ಉತ್ತರದ ವಿರುದ್ಧದ ದಿಗ್ಬಂಧನ ಸಡಿಲಿಸಲು ಸಿದ್ಧ: ದ. ಕೊರಿಯ
Update: 2018-01-09 17:30 GMT
ಸಿಯೋಲ್ (ದಕ್ಷಿಣ ಕೊರಿಯ), ಜ. 9: ದಕ್ಷಿಣ ಕೊರಿಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯದ ಸ್ಪರ್ಧಿಗಳು ಭಾಗವಹಿಸಲು ಸಾಧ್ಯವಾಗುವಂತೆ ಅಗತ್ಯವಾದರೆ ಆ ದೇಶದ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುವುದು ಎಂದು ದಕ್ಷಿಣ ಕೊರಿಯ ಮಂಗಳವಾರ ಹೇಳಿದೆ.
ಉತ್ತರ ಕೊರಿಯ ನಡೆಸಿರುವ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳಿಗೆ ಪ್ರತಿಯಾಗಿ ಉತ್ತರ ಕೊರಿಯದ ಹಲವಾರು ಅಧಿಕಾರಿಗಳು ತನ್ನ ದೇಶಕ್ಕೆ ಪ್ರವೇಶಿಸುವುದನ್ನು ದಕ್ಷಿಣ ಕೊರಿಯ ನಿಷೇಧಿಸಿದೆ.
ಉತ್ತರ ಕೊರಿಯನ್ನರು ಒಲಿಂಪಿಕ್ಸ್‌ಗೆ ಭೇಟಿ ನೀಡಲು ಸಹಾಯ ಮಾಡುವುದಕ್ಕಾಗಿ ಅಗತ್ಯವಾದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಇತರ ಸಂಬಂಧಿತ ದೇಶಗಳೊಂದಿಗೆ ಚರ್ಚಿಸಿ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ದಕ್ಷಿಣ ಕೊರಿಯದ ವಿದೇಶ ಸಚಿವಾಲಯದ ವಕ್ತಾರ ರೊಹ್ ಕ್ಯು-ಡಿಯೊಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.