ಜೈಲಿನಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಹೆಚ್ಚಳ

Update: 2018-01-08 14:33 GMT

ಹೊಸದಿಲ್ಲಿ, ಜ.8: ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 2016ರಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ 2.93 ಲಕ್ಷ ಎಂದು ಸರಕಾರದ ಅಂಕಿಅಂಶ ತಿಳಿಸಿದೆ.

ಪೊಲೀಸರು ಅನವಶ್ಯಕವಾಗಿ ಬಂಧಿಸುವುದು, ವಿಚಾರಣಾಧೀನ ಕೈದಿಗಳು ಕಾನೂನಿನ ಕುರಿತು ತಿಳುವಳಿಕೆ ಹೊಂದದಿರುವುದು, ಹಾಗೂ ಬಡತನದ ಕಾರಣ ಸೂಕ್ತ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿರುವುದು ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಲಾಗಿದೆ.

   2015ರಲ್ಲಿ 2.82 ಲಕ್ಷ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದರು. ಅತೀ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲೂ ಅಗ್ರಸ್ಥಾನದಲ್ಲಿದ್ದು 68,432 ವಿಚಾರಣಾಧೀನ ಕೈದಿಗಳಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿವೆ. ದೇಶದ ಶೇ.53ರಷ್ಟು ವಿಚಾರಣಾಧೀನ ಕೈದಿಗಳು ಈ ಐದು ರಾಜ್ಯಗಳಲ್ಲಿದ್ದಾರೆ. ಕರ್ನಾಟಕದಲ್ಲಿ 2015ರಲ್ಲಿ 9,314 ವಿಚಾರಣಾಧೀನ ಕೈದಿಗಳಿದ್ದರೆ 2016ರಲ್ಲಿ ಈ ಸಂಖ್ಯೆ 10,504ಕ್ಕೆ ತಲುಪಿದೆ.

  ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸುವ ಸಂದರ್ಭ ಪೊಲೀಸರ ಕಾವಲಿನ ಅಗತ್ಯವಿದೆ. ಆದರೆ ಪೊಲೀಸರ ಕೊರತೆಯಿಂದ ಹಲವು ವಿಚಾರಣಾಧೀನ ಕೈದಿಗಳನ್ನು ವಿಚಾರಣೆಗೆ ಹಾಜರು ಪಡಿಸಲು ಸಾಧ್ಯವಾಗುತ್ತಿಲ್ಲ. ವಿಚಾರಣಾಧೀನ ಕೈದಿ ತನ್ನ ಅಪರಾಧಕ್ಕೆ ವಿಧಿಸಬಹುದಾದ ಗರಿಷ್ಠ ಶಿಕ್ಷಾವಧಿಯ ಅರ್ಧಾಂಶಕ್ಕೂ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರೆ ಆತ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ.

     2015ಕ್ಕೆ ಸಂಬಂಧಿಸಿದಂತೆ, 3,599 ವಿಚಾರಣಾಧೀನ ಕೈದಿಗಳು ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲು ವಿಭಾಗ(ಎನ್‌ಸಿಆರ್‌ಬಿ)ದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News