವನ್ನು ಇಂದು ಪೆನ್‌ಡ್ರೈವ್‌ಗಳು ಮತ್ತು ಎಕ್ಸ್‌ಟರ್‌ನಲ್ ಹಾರ್ಡ್‌ಡಿಸ್ಕ್‌ಗಳು ಆಕ್ರಮಿಸಿಕೊಂಡಿವೆ.

                  ಪ್ರೊ.ಪಿ.ಆರ್.ಮುಕುಂದ್.

‘ಸಿಲಿಕಾನ್ ವೇಫರ್ ತಂತ್ರಜ್ಞಾನ’ ಎಂಬ ಹೊಸ ತಂತ್ರಜ್ಞಾನವನ್ನು ಈಗ ಹಸ್ತಪ್ರತಿಗಳ ಸಂರಕ್ಷಣೆಗೂ ಸಹ ಬಳಸಿಕೊಳ್ಳಬಹುದು. ಸಿಡಿ, ಡಿವಿಡಿ, ಪೆನ್‌ಡ್ರೈವ್ ಇತ್ಯಾದಿ ಡಿಜಿಟಲ್ ಮೀಡಿಯಾಗಳ ಸ್ಥಾನವನ್ನು ‘ಸಿಲಿಕಾನ್ ವೇಫರ್‌ಗಳು’ (ಸಿಲಿಕಾನ್ ಹಾಳೆಗಳು) ಆಕ್ರಮಿಸಿಕೊಳ್ಳುವ ಕಾಲ ಬರಬಹುದು. ಹಸ್ತಪ್ರತಿಯ ಪ್ರತಿಯೊಂದೂ ಪುಟದ ಇನ್ಫ್ರಾರೆಡ್ ಬಿಂಬಗಳನ್ನು (ಇಮೇಜ್) ವಿವಿಧ ತರಂಗಾಂತರಗಳಲ್ಲಿ ತೆಗೆಯುವುದು (ಈ ಇನ್ಫ್ರಾರೆಡ್ ಬಿಂಬಗಳಲ್ಲಿ ಕಣ್ಣಿಗೆ ಕಾಣದಿರುವ ಗೆರೆಗಳೂ ಸಹ ಗೋಚರವಾಗುತ್ತವೆ) ನಂತರ, ಈ ಬಿಂಬಗಳನ್ನು ಒಂದರ ಮೇಲೊಂದರಂತೆ ಹೆಣೆದು ಒಂದೇ ಬಿಂಬವಾಗಿ ಪರಿವರ್ತಿಸುವುದು. ಆ ನಂತರ, ಬಿಂಬವರ್ಧಕ ವಿಧಾನಗಳಿಂದ ಅವುಗಳಲ್ಲಿನ ಮಾಲಿನ್ಯವನ್ನು ತೆಗೆಯುವುದು. ತದನಂತರ, ಅದನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಕಪ್ಪು-ಬಿಳುಪಿನ ಬಿಂಬವಾಗಿಸುವುದು. ಈ ಬಿಂಬವನ್ನು ಸಿಲಿಕಾನ್ ವೇಫರ್ ಮೇಲೆ ಎರಕ ಹೊಯ್ಯುವುದೇ ಸಿಲಿಕಾನ್ ವೇಫರ್ ತಂತ್ರಜ್ಞಾನ. ‘‘ಸಿಲಿಕಾನ್ ವೇಫರ್ ತಂತ್ರಜ್ಞಾನ ಬಳಸಿ, ಆರು ಇಂಚುಗಳ ವ್ಯಾಸವುಳ್ಳ ಸಿಲಿಕಾನ್ ತಟ್ಟೆಯ ಮೇಲೆ ಎರಡು ಸಾವಿರ ಬಿಂಬಗಳನ್ನು ಮುದ್ರಿಸಬಹುದು. ಒಂದು ಪುಟಕ್ಕೆ ಒಂದು ಬಿಂಬ ಎಂದಿಟ್ಟುಕೊಂಡರೂ, ಇಡೀ ಹಸ್ತಪ್ರತಿಯ ಎಲ್ಲಾ ಪುಟಗಳು ಅಥವಾ ಇಡೀ ಗ್ರಂಥವು ಒಂದೇ ತಟ್ಟೆಯ ಮೇಲೆ ಮುದ್ರಿತವಾಗುತ್ತದೆ. ಈ ರೀತಿ ಸಂಸ್ಕಾರಗೊಂಡ ತಟ್ಟೆಗಳು ಅಕ್ಷರಶಃ ಅವಿನಾಶಿ. ಗಾಳಿ, ಬೆಳಕು, ತೇವ, ಉಷ್ಣತೆಗಳಿಂದ ಇವು ನಾಶವಾಗಲಾರವು. ಬೆಂಕಿಯಲ್ಲಿ ಬಿದ್ದರೂ, ಮೇಲಿನ ಪ್ಲಾಸ್ಟಿಕ್ ಹೊದಿಕೆ ಕರಗಿಹೋಗಬಹುದೇ ಹೊರತು, ಸಿಲಿಕಾನ್ ವೇಫರ್ ಹಾಳಾಗುವುದಿಲ್ಲ’’ ಎನ್ನುತ್ತಾರೆ ಅಮೆರಿಕದ ರ್ಯಾಂಚೆಸ್ಟರ್ ನ್ಯಾನೋಆರ್ಕ್ ಕಂಪೆನಿಯ ಮುಖ್ಯಸ್ಥರಾದ ಬೆಂಗಳೂರು ಮೂಲದ ಪ್ರೊ.ಪಿ.ಆರ್.ಮುಕುಂದ್. ಅಂತಹ ಮುದ್ರಿತ ತಟ್ಟೆಗಳಿಂದ ಮಾಹಿತಿಯನ್ನು ಓದಿ, ಕಂಪ್ಯೂಟರ್ ಮಾನಿಟರ್‌ನ ಮೇಲೆ ಪ್ರದರ್ಶಿಸಲು ಇವರು ಒಂದು ತಂತ್ರಾಂಶವನ್ನೂ ಸಹ ರೂಪಿಸಿದ್ದಾರೆ. ಪ್ರೊ.ಮುಕುಂದ್ ಅವರು ತಮ್ಮ ಹೊಸ ತಂತ್ರಜ್ಞಾನಕ್ಕೆ, ಮೈಕ್ರೋಫಿಶ್ (ಮೈಕ್ರೋಫಿಲ್ಮ್) ಹೆಸರನ್ನೇ ಹೋಲುವ ವೇಫರ್ ಫಿಷ್ ಎಂಬ ಹೆಸರನ್ನು ಇಟ್ಟಿದ್ದಾರೆ. ಇದು ಅತ್ಯಾಧುನಿಕ ತಂತ್ರಜ್ಞಾನ. ಒಂದು ಮೈಕ್ರೊಫಿಶ್‌ನಲ್ಲಿ ಸುಮಾರು 64 ಪುಟಗಳನ್ನು ಅಳವಡಿಸಬಹುದು. ಆದರೆ, ವೇಫರ್‌ಫಿಷ್‌ನಲ್ಲಿ ಸಾವಿರಾರು ಇಮೇಜ್‌ಗಳನ್ನು ಮುದ್ರಿಸಬಹುದು. ಇದು ಐನೂರು ವರ್ಷ ಕಾಲ ಬಾಳಬಲ್ಲದು ಎಂದು ಹೇಳಲಾಗಿದೆ!

