ರಾಜ್ಯದ ಜನತೆ ಅನ್ನದ ಋಣ ತೀರಿಸಲಿದ್ದಾರೆ : ಸಿಎಂ ಸಿದ್ದರಾಮಯ್ಯ

Update: 2018-01-09 13:24 GMT

ಮಡಿಕೇರಿ ಜ.9 :ರಾಜ್ಯದ ಜನತೆ ಅನ್ನ, ನೀರು, ಶಿಕ್ಷಣವನ್ನು ನೀಡಿದವರನ್ನು ಎಂದಿಗೂ ಮರೆಯುವುದಿಲ್ಲ. ಆದ್ದರಿಂದ ಇದೆಲ್ಲವನ್ನು ನೀಡಿದ ನಮ್ಮ ಸರ್ಕಾರಕ್ಕೆ ಜನತೆ ಮತ್ತೆ ಆಶೀವಾರ್ದ ಮಾಡಿ ಅಧಿಕಾರಕ್ಕೆ ತರಲಿದ್ದಾರೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿ ಅಧಿಕಾರಾವಧಿಯನ್ನು 5 ವರ್ಷ ಪೂರ್ಣಗೊಳಿಸುವ ಅವಕಾಶ ನನಗೆ ಸಿಕ್ಕಿದ್ದು, ನನ್ನ ಆಡಳಿತ ತೃಪ್ತಿ ತಂದಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಎರಡು ಹೊತ್ತು ಊಟ ಮಾಡುವ ಹಕ್ಕಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಿಸಬೇಕೆನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಗೆ ಆದ್ಯತೆ ನೀಡಲಾಯಿತು. ಪ್ರತಿ ಕುಟುಂಬಕ್ಕೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆ ದೇಶದ ಇತರೆ ಯಾವುದೇ ರಾಜ್ಯಗಳಲ್ಲು ಇಲ್ಲವೆಂದು ಹೆಮ್ಮೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸರ್ವರಿಗೂ ಸಮಪಾಲು ಸಮಬಾಳು ಪರಿಕಲ್ಪನೆಯಡಿ ಆಡಳಿತ ನಡೆಸುತ್ತಿರುವುದಾಗಿ ತಿಳಿಸಿದರು.

ಇದೇ ಜನವರಿ 13 ರಂದು ತಾವು 4 ವರ್ಷ 8 ತಿಂಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು, 2013 ರಲ್ಲಿ ಘೋಷಣೆ ಮಾಡಿದ ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ತೀರಿಸಿದ ಏಕೈಕ ಸರ್ಕಾರ ಇದಾಗಿದೆಯೆಂದು ಮುಖ್ಯಮಂತ್ರಿಗಳು ಹೇಳಿದರು. ಪ್ರಣಾಳಿಕೆಯಲ್ಲಿ ಇಲ್ಲದ ಅನೇಕ ಯೋಜನೆಗಳನ್ನು ಕೂಡ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಕಾಯಕ ಮತ್ತು ದಾಸೋಹದ ಬಗ್ಗೆ ಬಸವಣ್ಣನವರು ನುಡಿದಂತೆ ಪ್ರತಿಯೊಬ್ಬರು ಕಾಯಕ ಮಾಡಬೇಕು, ಉತ್ಪಾದನೆಯಲ್ಲಿ ಹಂಚಿಕೆ ಇರಬೇಕು. ಬಡವರು ಉತ್ಪಾದನೆ ಮಾಡಿದ್ದನ್ನು ಶ್ರೀಮಂತರು ಅನುಭವಿಸುದಕ್ಕಷ್ಟೆ ಇರುವುದಲ್ಲ. ಉತ್ಪಾದನೆ ಮತ್ತು ಹಂಚಿಕೆ ಸಮಾನವಾಗಿರಬೇಕು. ಇದೇ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಬಡವರ ಮನೆಬಾಗಿಲಿಗೆ ತಲುಪಿಸುತ್ತಿರುವುದಾಗಿ ಅವರು ಹೇಳಿದರು.

ಡಾ. ಅಂಬೇಡ್ಕರ್ ಅವರು ನುಡಿದಂತೆ ಜನರಿಗೆ ಮತ ಹಾಕುವ ಹಕ್ಕು ಮಾತ್ರ ಇದ್ದರೆ ಸಾಲದು. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ಹಕ್ಕು ಸಿಕ್ಕಾಗ ಮಾತ್ರ ಸಂವಿಧಾನದ ಆಶಯ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ಪರಿಕಲ್ಪನೆಯಡಿ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆಯೆಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಅವರು, ನಾಡಗೀತೆಯ ಮೂಲಕ ಸಮಾನತೆಯನ್ನು ಸಾರಿದ್ದಾರೆ. ನಾಡಗೀತೆಯನ್ನು ಹಾಡುವುದರೊಂದಿಗೆ ಅನುಸರಿಸುವ ಮೂಲಕ ಈ ನಾಡನ್ನು ಶಾಂತಿಯ ತೋಟವನ್ನಾಗಿ ಮಾಡಬೇಕಾಗಿದೆ. ಆದರೆ, ಇಂದು ಸಮಾಜವನ್ನು ಜಾರಿಯ ಹೆಸರಿನಲ್ಲಿ ಒಡೆಯಲಾಗುತ್ತಿದ್ದು, ಇದರಿಂದ ಸೌಹಾರ್ದತೆ ಮೂಡುವುದಿಲ್ಲವೆಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News