ಸಚಿನ್ ತೆಂಡೂಲ್ಕರ್ ಮಗಳಿಗೆ ಬೆದರಿಕೆ: ಆರೋಪಿ ಬಂಧನ

Update: 2018-01-07 12:50 GMT

ಮುಂಬೈ, ಜ.7: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗಳಾದ ಸಾರ ತೆಂಡೂಲ್ಕರ್‌ರನ್ನು ಅಪಹರಿಸುವ ಬೆದರಿಕೆಯೊಡ್ಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 32ರ ಹರೆಯದ ಪಶ್ಚಿಮ ಬಂಗಾಳ ನಿವಾಸಿ ದೇವಕುಮಾರ್ ಮಿಟ್ಟಿ ಎಂದು ಗುರುತಿಸಲಾಗಿದೆ.

ನಿರುದ್ಯೋಗಿಯಾಗಿರುವ ಈತ ತೆಂಡೂಲ್ಕರ್ ಅವರ ನಿವಾಸಕ್ಕೆ ಕರೆ ಮಾಡಿ ಸಾರಾ ಅವರನ್ನು ಅಪಹರಿಸುವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರಾಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ತೆಂಡೂಲ್ಕರ್ ಅವರ ಮ್ಯಾನೇಜರ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರದಂದು ದೂರು ದಾಖಲಿಸಿದ್ದರು. ಆರೋಪಿಯು ಕರೆ ಮಾಡಿದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ್‌ನಲ್ಲಿ ಆತನ ನಿವಾಸವಿರುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಡಿಸೆಂಬರ್ ಕೊನೆಯ ವಾರದಿಂದ ಸಚಿನ್ ನಿವಾಸದ ಸ್ಥಿರ ದೂರವಾಣಿಗೆ ಹಲವು ಬಾರಿ ಕರೆ ಮಾಡಿರುವ ಆರೋಪಿಯು ಯಾರು ಕರೆ ಸ್ವೀಕರಿಸಿದರೂ ಸಾರ ಅವರನ್ನು ಅಪಹರಿಸಿ ವಿವಾಹವಾಗುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

20ರ ಹರೆಯದ ಸಾರ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಬೆದರಿಕೆ ಕರೆಗಳು ಬಂದ ಸಮಯದಲ್ಲಿ ಆಕೆ ಮನೆಯಲ್ಲಿರಲಿಲ್ಲ. ಆರೋಪಿಯು ಆಕೆಯನ್ನು ಟಿವಿಯಲ್ಲಿ ನೋಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News