ಧನ್ಯಶ್ರೀ ಕುಟುಂಬದ ನೋವಿನ ಗಾಯಕ್ಕೆ ಉಪ್ಪು ಸವರಿದ ಪ್ರಮೋದ್ ಮುತಾಲಿಕ್

Update: 2018-01-11 14:42 GMT

ಚಿಕ್ಕಮಗಳೂರು, ಜ.11: ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಯೊಂದು ಇದೀಗ ವಿವಾದವನ್ನು ಸೃಷ್ಟಿಸಿದೆ.

ಗುರುವಾರ ಚಿಕ್ಕಮಗಳೂರು ನಗರದ ನ್ಯಾಯಾಲಯದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, “ಮೂಡಿಗೆರೆಯಲ್ಲಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಯುವತಿಯರು ಈ ರೀತಿ ಸೂಕ್ಷ್ಮವಾಗಿ ಇರಬಾರದು. ಅವಳಿಗೆ ಸಾಂತ್ವನ ಹೇಳಲು ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಹೋಗಿದ್ದರು. ಅವಳನ್ನು ಸಾಯಿಸಲು ಹೋಗಿರಲಿಲ್ಲ, ಅವಳನ್ನು ಬದುಕಿಸಬೇಕೆಂದು ಹೋಗಿದ್ದರು. ಆ ಯುವತಿ ಮುಸ್ಲಿಂ ಜೊತೆಗೆ ಹೋಗಿದ್ದರೆ ಅವಳ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು” ಎಂದು ಹೇಳಿದರು.

“ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹಿಂದೂ ಸಂಘಟಕರು ಅವಳ ಬಳಿ ಹೋಗಿಲ್ಲ. ಅವಳನ್ನು ಉಳಿಸುವ ಸಲುವಾಗಿ, ಬುದ್ಧಿಮಾತು ಹೇಳುವ ಸಲುವಾಗಿ ಹೋಗಿದ್ದರು. ನೀನು ಸಾಯಬೇಕು, ಕೊಂದು ಹಾಕ್ತೀವಿ ಎಂದು ಹಿಂದೂ ಸಂಘಟಕರು ಧಮ್ಕಿ ಹಾಕಿಲ್ಲ. ಅವಳಿಗೆ ಬುದ್ಧಿವಾದ ಹೇಳಿದ್ದಾರೆ. ಈ ರೀತಿ ಅವಘಡವಾಗಿದೆ. ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಸಂಘಟಕರು ಎಚ್ಚರಿಕೆಯಿಂದ ಇರಬೇಕು ಅನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಮುತಾಲಿಕ್”  ಹೇಳಿದರು.

“ಧನ್ಯಾ ಮುಸ್ಲಿಂ ಜೊತೆ ಹೋಗಿದ್ದರೆ ಅವಳ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು”, “ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಅವಳನ್ನು ಸಾಯಿಸಲು ಹೋಗಿರಲಿಲ್ಲ”, “ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಸಂಘಟಕರು ಎಚ್ಚರಿಕೆಯಿಂದ ಇರಬೇಕು ಅನ್ನುವುದಕ್ಕೆ ಇದೊಂದು ಉದಾಹರಣೆ” ಎನ್ನುವ ಮುತಾಲಿಕ್ ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸಿದೆ. ಈಗಾಗಲೇ ನೊಂದಿರುವ ಕುಟುಂಬಕ್ಕೆ ಶ್ರೀರಾಮ ಸೇನೆಯ ನಾಯಕರ ಮಾತುಗಳು ಮತ್ತಷ್ಟು ಘಾಸಿ ಮಾಡಿವೆ.

ಆರೆಸ್ಸೆಸ್, ಬಿಜೆಪಿ ವಿರುದ್ಧ ದಾಖಲೆಗಳಿದ್ದರೆ ಗೃಹ ಇಲಾಖೆಗೆ ಸಲ್ಲಿಸಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಓಟು ಗಳಿಸಲು ಆರೆಸ್ಸೆಸ್, ಬಿಜೆಪಿಯವರು ಉಗ್ರಗಾಮಿಗಳು ಎಂದು ಹೇಳಿಕೆ ನೀಡಿದ್ದಾರೆ. ಈ ತರಹದ ಹೇಳಿಕೆಯಿಂದ ಹಿಂದೂಗಳ ಓಟು ಕಳೆದುಕೊಳ್ಳುತ್ತೀರಿ ಎಂದು ಮುತಾಲಿಕ್ ಹೇಳಿದರು.

ಆರೆಸ್ಸೆಸ್, ಬಿಜೆಪಿಯವರು ಭಯೋತ್ಪಾದಕರು ಎನ್ನುವುದಕ್ಕೆ ದಾಖಲೆಗಳು ನಿಮ್ಮಲ್ಲಿದೆಯಾ ಎಂದು ಪ್ರಶ್ನಿಸಿದ ಅವರು, ದಾಖಲೆಗಳಿದ್ದರೆ ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿ ಎಂದು ಸಲಹೆ ನೀಡಿದರು.

ರಾಜ್ಯದ 21 ಜಿಲ್ಲೆಯಲ್ಲಿ ಪಿಎಫ್‍ಐ ಸಂಘಟನೆ ಇದೆ. 7 ಕೊಲೆಗಳು ಪಿಎಫ್ ಐ ಕಾರ್ಯಕರ್ತರ ಮೇಲೆ ದಾಖಲಾಗಿದೆ. ಈಗಾಗಲೇ ಹಲವರು ಬಂಧನಕ್ಕೊಳಪಟ್ಟಿದ್ದಾರೆ. ಹಾಗಾಗಿ ಮೊದಲು ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಲಿ. ಮುಖ್ಯಮಂತ್ರಿಗೆ ತಾಕತ್ತಿದ್ದರೆ ಆರೆಸ್ಸೆಸನ್ನು ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು.

ಆರೆಸ್ಸೆಸನ್ನು ಪಿಎಫ್‍ಐನೊಂದಿಗೆ ಹೋಲಿಕೆ ಮಾಡುವವರು ಮೂರ್ಖರು. ಈಗಾಗಲೇ ಕಾಂಗ್ರೆಸ್ ಎಷ್ಟೋ ರಾಜ್ಯಗಳಲ್ಲಿ ಧೂಳೀಪಟವಾಗಿದೆ. ಮುಸ್ಲಿಂ ತುಷ್ಠೀಕರಣದಿಂದ ಕಾಂಗ್ರೆಸ್ ಮೂಲೆಗುಂಪಾಗುತ್ತಿದೆ. ಹಿಂದೂ ಭಯೋತ್ಪಾದನೆ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಕಾಂಗ್ರೆಸ್‍ನಿಂದಲೇ ಹಿಂದೂ ಭಯೋತ್ಪಾದನೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News