ಮಡಿಕೇರಿ: ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ನಾಪೊಕ್ಲು ಕೊಡವ ಸಮಾಜ ಆಗ್ರಹ

Update: 2018-01-08 11:03 GMT

ಮಡಿಕೇರಿ,ಜ.8: ಕೊಡವ ನ್ಯಾಷನಲ್ ಕೌನ್ಸಿಲ್‍ನ ಸುಮಾರು 26 ವರ್ಷಗಳ ಹೋರಾಟದ ಫಲವಾಗಿ ಆರಂಭಗೊಂಡ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ ಸ್ಥಗಿತಗೊಳಿಸಿದ್ದು, ಇದನ್ನು ಪುನರಾರಂಭಿಸುವ ಮೂಲಕ ಮಡಿಕೇರಿಯಲ್ಲಿ ನಡೆಯುವ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿಗಳು ಅರ್ಥಗರ್ಭಿತಗೊಳಿಸಬೇಕೆಂದು ನಾಪೊಕ್ಲು ಕೊಡವ ಸಮಾಜ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಸಿಎನ್‍ಸಿ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರ ಫಲವಾಗಿ ಸಮಾಜ ಕಲ್ಯಾಣ ಇಲಾಖೆ ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಯ ಮೂಲಕ ಅಧ್ಯಯನವನ್ನು ಆರಂಭಿಸಿತಾದರು, ಒಂದೇ ತಿಂಗಳಿನಲ್ಲಿ ಮುಖ್ಯಮಂತ್ರಿಗಳ ಮೌಖಿಕ ಆದೇಶದಿಂದ ಸ್ಥಗಿತಗೊಂಡಿತು. ಇದು ಕೆಲವು ಜಾತಿ ಅಥವಾ ರಾಜಕೀಯ ಷಡ್ಯಂತ್ರದಿಂದ ನಡೆದಿದೆ ಎನ್ನುವ ಸಂಶಯವಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಯನವನ್ನು ಪುನರಾರಂಭಿಸುವ ಮೂಲಕ ಕೊಡವರಿಗೆ ಸಿಗಬೇಕಾದ ಸಂವಿಧಾನದ ಹಕ್ಕುಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕೊಡಗಿನ ಮೂಲ ನಿವಾಸಿ ಕೊಡವರು ವಲಸೆ ಹೋಗುವುದನ್ನು ತಪ್ಪಿಸಬೇಕೆಂದು ರಮೇಶ್ ಚಂಗಪ್ಪ ಒತ್ತಾಯಿಸಿದರು. ಕೊಡವರ ಭೂಮಿಯ ಹಕ್ಕು, ರಾಜಕೀಯ ಅಸ್ತಿತ್ವ, ದೇವನೆಲೆಗಳು ಮತ್ತು ಪಾರಂಪರಿಕ ಹಕ್ಕುಗಳು ಶಾಶ್ವತವಾಗಿ ಉಳಿಯಬೇಕಾದರೆ ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಿ ಹಕ್ಕುಗಳನ್ನು ಖಾತ್ರಿ ಪಡಿಸುವ ಅನಿವಾರ್ಯತೆ ಇದೆ. ಸರ್ಕಾರ ನಿರ್ಲಕ್ಷ್ಯ ತೋರಿದರೆ ಅತೀ ಸಣ್ಣ ಸಮುದಾಯ ನಶಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

 ಜ.9 ರಂದು ಮುಖ್ಯಮಂತ್ರಿಗಳು ಸಾಧನಾ ಸಮಾವೇಶದಲ್ಲಿ ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸುವ ಕುರಿತು ಘೋಷಿಸಬೇಕು. ಈ ಬೇಡಿಕೆ ಘೋಷಣೆಯಾಗದಿದ್ದಲ್ಲಿ ಕೊಡವರ ಹಕ್ಕನ್ನು ಹತ್ತಿಕ್ಕಿ ಗೇಲಿ ಮಾಡಿದ ಸಮಾವೇಶ ಇದಾಗಲಿದೆ ಎಂದು ರಮೇಶ್ ಚಂಗಪ್ಪ ಅಭಿಪ್ರಾಯಪಟ್ಟರು. ಅಧ್ಯಯನವನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಅವರು ಇದೇ ಸಂದರ್ಭ ತಿಳಿಸಿದರು.

ನಿರ್ದೇಶಕರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎ.ಕೆ.ಸುಬ್ಬಯ್ಯ ಅವರು ಸರ್ಕಾರದ ಮೇಲೆ ಪ್ರಭಾವ ಬೀರಿದ ಪರಿಣಾಮವಾಗಿ ಅಧ್ಯಯನ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. ಇದು ಸರ್ಕಾರ ಕೊಡವ ಜನಾಂಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಟೀಕಿಸಿದ ಅವರು, ಕೊಡವರು ಕೊಡವರ ಹಕ್ಕನ್ನು ಕೇಳುತ್ತಿದ್ದಾರೆಯೇ ಹೊರತು ಇತರ ಜನಾಂಗವನ್ನು ಅಥವಾ ವ್ಯಕ್ತಿಗಳನ್ನು ನಿಂದಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಮಾಳೆಯಂಡ ಅಯ್ಯಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ ಹಾಗೂ ನಿರ್ದೇಶಕರಾದ ಕಾಟುಮಣಿಯಂಡ ಉಮೇಶ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News