ಕನ್ನಡ ಕಾವ್ಯಲೋಕದ ಶಿವ

Update: 2018-01-12 18:24 GMT

ಎಚ್. ಎಸ್. ಶಿವಪ್ರಕಾಶ್ ಕನ್ನಡ ಮಹತ್ವದ ಕವಿಗಳಲ್ಲಿ ಒಬ್ಬರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಸರಣಿಯಲ್ಲಿ ನವಕರ್ನಾಟಕ ಪ್ರಕಾಶನವು ಬದುಕು ಬರಹಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದೆ. 2012ರಲ್ಲಿ ‘ಮಬ್ಬಿನ ಹಾಗೆ ಕಣಿವೆಯಾಸಿ’ ಎಂಬ ಕೃತಿಗಾಗಿ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಗಳಿಸಿರುವ ಎಚ್. ಎಸ್. ಶಿವಪ್ರಕಾಶ್ ಅವರು ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ ಹೆಸರು ಮಾಡಿರುವ ಕನ್ನಡದ ವಿಶಿಷ್ಟ ಬರಹಗಾರರು. ಸ್ಪಾನಿಷ್, ಜಪಾನೀಸ್, ಇಂಗ್ಲಿಷ್, ಮಲಯಾಳಂ, ಮರಾಠಿ ಮತ್ತಿತರ ಭಾಷೆಗಳಿಂದಲೂ ಅನುವಾದಿಸಿರುವ ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ಸ್ತರಗಳಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದವರು. ಬಿದರ ಹಳ್ಳಿ ನರಸಿಂಹ ಮೂರ್ತಿ ಇಲ್ಲಿ ಶಿವಪ್ರಕಾಶ್ ಬದುಕು ಬರಹಗಳನ್ನು ಸಂಗ್ರಹಿಸಿದ್ದಾರೆ.

ಇಲ್ಲಿ ಶಿವಪ್ರಕಾಶ್ ಅವರ ವ್ಯಕ್ತಿತ್ವವನ್ನು ಮೂರು ಹಂತಗಳಲ್ಲಿ ಕಡೆದಿಡಲಾಗಿದೆ. ಮೊದಲನೆಯ ಬದುಕು ಭಾಗದಲ್ಲಿ ಅವರ ಬದುಕಿನ ಪ್ರಾಥಮಿಕ ವಿವರ, ಆತ್ಮನಿವೇದನೆ, ವೈಯಕ್ತಿಕ ಒಡನಾಟಗಳ ಮೂಲಕ ವಿವರಗಳನ್ನು ತೆರೆದಿಡಲಾಗಿದೆ. ಶಿವಪ್ರಕಾಶ್ ಅವರನ್ನು ಕವಿಯಾಗಿ ರೂಪಿಸಿದ ಅವರ ಬಾಲ್ಯ, ಪರಿಸರ, ಒಡನಾಟಗಳ ಕಥನಗಳು ಇಲ್ಲಿವೆ. ವಿವಿಧ ಸಾಹಿತಿಗಳು, ಲೇಖಕರ ಮೂಲಕವೂ ಶಿವಪ್ರಕಾಶ್ ಅವರನ್ನು ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಎರಡನೇ ಅಧ್ಯಾಯ ಅವರ ಬರಹಗಳಿಗೆ ಮೀಸಲಾಗಿದೆ. ಕಾವ್ಯ, ನಾಟಕ, ವಿಮರ್ಶೆ, ಆತ್ಮಕಥೆ, ಅನುವಾದ, ಸಂಪಾದನೆ, ಅಂಕಣ ಬರಹ ಹೀಗೆ ಶಿವಪ್ರಕಾಶ್ ತೊಡಗಿಕೊಂಡಿರುವ ಅಗಾಧ ಸಾಹಿತ್ಯಕ ಕಾರ್ಯಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಪರಿಚಯಿಸಲಾಗಿದೆ. ಮೂರನೆ ಅಧ್ಯಾಯದಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ‘ಮಬ್ಬಿನ ಹಾಗೆ ಕಣಿವೆಯಾಸಿ’ ಕೃತಿಯನ್ನು ಮುಖ್ಯವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ. ಬೇಂದ್ರೆ ಕಾವ್ಯದ ಭಾಷಿಕ ಶರೀರದ ಒಂದು ವಿಭಿನ್ನ ಬಗೆಯ ಮುಂದುವರಿಕೆಯನ್ನು ಕಂಬಾರರ ಕಾವ್ಯದಲ್ಲಿ ಕಾಣಬಹುದಾದರೆ, ಬೇಂದ್ರೆ ಕಾವ್ಯದ ಒಳಸತ್ವದ ಮುಂದುವರಿಕೆಯನ್ನು ಶಿವಪ್ರಕಾಶರ ಕಾವ್ಯದಲ್ಲಿ ಕಾಣಬಹುದು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಬೇಂದ್ರೆ, ಶಿವಪ್ರಕಾಶರ ಕಾವ್ಯ ನಮ್ಮ ಸಾಂಸ್ಕೃತಿಕ ಪರಂಪರೆಗೆ ಸೂಕ್ಷ್ಮದರ್ಶಕ ಅಳವಡಿಸಿ ಅನುಭಾವಿಕ ಚರಿತ್ರೆಯ ಅಪೂರ್ವ ಸತ್ವಗಳನ್ನು, ಅಂತಃಕರಣ ಕಲಕುವ ಮಾನವೀಯ ಮಾದರಿಗಳನ್ನು ಅನಾವರಣಗೊಳಿಸಿ ಆಧುನಿಕ ತಲ್ಲಣಗಳಿಗೆ ದೇಸೀ ಪರಿಹಾರಗಳನ್ನು ಹುಡುಕಿಕೊಡುತ್ತದೆ ಎಂದು ಹೇಳುತ್ತಾರೆ.
132 ಪುಟಗಳ ಈ ಕೃತಿಯ ಮುಖಬೆಲೆ 70 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News