ತ್ರಿವಳಿ ತಲಾಖ್ ನಿಷೇಧಕ್ಕೆ ಸುಗ್ರೀವಾಜ್ಞೆ?

Update: 2018-01-11 04:14 GMT

ಹೊಸದಿಲ್ಲಿ, ಜ.11: ತ್ರಿವಳಿ ತಲಾಖ್ ಕ್ರಮವನ್ನು ಅಪರಾಧ ಎಂದು ಪರಿಗಣಿಸುವ ಕಾಯ್ದೆ ಜಾರಿಗೊಳಿಸಲು ಉದ್ದೇಶಿಸಿದ ಮಸೂದೆಗೆ ರಾಜ್ಯಸಭೆಯಲ್ಲಿ ಸೂಕ್ತ ಬೆಂಬಲ ಸಿಗದ ಹಿನ್ನೆಲೆಯಲ್ಲಿ, ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸುವುದೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಇದರ ಜೊತೆಗೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಜಂಟಿ ಅಧಿವೇಶನ ನಡೆಸುವ ಮೂಲಕ ರಾಜ್ಯಸಭೆಯ ಒಪ್ಪಿಗೆ ಪಡೆಯದೇ ಮಸೂದೆಗೆ ಮಂಜೂರಾತಿ ಪಡೆದು ವಿರೋಧ ಪಕ್ಷಗಳ ತಡೆಯನ್ನು ದಾಟುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತ್ರಿವಳಿ ತಲಾಖ್ ಅಪರಾಧ ಕೃತ್ಯ ಎಂದು ಪರಿಗಣಿಸುವ ಮಸೂದೆಗೆ ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನದ ವೇಳೆ ಒಪ್ಪಿಗೆ ದೊರಕಿತ್ತು. ಆದರೆ ವಿರೋಧ ಪಕ್ಷಗಳು ಹಾಗೂ ಎನ್‌ಡಿಎ ಮಿತ್ರಪಕ್ಷವಾದ ಟಿಡಿಪಿ ವಿರೋಧಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಅಗತ್ಯ ಬೆಂಬಲ ಸಿಕ್ಕಿರಲಿಲ್ಲ.

ಈ ಮಸೂದೆಯನ್ನು ಸಂಸದೀಯ ಸಮಿತಿಯ ಪರಾಮರ್ಶೆಗಾಗಿ ಸಲ್ಲಿಸಬೇಕು ಎಂದು ಸದಸ್ಯರು ಆಗ್ರಹಿಸಿದ್ದರು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಕೂಡಾ ಈ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News