ಕೋರೆಗಾಂವ್ ಮತ್ತು ಬಹುಜನ ರಾಜಕಾರಣ
ಇಲ್ಲಿ ದಲಿತ ಸಮುದಾಯವನ್ನು ಕಾಡಬೇಕಿರುವ ಪ್ರಶ್ನೆ ಎಂದರೆ, ಕೋರೆಗಾಂವ್‌ನಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರದಲ್ಲಿ ತೊಡಗಿದ್ದವರು ಯಾರು? ಇಲ್ಲಿ ಸಂಘಪರಿವಾರದ ಸೈದ್ಧಾಂತಿಕ ಮನಸುಗಳು ಸಕ್ರಿಯವಾಗಿದೆ ಎನ್ನುವುದು ಸ್ಪಷ್ಟ. ಆದರೆ ಈ ಸೈದ್ಧಾಂತಿಕ ಮನಸುಗಳು ಇಂದಿಗೂ, ಖೈರ್ಲಾಂಜಿ, ಕಂಬಾಲಪಲ್ಲಿ, ಬತಾನಿತೊಲ, ಲಕ್ಷಣಭಾತೆ, ಉನಾ ಮತ್ತು ಕೋರೆಗಾಂವ್ ನಂತರವೂ ದಲಿತರ ಒಂದು ವರ್ಗವನ್ನು ಆವರಿಸಿರುವುದು ಏಕೆ? ಬಹುಜನ ರಾಜಕಾರಣ ಎಂದರೆ ದಲಿತರ ಒಂದು ವರ್ಗ ಅಧಿಕಾರ ರಾಜಕಾರಣದ ಆಧಿಪತ್ಯ ವಹಿಸುವುದು ಎಂದಲ್ಲ.
ಭಾರತದ ಪ್ರಭುತ್ವ ಮತ್ತು ಆಡಳಿತ ವರ್ಗಗಳಿಗೆ ಎರಡು ಪ್ರಮುಖ ಆತಂಕಗಳು ಸದಾ ಎದುರಾಗುತ್ತಿರುತ್ತವೆ. ಮೊದಲನೆಯದು ವರ್ಗದ ನೆಲೆಯಲ್ಲಿ ಈ ದೇಶದ ಕೋಟ್ಯಂತರ ದುಡಿಯುವ ವರ್ಗಗಳು ಮತ್ತು ಶ್ರಮಜೀವಿಗಳ ಆಕ್ರೋಶ. ಎರಡನೆಯದು ಸಾಮಾಜಿಕ ನೆಲೆಯಲ್ಲಿ ಶತಮಾನಗಳ ಶೋಷಣೆಯನ್ನು ಎದುರಿಸಿ, ಸಾಂವಿಧಾನಿಕ ಪ್ರಜಾತಂತ್ರ ಆಡಳಿತದಲ್ಲೂ ಇಂದಿಗೂ ಸಮಾನತೆಯ ಕನಸು ಕಾಣುತ್ತಿರುವ ದಲಿತ-ಶೋಷಿತ ವರ್ಗಗಳ ಜಾಗೃತಿ. ತಮ್ಮ ಅಧಿಪತ್ಯ ಅಥವಾ ಪ್ರಭುತ್ವದ ಅಸ್ತಿತ್ವಕ್ಕೆ ಸವಾಲೆಸೆಯುವ ಯಾವುದೇ ಶಕ್ತಿಯನ್ನು ಬ್ರಿಟಿಷ್ ವಸಾಹತು ಆಡಳಿತದಂತೆಯೇ ಹೊಸಕಿ ಹಾಕುವ ಪ್ರವೃತ್ತಿ ಸ್ವತಂತ್ರ ಭಾರತದಲ್ಲೂ ಕಾಣಬಹುದು. ಕೋಮುವಾದ, ಭಯೋತ್ಪಾದನೆ, ಜಾತಿ ಸಂಘರ್ಷ, ಮಾವೊವಾದ ಇವೆಲ್ಲವೂ ಆಡಳಿತಾರೂಢ ಸರಕಾರಗಳಿಗೆ ಮತ್ತು ಆಡಳಿತ ವ್ಯವಸ್ಥೆಗೆ ಎದುರಾಗುವ ಸವಾಲುಗಳು. ಪ್ರಭುತ್ವ ಈ ಸವಾಲುಗಳನ್ನು ನಿಯಂತ್ರಿಸಲು ಮಾತ್ರ ಪ್ರಯತ್ನಿಸುತ್ತದೆ. ಆದರೆ ಮೇಲೆ ಉಲ್ಲೇಖಿಸಿದ ಎರಡು ಪ್ರಮುಖ ಸವಾಲುಗಳು ಪ್ರಭುತ್ವದ ಪಾಲಿಗೆ ಮಾರಣಾಂತಿಕವಾಗಿಯೇ ಕಾಣುತ್ತದೆ. ಶ್ರಮಜೀವಿಗಳ ಹೋರಾಟ ಹಾಗೂ ದಲಿತ-ಶೋಷಿತ ವರ್ಗಗಳ ಜಾಗೃತಿಯನ್ನು ಪ್ರಭುತ್ವ ಮೊಳಕೆಯಲ್ಲೇ ಚಿವುಟಿ ಹಾಕಲು ಯತ್ನಿಸುತ್ತದೆ. ಹಾಗಾಗಿಯೇ 1818ರಲ್ಲಿ ಬ್ರಾಹ್ಮಣ ಪೇಶ್ವೆಗಳ ವಿರುದ್ಧ ಅಸ್ಪಶ್ಯ ಸಮುದಾಯ ನಡೆಸಿದ ಕೋರೆಗಾಂವ್ ಯುದ್ಧ ಆಳುವ ವರ್ಗಗಳಲ್ಲಿ ಭೀತಿ ಸೃಷ್ಟಿಸಿದಂತೆಯೇ 2018ರ ಕೋರೆಗಾಂವ್ ನೆನಪು ಇಂದಿನ ಪ್ರಭುತ್ವಕ್ಕೆ ಮಾರಕವಾಗಿ ಕಾಣುತ್ತದೆ.
ಇಲ್ಲಿ ಮೂಲ ಪ್ರಶ್ನೆ ಇರುವುದು ಕೋರೆಗಾಂವ್ ಯುದ್ಧ ಮತ್ತು ಅದರ ಆಂತರ್ಯದಲ್ಲಿ ಅಡಗಿರುವ ಮೇಲ್ಜಾತಿಯ ಶೋಷಣೆ, ದೌರ್ಜನ್ಯ ಮತ್ತು ಅಧಿಪತ್ಯ ರಾಜಕಾರಣದ ಅಟ್ಟಹಾಸ. ಈ ವಿಕೃತಿಗಳ ವಿರುದ್ಧ ಶೋಷಿತ ಸಮುದಾಯಗಳ ದಿಟ್ಟ ಹೋರಾಟ ಆಂದಿನಂತೆಯೇ ಇಂದಿಗೂ ಮುಂದುವರಿದಿರುವುದು ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಅಂಬೇಡ್ಕರ್ ಅಸ್ಪಶ್ಯತೆಯ ವಿರುದ್ಧ ನಡೆಸಿದ ಸುದೀರ್ಘ ಹೋರಾಟದ ಸಂದರ್ಭದಲ್ಲಿ ಕೋರೆಗಾಂವ್ ಮಿಥ್ಯೆಯ ಸ್ವರೂಪದಲ್ಲಿ ಬಳಕೆಯಾಯಿತೋ ಅಥವಾ ಇತಿಹಾಸದ ವಿಶಿಷ್ಟ ಘಟ್ಟದ ಸ್ವರೂಪ ಪಡೆದಿತ್ತೋ ಎನ್ನುವುದಕ್ಕಿಂತಲೂ ಪ್ರಸಕ್ತ ಸನ್ನಿವೇಶದಲ್ಲಿ ಕೋರೆಗಾಂವ್ ನೆನಪುಗಳು ದಲಿತ ಸಂವೇದನೆ ಮತ್ತು ಬಹುಜನ ರಾಜಕಾರಣಕ್ಕೆ ಹೇಗೆ ನೆರವಾಗುತ್ತವೆ ಎಂಬ ಜಿಜ್ಞಾಸೆ ನಮ್ಮನ್ನು ಕಾಡಬೇಕಿದೆ. ರಾಷ್ಟ್ರೀಯವಾದ, ದೇಶಭಕ್ತಿ ಅಥವಾ ದೇಶಪ್ರೇಮ ಯಾವುದೇ ಒಂದು ನಿರ್ದಿಷ್ಟ ವರ್ಗ ಅಥವಾ ಸಮುದಾಯದ ಸ್ವತ್ತಲ್ಲ. ಇವೆಲ್ಲವೂ ಸಾಪೇಕ್ಷವೇ. 