ಹುಟ್ಟೂರನ್ನು ಯಾರೂ ಮರೆಯದೆ ಅಭಿವೃದ್ಧಿಗೆ ಬದ್ದರಾಗಬೇಕು: ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್
ಮದ್ದೂರು, ಜ.8: ಹುಟ್ಟೂರನ್ನು ಯಾರೂ ಮರೆಯಬಾರದು. ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಬದ್ದರಾಗಬೇಕು ಎಂದು ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದ್ದಾರೆ.
ತಾಲೂಕಿನ ಬೆಸಗರಹಳ್ಳಿಯಲ್ಲಿ ಮಾನಸ ಎಜುಕೇಷನ್ ಟ್ರಸ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಮಾನಸೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಿ.ಕರಡಿಗೌಡ ಸಾಹಿತ್ಯ ಸೇವಾ ಪ್ರಶಸ್ತಿ ಸ್ವೀಕರಿಸಿ ಅವರು ಮತನಾಡಿದರು.
ನನ್ನ ಹುಟ್ಟೂರು ನಾಗತಿಹಳ್ಳಿಯಲ್ಲಿ ಪ್ರತಿ ವರ್ಷ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಸುತ್ತಿದ್ದು, ಅದೇ ಮಾದರಿಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಾಂಸ್ಕೃತಿಕ ಸಂಭ್ರಮ ನಿರಂತರವಾಗಿ ನಡೆಯಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದ್ದು, ನಗರ ಮಕ್ಕಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ನೃತ್ಯಗಳಿಗೆ ಕನ್ನಡ ಸಿನಿಮಾ ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಹಿರಿಮೆ ಮೆರೆಯಬೇಕು ಎಂದು ಅವರು ಸಲಹೆ ನೀಡಿದರು.ಕರಡಿಗೌಡ ಪುರಸ್ಕಾರದಲ್ಲಿ ಬಂದಿರುವ 25 ಸಾವಿರ ನಗದನ್ನು ತಮ್ಮ ಹುಟ್ಟೂರು ನಾಗತಿಹಳ್ಳಿ ಸರಕಾರಿ ಶಾಲೆಗೆ ನೀಡುವುದಾಗಿ ಅವರು ತಿಳಿಸಿದರು.
ಲೋಕಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ನಮ್ಮ ದೇಶದ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಇದನ್ನು ಉಳಿಸಿಕೊಳ್ಳಲು ಉತ್ತಮ ಶಿಕ್ಷಣ ಅಗತ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಮಾತನಾಡಿ, ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಉತ್ತಮ ಶಿಕ್ಷಕರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡಿಗೌಡ ಹೆಸರಿನಲ್ಲಿ 10 ಸಾವಿರ ರೂ. ನಗದು ನೀಡಲಾಗುವುದು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ್ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಿಡಿಗೌಡ ಶಿಕ್ಷಣ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಡೈರೆಕ್ಟರ್ ಆಫ್ ಅಫರೇಷನಲ್ ಎಕ್ಸ್‍ಲೆನ್ಸ್ ಗ್ರೇ ಮ್ಯಾಟರ್ಸ್ ಕ್ಯಾಪಿಟಲ್‍ನ ಅನೂಪ್ ನಂಬಿಯಾರ್, ಬ್ಯಾಟ್‍ವಿಂಗ್ಸ್ ಲಿರ್ನಿಂಗ್ ಸೆಂಟರ್‍ನ ಪ್ರವೀಣ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದೇಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಸ್ವಾಮಿ, ಇತರ ಗಣ್ಯರು ಉಪಸ್ಥಿತರಿದ್ದರು.