ಶೃಂಗೇರಿ: ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರದ ದೂರು ನೀಡಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನ

Update: 2018-01-12 09:22 GMT

ಚಿಕ್ಕಮಗಳೂರು, ಜ. 12: ಬಿಜೆಪಿ ಕಾರ್ಯಕರ್ತನೋರ್ವ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.

2017ರ ಡಿ.31ರಂದು ರಾತ್ರಿ ಒಂಟಿಯಾಗಿದ್ದ ತನ್ನ ಮನೆಗೆ ನುಗ್ಗಿದ ವಿದ್ಯಾರಣ್ಯಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ನರೇಂದ್ರ ಹೆಗ್ಗಡೆ ಎಂಬಾತ ಅತ್ಯಾಚಾರ ಮಾಡಿರುವುದಾಗಿ ದಲಿತ ಮಹಿಳೆಯೋರ್ವರು ಜ. 10ರಂದು ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ನರೇಂದ್ರ ಹೆಗ್ಗಡೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ತನಿಖೆ  ಪ್ರಾರಂಭಿಸಿದ್ದರು.

ಸಂತ್ರಸ್ತ ಮಹಿಳೆ ಇಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಯನ್ನು ಶೃಂಗೇರಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೂರು ದಾಖಲಿಸಿದ ನಂತರ ಮಹಿಳೆಗೆ ಆರೋಪಿಯಿಂದ ಪ್ರಾಣಭೀತಿ ಎದುರಾಗಿದೆ ಎಂದು ಶಂಕಿಸಲಾಗಿದೆ. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News