ನಿವೇಶನ ಭಾಗ್ಯಕ್ಕೆ ದಸಂಸ ಒತ್ತಾಯ: ಸಿಎಂ ಗೆ ಮನವಿ

Update: 2018-01-08 11:07 GMT

ಮಡಿಕೇರಿ,ಜ.8: ನಿರಾಶ್ರಿತ ದಲಿತ ಸಮುದಾಯಕ್ಕೆ ನಿವೇಶನ ಭಾಗ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜ.9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕರಾದ ಎನ್.ವೀರಭದ್ರಯ್ಯ, ಕೊಡಗು ಜಿಲ್ಲೆಯಾದ್ಯಂತ ಸುಮಾರು 1.30 ಲಕ್ಷ ಮಂದಿ ದಲಿತರು ನೆಲೆಸಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಲಿತರ ಅಭ್ಯುದಯಕ್ಕಾಗಿ ಸರಕಾರ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿಲ್ಲವೆಂದು ಟೀಕಿಸಿದರು. ಜಿಲ್ಲೆಯಲ್ಲಿರುವ ಬಹುತೇಕ ದಲಿತರು ನಿವೇಶನ ರಹಿತರಾಗಿದ್ದು, ಕನಿಷ್ಠ ವಾಸದ ಮನೆಯೂ ಇಲ್ಲದೆ ಲೈನ್‍ ಮನೆಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಇದೆ. ಸ್ವಂತ ಮನೆ ಹೊಂದಲು ಸರಕಾರ ತಕ್ಷಣ ನಿವೇಶನವನ್ನು ಮಂಜೂರು ಮಾಡಬೇಕು. ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ದಲಿತ ಸಮುದಾಯಕ್ಕೆ ಯಾವುದೇ ತಾಂತ್ರಿಕ ಅಡಚಣೆಯ ಕಾರಣ ನೀಡದೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ ಉಳ್ಳವರಿಂದ ಹಾಗೂ ತೋಟದ ಮಾಲೀಕರಿಂದ ದಲಿತರು ಪಡೆದಿರುವ ಸಾಲದ ರೂಪದ ಹಣವನ್ನು ಸರಕಾರವೇ ಭರಿಸುವ ಮೂಲಕ ಲೈನ್‍ಮನೆಯಲ್ಲಿ ವಾಸವಿರುವ ದುರ್ಬಲ ದಲಿತರನ್ನು ಜೀತಮುಕ್ತಗೊಳಿಸಬೇಕೆಂದು ಆಗ್ರಹಿಸಿದರು. ಶಿಕ್ಷಣದ ಸೌಲಭ್ಯ ಮತ್ತು ಪೌಷ್ಠಿಕಾಂಶದ ಆಹಾರ ದಲಿತ ಕುಟುಂಬಗಳಿಗೆ ದೊರೆಯುತ್ತಿದೆಯೇ ಎನ್ನುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ವಿಶೇಷ ತನಿಖಾಧಿಕಾರಿಗಳನ್ನು ನೇಮಕ ಮಾಡಬೇಕು.ಶ್ರೀಮಂತರು ಹಾಗೂ ದೊಡ್ಡ ಖಾಸಗಿ ಸಂಸ್ಥೆಗಳು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು. ಬಹುತೇಕ ದಲಿತ ಕುಟುಂಬಗಳು 94 ಸಿ ಮತ್ತು 94 ಸಿಸಿ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿಯ ಕೊರತೆಯನ್ನು ಎದುರಿಸುತ್ತಿದ್ದು, ನಿವೇಶನದ ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅರ್ಜಿ ಸಲ್ಲಿಕೆಗೆ ಸರಕಾರ ಇನ್ನಷ್ಟು ಕಾಲಾವಕಾಶ ನೀಡಿ ಅನಕ್ಷರಸ್ತರಿಗೆ ಅಗತ್ಯ ಸಹಕಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಿಳಿಸಿದರು. 

ಮಡಿಕೇರಿ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇಲ್ಲಿಯವರೆಗೆ ಸಂವಿಧಾನ ಶಿಲ್ಪಿಯ ಪ್ರತಿಮೆಯನ್ನು ಸ್ಥಾಪಿಸಿರುವುದಿಲ್ಲ. ಆದ್ದರಿಂದ ತಕ್ಷಣ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ತಾವು ಸೂಚನೆ ನೀಡಬೇಕು ಮತ್ತು ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಮೂರೂ ತಾಲ್ಲೂಕುಗಳ ಪ್ರತಿ ಹೋಬಳಿ ಮಟ್ಟದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸಬೇಕು.  ಸರಕಾರಿ ಕಚೇರಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಅಸಹಾಯಕ ನಿರುದ್ಯೋಗಿಗಳನ್ನು ಶೋಷಣೆ ಮಾಡಲಾಗುತ್ತಿದೆ. ದುಡಿದವರ ವೇತನದ ರೂಪದ ಹಣ ಗುತ್ತಿಗೆದಾರ ಸಂಸ್ಥೆಗಳ ಪಾಲಾಗುತ್ತಿರುವುದರಿಂದ ಗುತ್ತಿಗೆ ಆಧಾರದ ಪದ್ದತಿಯನ್ನು ರದ್ದುಗೊಳಿಸಿ ಸರಕಾರವೇ ನೌಕರರನ್ನು ನೇರ ನೇಮಕಾತಿ ಮಾಡಬೇಕು.ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎನ್ನುವ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡುವುದಾಗಿ ದಿವಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಸಂಚಾಲಕರಾದ ಹೆಚ್.ಎಲ್.ಕುಮಾರ್, ಮೂರ್ನಾಡು ಸಂಚಾಲಕರಾದ ರಘುಬೈರ ಹಾಗೂ ಸದಸ್ಯರಾದ ಈರಾ ಸುಬ್ಬಯ್ಯ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News