                ಸಿಲಿಕಾನ್ ವೇಫರ್

‘ಸರ್ವಮೂಲ’ ಗ್ರಂಥವು ಆಚಾರ್ಯ ಮಧ್ವ ವಿರಚಿತ ಧಾರ್ಮಿಕ ಗ್ರಂಥ. ಜೀರ್ಣಗೊಂಡಿರುವ ಅತ್ಯಮೂಲ್ಯವಾದ ಈ ತಾಳೆಗರಿ ಗ್ರಂಥವನ್ನು ಈ ತಂತ್ರಜ್ಞಾನ ಬಳಸಿ ಈಗಾಗಲೇ ಸಿಲಿಕಾನ್ ವೇಫರ್‌ನ್ನಾಗಿಸಲಾಗಿದೆ. ನ್ಯಾನೋಆರ್ಕ್ ಸಂಸ್ಥೆಯು ‘ಹೆರಿಟೇಜ್ ಸೀರಿಸ್’ ಎಂಬ ಪ್ರಕಟನಾ ಮಾಲೆಯೊಂದನ್ನು ಆರಂಭಿಸಿದೆ. ಈ ಮಾಲೆಯ ಮೊದಲ ಪುಷ್ಪವೇ ಈ ಸರ್ವಮೂಲ ಗ್ರಂಥ. ಕ್ರಿ.ಶ.1492ರಲ್ಲಿ ಮರದ ತೊಗಟೆಯ ಮೇಲೆ ನೇವಾರಿ ಲಿಪಿಯಲ್ಲಿ ಬರೆಯಲಾದ ಭಗವದ್ಗೀತೆಯ ಪ್ರತಿಯೊಂದು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿದೆ. ಆ ವಿಶ್ವವಿದ್ಯಾನಿಲಯದ ಸಹಯೋಗದಿಂದ ಆ ಭಗವದ್ಗೀತೆಯು ಹೆರಿಟೇಜ್ ಮಾಲೆಯ ಎರಡನೆಯ ಕುಸುಮವಾಗಿ ಹೊರಹೊಮ್ಮಿದೆ. ಸಿಲಿಕಾನ್ ವೇಫರ್ ತಂತ್ರಜ್ಞಾನವು ನಮ್ಮ ದೇಶದಲ್ಲಿಯೂ ಬಳಕೆಗೆ ಬಂದಾಗ ನಮ್ಮಲ್ಲಿಯ ಹಸ್ತಪ್ರತಿಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣೆಗಳು ಹೊಸ ತಿರುವು ಪಡೆಯಬಹುದು.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News