ಉತ್ತರಪ್ರದೇಶ: ಬಂಪರ್ ಬಟಾಟೆ

Update: 2018-01-11 14:04 GMT

ಲಕ್ನೊ, ಜ.11: ಸಾಮಾನ್ಯವಾಗಿ ಬಂಪರ್ ಬೆಳೆಯಾದರೆ ರೈತರಿಗೆ ಸಂತಸವಾಗುತ್ತದೆ. ಆದರೆ ದೇಶದಲ್ಲಿ ಅತ್ಯಧಿಕ ಬಟಾಟೆ ಬೆಳೆಯುವ ರಾಜ್ಯವಾಗಿರುವ ಉತ್ತರಪ್ರದೇಶದ ರೈತರಿಗೆ ಮಾತ್ರ ಬಟಾಟೆಯ ಬಂಪರ್ ಬೆಳೆಯಾಗಿರುವುದು ಸಮಸ್ಯೆಯನ್ನು ತಂದೊಡ್ಡಿದೆ.

ರಾಜ್ಯದಲ್ಲಿರುವ 1,825 ಶೀತಲೀಕೃತ ದಾಸ್ತಾನು ಮಳಿಗೆಗಳಲ್ಲಿ ಕಳೆದ ವರ್ಷದ ಉತ್ಪನ್ನವೇ ರಾಶಿ ಬಿದ್ದಿದೆ. ಹೀಗಾಗಿ ಬಟಾಟೆಯ ಬೆಲೆ ಕುಸಿದಿದೆ. ಇದರಿಂದ ಸಣ್ಣ ರೈತರು ಅತೀ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.

  1 ಕಿ.ಗ್ರಾಂ. ಬಟಾಟೆ ಬೆಳೆಯಲು 8 ರೂ. ವೆಚ್ಚ ತಗಲುತ್ತದೆ ಎಂದು ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ಮುಹಮ್ಮದಾಬಾದ್ ಗ್ರಾಮದ ಸಣ್ಣ ರೈತನಾಗಿರುವ ಕೃಷ್ಣಕುಮಾರ್ ವರ್ಮ ಹೇಳುತ್ತಾರೆ. ಬೀಜದ ಬೆಲೆ, ಕೂಲಿ , ಉಳುಮೆ, ನೀರಾವರಿ ವ್ಯವಸ್ಥೆ, ಸಾಗಣೆ, ದಾಸ್ತಾನು ಇತ್ಯಾದಿ ಖರ್ಚು ಇದರಲ್ಲಿ ಸೇರಿದೆ. ಆದರೆ ಬಾರಾಬಂಕಿಯಲ್ಲಿರುವ ತರಕಾರಿ ಮಂಡಿಯಲ್ಲಿ ಕಿ.ಗ್ರಾಂ.ಗೆ 1ರಿಂದ 2 ರೂ.ದರದಲ್ಲಿ ಖರೀದಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ಹೊಸ ಬೆಳೆಯ ಬಟಾಟೆ ಕಿ.ಗ್ರಾಂ.ಗೆ 3ರಿಂದ 5 ರೂ. ದರದಲ್ಲಿ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷದ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವ ಕಾರಣ ರೈತರು ಶೀತಲೀಕೃತ ದಾಸ್ತಾನುಮಳಿಗೆಯಲ್ಲಿರುವ ತಮ್ಮ ಉತ್ಪನ್ನಗಳನ್ನು ಹೊರತೆಗೆಯಲು ಹಿಂಜರಿಯುತ್ತಿದ್ದಾರೆ. ಆದರೆ ದಾಸ್ತಾನುಮಳಿಗೆಯಲ್ಲಿ 50 ಕಿ.ಗ್ರಾಂ. ತೂಕದ ಚೀಲಕ್ಕೆ 2.50 ರೂ. ದಾಸ್ತಾನು ಬಾಡಿಗೆ ವಿಧಿಸಲಾಗುವ ಕಾರಣ ರೈತರ ಸಮಸ್ಯೆ ಇಮ್ಮಡಿಸಿದೆ. ಇಟಾವ ಜಿಲ್ಲೆಯ ದಾಸ್ತಾನು ಮಳಿಗೆಯೊಂದು ತನ್ನಲ್ಲಿದ್ದ ಶೇ.25ರಷ್ಟು ಬಟಾಟೆಯನ್ನು ರಸ್ತೆಗೆ ಸುರಿದಿರುವ ಘಟನೆಯೂ ನಡೆದಿದೆ.

   ಕಳೆದ ವರ್ಷ ಕನ್ನೌಜ್ ಜಿಲ್ಲೆಯ ಚಂದ್ರಶೇಖರ್ ಎಂಬ ರೈತ 2,400 ಕಿ.ಗ್ರಾಂ. ಬಟಾಟೆ ಬೆಳೆದಿದ್ದರು . ಉತ್ಪಾದನಾ ವೆಚ್ಚ ಪ್ರತೀ ಕಿ.ಗ್ರಾಂ.ಗೆ 5 ರೂ. ಆಗಿತ್ತು. ಆದರೆ 2017ರಲ್ಲಿ ಸರಕಾರ ಘೋಷಿಸಿರುವ ಬೆಂಬಲ ಬೆಲೆ ಪ್ರತೀ ಕಿ.ಗ್ರಾಂ.ಗೆ 4.87 ರೂ. ಮಾತ್ರ. ಸರಕಾರ 10 ರೂ. ಬೆಂಬಲ ಬೆಲೆ ಘೋಷಿಸಿದರೆ ಮಾತ್ರ ನಮಗೆ ಸ್ವಲ್ಪ ಲಾಭವಾಗಬಹುದು ಎಂದು ಚಂದ್ರಶೇಖರ್ ಹೇಳುತ್ತಾರೆ. 2016-17ರಲ್ಲಿ ಉತ್ತರಪ್ರದೇಶದಲ್ಲಿ 155 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಬಟಾಟೆ ಬೆಳೆದಿದ್ದರೆ, 2017-18ರಲ್ಲಿ ಇದು 160 ಲಕ್ಷ ಮೆಟ್ರಿಕ್ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

   ಕಳೆದ ವಾರ ಲಕ್ನೊದ ಪ್ರಮುಖ ರಸ್ತೆಗಳಲ್ಲಿ, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸರಕಾರಿ ನಿವಾಸಕ್ಕೆ ಸಾಗುವ ವಿಧಾನಸಭೆಯ ಎದುರುಗಿರುವ ರಸ್ತೆಯಲ್ಲಿ ಬಟಾಟೆಗಳನ್ನು ರಾಶಿ ಹಾಕಲಾಗಿತ್ತು. ಈ ಕೃತ್ಯ ನಡೆಸಿರುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಸಿತ್ತು. ಆದರೆ ಈ ಘಟನೆ ದೇಶದ ಬಟಾಟೆ ಬೆಳೆಯ ಶೇ.35ರಷ್ಟನ್ನು ಉತ್ಪಾದಿಸುವ ರಾಜ್ಯದ ರೈತರ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News