1818ರ ಸಂದರ್ಭದಲ್ಲಿ ರಾಷ್ಟ್ರೀಯತೆ ಅಥವಾ ದೇಶಪ್ರೇಮ ಎನ್ನುವ ಕಲ್ಪನೆಯೂ ಇರಲಿಕ್ಕೆ ಸಾಧ್ಯವಿರಲಿಲ್ಲ. 20ನೆಯ ಶತಮಾನದಲ್ಲಿ ನಿಂತು ಶತಮಾನದ ಹಿಂದಿನ ಘಟನೆಯನ್ನು ಈ ಕಲ್ಪನೆಯ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಮಾಡುವುದೂ ಸರಿಯಲ್ಲ. ಆದರೆ ಸಾಮುದಾಯಿಕ ಜಾಗೃತಿ ಮತ್ತು ಶೋಷಣೆಯ ವಿರುದ್ಧ ನಡೆಯುವ ಹೋರಾಟಗಳಿಗೆ ಈ ನಿರ್ಬಂಧ ಇರುವುದಿಲ್ಲ. 21ನೆಯ ಶತಮಾನದಲ್ಲೂ, ಕೋರೆಗಾಂವ್‌ನ 200ನೆಯ ವರ್ಷಾಚರಣೆಯ ಸಂದರ್ಭದಲ್ಲೂ ಶೋಷಣೆಯ ಆಯಾಮಗಳು ಬದಲಾಗಿಲ್ಲ, ಶೋಷಣೆಯ ತೀವ್ರತೆ ಕಡಿಮೆಯಾಗಿಲ್ಲ. ಅಥವಾ ಶೋಷಕ ವರ್ಗಗಳ ಧೋರಣೆಯೂ ಬದಲಾಗಿಲ್ಲ. ಹಾಗಾಗಿಯೇ ಇಂದಿನ ಅಸ್ಪಶ್ಯರ ಹೋರಾಟದ ಚೌಕಟ್ಟಿನಲ್ಲೇ ವ್ಯಕ್ತವಾಗುವ ಕೋರೆಗಾಂವ್ ನೆನಪುಗಳೂ ಆಳುವ ವರ್ಗಗಳ ಪ್ರತಿನಿಧಿಗಳಿಗೆ ದೇಶದ್ರೋಹಿ ಎನಿಸುತ್ತದೆ.
ಇತಿಹಾಸದ ಸ್ಮರಣೆಯೇ ಇಷ್ಟು ಉಗ್ರ ಪ್ರತಿಕ್ರಿಯೆ ಸೃಷ್ಟಿಸುವುದಾದರೆ, ಶೋಷಿತ ವರ್ಗಗಳು ಇತಿಹಾಸ ಸೃಷ್ಟಿಸಲು ಮುಂದಾದರೆ ಏನಾಗಬಹುದು? ಇದು ದಲಿತ ಸಂವೇದನೆಯನ್ನು ಕಳೆದುಕೊಂಡು ಆಳುವ ವರ್ಗಗಳ ಬಾಲಂಗೋಚಿಗಳಾಗಿರುವ ದಲಿತ ಸಮುದಾಯ ಮತ್ತು ಸಂಘಟನೆಗಳನ್ನು ಕಾಡಬೇಕಿರುವ ಪ್ರಶ್ನೆ. ಇಂದು ದಲಿತ ಪ್ರಜ್ಞೆ ಏಕಮುಖಿಯಾಗಿಲ್ಲ, ದಲಿತ ಸಂವೇದನೆ ಸಾರ್ವತ್ರಿಕವಾಗಿಲ್ಲ, ದಲಿತ ಜಾಗೃತಿ ಸಮಗ್ರತೆಯನ್ನು ಹೊಂದಿಲ್ಲ. ಇನ್ನೂ ಹೇಳಬೇಕೆಂದರೆ ದಲಿತ ಅಸ್ಮಿತೆಯೂ ಸಹ ಸ್ಪಷ್ಟ ನೆಲೆ ಕಂಡುಕೊಂಡಿಲ್ಲ. ಇಲ್ಲವಾದಲ್ಲಿ ಉನಾ ಘಟನೆ ನಮ್ಮ ನೆನಪುಗಳಿಂದ ಇಷ್ಟು ಬೇಗನೆ ಮರೆಯಾಗುತ್ತಿರಲಿಲ್ಲ. ಕಂಬಾಲಪಳ್ಳಿ ಇತಿಹಾಸದ ಪುಟಗಳನ್ನು ಸೇರುತ್ತಿರಲಿಲ್ಲ. ಖೈರ್ಲಾಂಜಿ ಒಂದು ಘಟನೆಯಾಗಿ ಮರೆಯಾಗುತ್ತಿರಲಿಲ್ಲ. ಕೋರೆಗಾಂವ್ ಸಂದರ್ಭದಲ್ಲಿ ನಡೆದ ಸಂಘರ್ಷ ಮತ್ತು ಹಿಂಸಾಚಾರ ದಲಿತ ಜಾಗೃತಿ, ದಲಿತ ಸಂವೇದನೆ ಮತ್ತು ದಲಿತ ಪ್ರಜ್ಞೆಯನ್ನು ಬಡಿದೆಬ್ಬಿಸುವ ಒಂದು ವಿಶಿಷ್ಟ ಸನ್ನಿವೇಶವನ್ನು ಸೃಷ್ಟಿಸಿದೆ. ವಸಾಹತು ಕಾಲದ ಬ್ರಾಹ್ಮಣ ಪೇಶ್ವೆ ಆಡಳಿತಗಾರರ ಶ್ರೇಷ್ಠತೆಯ ಅಹಮಿಕೆ ಮತ್ತು ಪ್ರಭುತ್ವದ ಧೋರಣೆಯನ್ನೇ ಸಮಕಾಲೀನ ಸಂದರ್ಭದ ಪ್ರಜಾತಂತ್ರ ವ್ಯವಸ್ಥೆಯ ಪ್ರಭುತ್ವದಲ್ಲೂ ಕಾಣುತ್ತಿರುವುದು ದುರಂತವಾದರೂ ಸತ್ಯ.
ಇಲ್ಲಿ ದಲಿತ ಸಮುದಾಯವನ್ನು ಕಾಡಬೇಕಿರುವ ಪ್ರಶ್ನೆ ಎಂದರೆ, ಕೋರೆಗಾಂವ್‌ನಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರದಲ್ಲಿ ತೊಡಗಿದ್ದವರು ಯಾರು? ಇಲ್ಲಿ ಸಂಘಪರಿವಾರದ ಸೈದ್ಧಾಂತಿಕ ಮನಸುಗಳು ಸಕ್ರಿಯವಾಗಿದೆ ಎನ್ನುವುದು ಸ್ಪಷ್ಟ. ಆದರೆ ಈ ಸೈದ್ಧಾಂತಿಕ ಮನಸುಗಳು ಇಂದಿಗೂ, ಖೈರ್ಲಾಂಜಿ, ಕಂಬಾಲಪಲ್ಲಿ, ಬತಾನಿತೊಲ, ಲಕ್ಷಣಭಾತೆ, ಉನಾ ಮತ್ತು ಕೋರೆಗಾಂವ್ ನಂತರವೂ ದಲಿತರ ಒಂದು ವರ್ಗವನ್ನು ಆವರಿಸಿರುವುದು ಏಕೆ? ಬಹುಜನ ರಾಜಕಾರಣ ಎಂದರೆ ದಲಿತರ ಒಂದು ವರ್ಗ ಅಧಿಕಾರ ರಾಜಕಾರಣದ ಅಧಿಪತ್ಯ ವಹಿಸುವುದು ಎಂದಲ್ಲ. ಇದು ಕೇವಲ ರಾಜಕೀಯ ನೆಲೆಯಲ್ಲಿ ಒಂದು ವರ್ಗದ ದಲಿತರಿಗೆ ದನಿ ನೀಡಬಹುದಾದ ವಿದ್ಯಮಾನ. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕ ನೆಲೆಯಲ್ಲಿ ಅಧಿಕಾರ ರಾಜಕಾರಣ ಒಂದು ಮೆಟ್ಟಿಲು ಆಗಬಹುದು ಆದರೆ ಮಾರ್ಗ ಆಗುವುದಿಲ್ಲ. ಈ ಮಾರ್ಗವನ್ನು ಕಂಡುಕೊಳ್ಳಬೇಕಾದರೆ ದಲಿತ ಅಸ್ಮಿತೆ ಅಥವಾ ದಲಿತತ್ವದೊಡನೆ ದಲಿತ ಪ್ರಜ್ಞೆ ಜಾಗೃತವಾಗಬೇಕು, ದಲಿತ ಸಂವೇದನೆ ಸಾರ್ವತ್ರಿಕವಾಗಬೇಕು.
