ತುಮಕೂರು : 'ಬಿಲ್ಡ್ ಟೆಕ್-2018' ವಸ್ತು ಪ್ರದರ್ಶನ

Update: 2018-01-11 11:22 GMT

ತುಮಕೂರು,ಜ.11:ಒಂದು ವಾಸಯೋಗ್ಯ ಮನೆ ಕಟ್ಟಬೇಕೆಂಬ ಮನುಷ್ಯನ ಪರಿಕಲ್ಪನೆಗೆ ಅಗತ್ಯವಾದ ವಸ್ತುಗಳ ಒಂದೇ ಸೂರಿನಡಿ ನೋಡಲು ಮತ್ತು ಕೊಳ್ಳಲು ಅವಕಾಶವಿರುವ ಇಂತಹ ವಸ್ತುಪ್ರದರ್ಶನ ಜನರಿಗೆ ಹೆಚ್ಚು ಉಪಯೋಗಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ತುಮಕೂರು ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್,ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಬಿಲ್ಡ್ ಟೆಕ್-2018 ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಕಡಿಮೆ ಖರ್ಚಿನಲ್ಲಿ ಸುಂದರ ಮತ್ತು ಗುಣಮಟ್ಟದ ಮನೆ ನಿರ್ಮಾಣ ಮಾಡಬೇಕೆಂಬುವವರ ಕನಸು ಇಂತಹ ವಸ್ತುಪ್ರದರ್ಶನಗಳ ಮೂಲಕ ಈಡೇರಿಸಲಿದೆ ಎಂದರು.

ಕೃತಕ ಮರಳು(ಎಂ.ಸ್ಯಾಂಡ್)ಬಗ್ಗೆ ಇನ್ನೂ ಜನರಲ್ಲಿ ಗೊಂದಲವಿದೆ. ಆದರೂ ಹಾಲಿ ಇರುವ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೊರದೇಶದಿಂದ ಮರಳನ್ನು ಅಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಈಗಾಗಲೇ ಸುಪ್ರಿಂಕೋರ್ಟು ನೀಡಿರುವ ನಿರ್ದೇಶನದಂತೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶದಿಂದ ಒಂದು ಹಿಡಿ ಮರಳು ಹೊರ ಹೋಗುವಂತಿಲ್ಲ.ಹಾಗಾಗಿ ಮರಳಿನ ಅಮದು ಅನಿವಾರ್ಯ.ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿಯೇ ದೊರೆಯುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಂಡು ಕಡಿಮೆ ದರದಲ್ಲಿ ಮನೆ ನಿರ್ಮಿಸಬಹುದು ಎಂಬದಕ್ಕೆ ಇಂದಿರಾ ಕ್ಯಾಟೀನ್‍ಗಳ ನಿರ್ಮಾಣ ಕಾಮಗಾರಿಯೇ ಸಾಕ್ಷಿ, ಪ್ಯಾಬ್ರಿಕೇಟಿಂಗ್ ಬಳಸಿ ಬಹುಬೇಗ ದೀರ್ಘಕಾಲ ಬಾಳುವ ಕಟ್ಟಡಗಳನ್ನು ನಿರ್ಮಿಸಬಹುದು.ಇಂತಹ ವಸ್ತುಪ್ರದರ್ಶನಗಳ ಮೂಲಕ ಜನರಿಗೆ ಇವುಗಳ ಪರಿಚಯ ಮಾಡಿಕೊಡಬೇಕೆಂದು ಟಿ.ಬಿ.ಜಯಚಂದ್ರ ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ರಾಮಮೂರ್ತಿ ಮಾತನಾಡಿ,ಎಲ್ಲಾ ವರ್ಗದ ಜನರು ತಮ್ಮ ಕಲ್ಪನೆಗೆ ಅನುಗುಣವಾಗಿ ಮನೆ ನಿರ್ಮಾಣಕ್ಕೆ ಪೂರಕವಾದ ತಾಂತ್ರಿಕ ವಸ್ತುಪ್ರದರ್ಶನವನ್ನು ಕಳೆದ 2007 ರಿಂದ ಇಲ್ಲಿಯವರೆಗೆ ನಿರಂತರವಾಗಿ ಅಸೋಸಿಯೇಷನ್ ಮಾಡಿಕೊಂಡು ಬರುತ್ತಿದೆ.ಇದು ದೆಶಮಾನೋತ್ಸವ ವಸ್ತುಪ್ರದರ್ಶನವಾಗಿದೆ.ಇಲ್ಲಿ ಒಂದು ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ಒಳಗೊಂಡ 90 ಮಳಿಗೆಗಳು ಒಂದೇ ಸೂರಿನಡಿ ನೋಡಲು ದೊರೆಯುತ್ತವೆ.ಜನರು ಅವರ ಆಸಕ್ತಿ ಮತ್ತು ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿಸ ಬಹುದು. ಇಲ್ಲವೇ ಮಾಹಿತಿ ಪಡೆಯಬಹುದು.ಅಲ್ಲದೆ ನಿರ್ಮಾಣ ಕ್ಷೇತ್ರದಲ್ಲಿ ಆಗಿರುವ ಹೊಸ ತಂತ್ರಜ್ಞಾನದ ಎಲ್ಲಾ ವಸ್ತುಗಳು ಸಹ ಇಲ್ಲಿ ನೋಡಲು ಲಭ್ಯ.ಅಲ್ಲದೆ ಜನವರಿ 12 ರಂದು ಸಚಿಜೆ 6 ಗಂಟೆಗೆ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯ ಸಂಜೆ, ಜನವರಿ 13ರಂದು ವಿಷ್ಣು ಸುರೇಶ್ ಮತ್ತು ಸುಪ್ರೀಯಾ ಜೋಶಿ ತಂಡದಿಂದ ಸಂಗೀತ ಸಚಿಜೆ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ತಮ್ಮ ಕನಸಿನ ಮನೆಯ ನಿರ್ಮಾಣವನ್ನು ಸಕಾರಗೊಳಿಸಿಕೊಳ್ಳಬೇಕೆಂದರು.

ಈ ವೇಳೆ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಶಾಸಕ ಡಾ.ರಫೀಕ್ ಅಹಮದ್,ಉಪಮೇಯರ್ ಫರ್ಜಾನಾಖಾನಂ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಎಸ್.ಪಿ.ಡಾ.ದಿವ್ಯಾ ಗೋಪಿನಾಥ್, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ,ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್‍ನ ಜಂಟಿ ಕಾರ್ಯದರ್ಶಿ ಮಂಗಳಕುಮಾರ್,ನಿರ್ದೇಶಕ ಸತೀಶ್,ಡಿ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News