ದುರಂತ ಎಂದರೆ ಕೋರೆಗಾಂವ್ ಘಟನೆ ಮೇಲ್ವರ್ಗದ ದಲಿತರ ಕೂದಲನ್ನೂ ಅಲುಗಾಡಿಸಿಲ್ಲ. ಉನಾ ಸಹ ಅಲುಗಾಡಿಸಲಿಲ್ಲ. ಈ ಮೇಲ್ವರ್ಗದ ದಲಿತರಲ್ಲಿ ಇಂದಿಗೂ ಹಿಂದೂ ಪ್ರಜ್ಞೆ ಜಾಗೃತವಾಗಿಯೇ ಇದೆ. ಹಾಗೆಯೇ ನಾವು ಎಂದರೆ ಹಿಂದೂ ಎನ್ನುವ ಧೋರಣೆಯೂ ಜಾಗೃತವಾಗಿದೆ. ಸಹಜವಾಗಿ ಅವರು ಎಂದಾಗ ಅನ್ಯರು ಸೃಷ್ಟಿಯಾಗುತ್ತಾರೆ. ಈ ಅನ್ಯರನ್ನು ಸಂಘಪರಿವಾರ ಅಲ್ಪಸಂಖ್ಯಾತರಲ್ಲಿ ಕಾಣುತ್ತದೆ. ತಮಗರಿವಿಲ್ಲದೆಯೇ ಶೂನ್ಯ ಸಂವೇದನೆಯ ಮೇಲ್ವರ್ಗದ ದಲಿತರು ಈ ಭ್ರಮಾಲೋಕದಲ್ಲಿ ಸಿಲುಕುತ್ತಾರೆ. ದಲಿತ ಪ್ರಜ್ಞೆ ಮತ್ತು ದಲಿತ ಸಂವೇದನೆ ಈ ಮೇಲ್ವರ್ಗಗಳನ್ನು ಮತಧಾರ್ಮಿಕ ಚೌಕಟ್ಟಿನಿಂದ ಹೊರತರುವುದು ಇಂದಿನ ತುರ್ತು ಅಗತ್ಯವಾಗಿದೆ. ವಿಶಿಷ್ಟ ಸಂದರ್ಭದಲ್ಲಿ ದಲಿತ ಸಮುದಾಯಗಳೂ ಅನ್ಯರ ಪಟ್ಟಗೆ ಸೇರುತ್ತಾರೆ ಎನ್ನುವ ಪ್ರಜ್ಞೆ ನಮ್ಮಾಳಗೆ ಜಾಗೃತವಾಗಬೇಕಿದೆ. ಕೋರೆಗಾಂವ್‌ನಲ್ಲಿ ನಡೆದ ಪ್ರತಿರೋಧ ಮತ್ತು ಹಿಂಸಾಚಾರ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಧಿಕಾರ ರಾಜಕಾರಣದ ಹಪಾಹಪಿಯ ನಡುವೆ ಈ ದಲಿತ ಸಂವೇದನೆಯನ್ನು ಕಡೆಗಣಿಸುವುದು ಬಹುಜನ ರಾಜಕಾರಣವನ್ನು ಅವಕಾಶವಾದದತ್ತ ಕರೆದೊಯ್ಯುವುದು ಖಚಿತ. ಇಂದಿನ ಭಾರತದ ಸಂದರ್ಭದಲ್ಲಿ ದಲಿತ ಸಮುದಾಯಗಳು ಮೂರು ವರ್ಗಗಳಾಗಿ ವಿಘಟಿತವಾಗಿವೆ. ಸಂವಿಧಾನದತ್ತ ಸೌಲಭ್ಯಗಳಿಂದ ಶೋಷಣೆಯ ಚೌಕಟ್ಟಿನಿಂದ ಹೊರಬಂದು ಸುಭದ್ರ ಜೀವನ ನಿರ್ವಹಿಸುತ್ತಿರುವ ಮೇಲ್ವರ್ಗ, ಸಂವಿಧಾನದ ಚೌಕಟ್ಟಿನಲ್ಲೇ ಸಮಾಜೋ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಘನತೆಗಾಗಿ ಶ್ರಮಿಸುತ್ತಿರುವ ಮಧ್ಯಮ ವರ್ಗ ಹಾಗೂ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯನ್ನೇ ಗುರುತಿಸಲಾಗದೆ ಇಂದಿಗೂ ಸಾಮಾಜಿಕ ಶೋಷಣೆ, ದೌರ್ಜನ್ಯ ಮತ್ತು ಸಾಂಸ್ಕೃತಿಕ ನಿರ್ಲಕ್ಷ್ಯ ಎದುರಿಸುತ್ತಿರುವ ತಳಹಂತದ ಸಮುದಾಯಗಳು. ಈ ಮೂರೂ ವರ್ಗಗಳಲ್ಲಿ ದಲಿತ ಪ್ರಜ್ಞೆ ಇದೆ ಆದರೆ ಜಾಗೃತವಾಗುತ್ತಿಲ್ಲ. ದಲಿತ ಸಂವೇದನೆ ಮಡುಗಟ್ಟಿಬಿಟ್ಟಿದೆ. ಮೂರೂ ವರ್ಗಗಳ ನಡುವೆ ಪರಸ್ಪರ ಸಂವಹನದ ಸಾಧ್ಯತೆಗಳನ್ನು ಪರಿಶೋಧಿಸುವುದು ಅಗತ್ಯ.
ಈ ಅಗತ್ಯದ ನಡುವೆಯೇ ದಲಿತ ಪ್ರಜ್ಞೆಯ ಧ್ರುವೀಕರಣ, ದಲಿತ ಸಂವೇದನೆಯ ಸಾರ್ವತ್ರೀಕರಣ ಮತ್ತು ಬಹುಜನ ರಾಜಕಾರಣದ ನಿರ್ದಿಷ್ಟ ಧ್ಯೇಯಗಳು ಸಾಮಾಜಿಕ ನೆಲೆಯಲ್ಲಿ ವ್ಯಕ್ತವಾಗಬೇಕಿದೆ. 1970ರ ದಶಕದ ಹೋರಾಟದ ಸಾಗರಕ್ಕೆ ಸೇರಿದ್ದ ನದಿಗಳು ಪುನಃ ಭೋರ್ಗರೆಯುವಂತಾದರೆ ಈ ದಿಕ್ಕಿನಲ್ಲಿ ಮುನ್ನಡೆ ಸಾಧ್ಯ. ಹಾಗೆಯೇ ಛಿದ್ರವಾಗಿದ್ದರೂ ಸುಭದ್ರ ನೆಲೆಯನ್ನು ಕಂಡುಕೊಂಡಿರುವ ದಲಿತ ಸಂಘಟನೆಗಳು ಈ ಭೋರ್ಗರೆತದ ಒಂದು ಭಾಗವಾದಾಗ ಉಜ್ವಲ ಭವಿಷ್ಯವೂ ಸಾಧ್ಯ. ಕೋರೆಗಾಂವ್ ಈ ದೃಷ್ಟಿಯಿಂದ ಒಂದು ಸಣ್ಣ ಕಿಡಿಯಾದರೆ ಸಾರ್ಥಕ.