ವಿಧ ವಿಧ ವರ್ತನೆಗಳು
ಭಾಗ 1
ಮಕ್ಕಳಿಗೆ ಸಹಜ ವರ್ತನೆಗಳನ್ನು ಅಭ್ಯಾಸ ಮಾಡಿಸಬೇಕೆಂದರೆ ನೇರವಾಗಿ ಅವರಿಗೆ ಸಂಯಮವನ್ನು ಉಂಟುಮಾಡುವ ಚಟುವಟಿಕೆಗಳನ್ನು ಮಾಡಿಸಬೇಕು ಮತ್ತು ತರಬೇತಿ ನೀಡಬೇಕು. ಹೀಗೂ ಆಲೋಚಿಸುವ, ಮಕ್ಕಳಲ್ಲಿ ಅಥವಾ ಹಿರಿಯರಲ್ಲಿ ಸಹಜ ವರ್ತನೆಗಳು ಇವೆಯೇ ಇಲ್ಲವೇ ಎಂದು ನೋಡಲೂ ಕೂಡ ನಾವು ಬಳಸಬಹುದಾದ ಮಾನದಂಡವೆಂದರೆ ಸಂಯಮಪೂರಿತ ನಡವಳಿಕೆಗಳು, ಸಂಯಮದ ಆಲೋಚನೆಗಳು, ಸಂಯಮದ ಅಭಿವ್ಯಕ್ತಿಗಳು, ಸಂಯಮದ ಪ್ರತಿಕ್ರಿಯೆಗಳು, ಸಂಯಮದ ಸ್ಪಂದನಗಳು.
►ಸಹಜ ವರ್ತನೆಗಳು
ನಮ್ಮ ಭಾರತದಂತಹ ಹಲವು ಸಂಸ್ಕೃತಿ ಮತ್ತು ಸಮುದಾಯಗಳ ದೇಶದಲ್ಲಿ ಭಿನ್ನ ವಿಚಾರಗಳ, ಭಿನ್ನ ಪ್ರತಿಕ್ರಿಯೆಗಳ ಮತ್ತು ವಿಭಿನ್ನ ನಡಾವಳಿಗಳ ಪ್ರತಿಬಿಂಬಗಳನ್ನು ಹೆಜ್ಜೆಹೆಜ್ಜೆಗೂ ಕಾಣುತ್ತಿರುತ್ತೇವೆ. ಸಹಜ ವರ್ತನೆಗಳಲ್ಲಿ ಸಾಮಾಜಿಕವಾದ ಮತ್ತು ವ್ಯಕ್ತಿಗತವಾದ ಎರಡು ಬಗೆಯ ವರ್ತನೆಗಳನ್ನು ಗುರುತಿಸಬೇಕು. ವ್ಯಕ್ತಿಗತವಾದಂತಹ ಸಹಜ ವರ್ತನೆಗಳು ಈ ಹಿಂದೆಯೇ ತಿಳಿದಂತೆ ಮಗುವಿಗೆ ಕುಟುಂಬದಿಂದಲೇ ರೂಪುಗೊಳ್ಳುತ್ತದೆ. ಸಂತೋಷವಾದಾಗ ನಗುವುದು, ನೋವಾದಾಗ ಮತ್ತು ದುಃಖವಾದಾಗ ಅಳುವುದು. ಬೇಕಾದ್ದು ಸಿಗದಿದ್ದಾಗ ಹಟ ಮಾಡುವುದು. ಹಸಿವು ನೀರಡಿಕೆಗಳಾದಾಗ ಕೇಳಿ ಪಡೆಯುವುದು. ನೋವಾದಾಗ ನೋವೆನ್ನುವುದು. ನಿದ್ರೆ ಬಂದಾಗ ನಿದ್ರೆ ಮಾಡುವುದು; ಇವೆಲ್ಲಾ ಎಲ್ಲರೂ ಮಾಡುವುದೇ ತಾನೇ? ಇದನ್ನೇಕೆ ಅಧ್ಯಯನದ ವ್ಯಾಪ್ತಿಗೆ ಒಳಪಡಿಸಬೇಕೆಂದುಕೊಳ್ಳಬೇಡಿ. ಯಾವಾಗ ನಮ್ಮ ಮಗುವು ಸಹಜವಾಗಿ ನಗದೇ ಇದ್ದಾಗ, ಅಳದೇ ಇದ್ದಾಗ, ಕೋಪಿಸಿಕೊಳ್ಳದೇ ಇದ್ದಾಗ; ನಾವು ತಿಳಿಯಬೇಕಾಗಿರುವುದೆಂದರೆ ಮಗುವು ಸಹಜವಾಗಿಲ್ಲ ಎಂದೇ. ಮಗುವು ಗಲಾಟೆ ಮಾಡುವುದು, ಶಾಂತವಾಗಿರುವುದು ಬೇರೆಯೇ ಕತೆ. ಆದರೆ ಹಸಿವಾದಾಗ ತಿನ್ನುವುದು, ನೀರಡಿಕೆಯಾದಾಗ ನೀರು ಕುಡಿಯದಿರುವುದು, ನಿದ್ರೆ ಹೋಗುವ ಸಮಯದಲ್ಲಿ ನಿದ್ರಿಸದೇ ಇರುವುದು; ಈ ರೀತಿಯ ಸೂಚನೆಗಳನ್ನು ಕಂಡಲ್ಲಿ ಮಗುವಿಗೆ ಏನೋ ಸಮಸ್ಯೆ ಆಗಿದೆ ಎಂದೇ ಅರ್ಥ. ಎಷ್ಟೋ ಬಾರಿ ಜನರಲ್ ಫಿಸಿಷಿಯನ್ ಕಂಡುಕೊಳ್ಳಲಾಗದ ವಿಷಯಗಳನ್ನು ಮಕ್ಕಳ ಮನೋವೈದ್ಯ ಕಂಡು ಹಿಡಿಯುತ್ತಾರೆ. ಆದರೆ ನಮ್ಮ ದೇಶದ ಜನರ ಬಹುದೊಡ್ಡ ಸಮಸ್ಯೆಯೆಂದರೆ, ಮನೋವೈದ್ಯರನ್ನು ಹುಚ್ಚರ ವೈದ್ಯರನ್ನಾಗಿ ನೋಡುವುದು. ಒಬ್ಬ ವ್ಯಕ್ತಿ ಸಂಪೂರ್ಣ ಬಟ್ಟೆ ಹರಿದುಕೊಂಡು, ವಸ್ತುಗಳನ್ನು ಹಾಳುಗೆಡವಿಕೊಂಡು, ನಗ್ನನಾಗಿ ಬೀದಿಯಲ್ಲಿ ಓಡುವವರೆಗೂ ಅವನಿಗೆ ಮನೋವೈದ್ಯರ ಮುಖ ತೋರಿಸಬಾರದೆಂಬ ಶಪಥವನ್ನು ಮಾಡಿದವರಂತಿರುತ್ತಾರೆ. ಕಾಲಕಾಲಕ್ಕೆ ಮನೋವೈದ್ಯರನ್ನು ಭೇಟಿ ಮಾಡುವುದರಿಂದ ತಮ್ಮ ವರ್ತನೆಗಳಲ್ಲಿ ಆಗುವ ಬದಲಾವಣೆ ಮತ್ತು ವರ್ತನೆಗಳ ಮಾದರಿಗಳನ್ನು ಸ್ವಯಂ ಪರೀಕ್ಷಿಸಿಕೊಂಡು ಸ್ವಸ್ಥ ಮನಸ್ಸನ್ನು ಹೊಂದಲು ಸಾಧ್ಯವಾಗುತ್ತದೆ. ಮಕ್ಕಳು ಸಿಕ್ಕಾಪಟ್ಟೆ ಚಟುವಟಿಕೆಯಿಂದ ಕೂಡಿದ್ದು, ವಸ್ತುಗಳನ್ನು ನಿಭಾಯಿಸುವುದರಲ್ಲಿ ನಿಯಂತ್ರಣವನ್ನು ಹೊಂದಿಲ್ಲವೆಂದಾದರೂ, ಯಾವ ಚಟುವಟಿಕೆಗಳಲ್ಲೂ ಆಸಕ್ತಿಯನ್ನು ತೋರದೇ ಮುದ್ದಾಗಿ, ಮಂಕಾಗಿ ಒಂದು ಕಡೆ ದೇವರಿದ್ದಂತೆ ಇರುತ್ತಾರೆಂದರೂ ಮನೋವೈದ್ಯರನ್ನು ಕಾಣಬೇಕು. ಇಷ್ಟನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಸಹಜ ವರ್ತನೆಗಳ ಬಗ್ಗೆ ಗಮನ ಹರಿಸೋಣ. ಮಕ್ಕಳಲ್ಲಿ ಭಯ, ಆಸೆ, ಕುತೂಹಲ, ಚೇಷ್ಟೆ; ಹೀಗೆ ಹಲವು ಬಗೆಯ ಭಾವಗಳನ್ನು ತೋರುವಂತಹ ಸಾಮಾನ್ಯ ವರ್ತನೆಗಳು ಇರುತ್ತವೆ. ಇವುಗಳಲ್ಲಿ ಯಾವುದು ಕಡಿಮೆ ಇದೆ, ಹೆಚ್ಚಾಗಿದೆ, ಅತಿರೇಕದಲ್ಲಿದೆ ಎಂಬುದನ್ನು ಗಮನಿಸಬೇಕು. ಎಲ್ಲಾ ಗುಣಗಳಿಗೂ ಅವುಗಳದೇ ಆದಂತಹ ಗ್ರಾಪ್‌ಗಳಿರುತ್ತವೆ. ಉದಾಹರಣೆಗೆ ಭಯವನ್ನು ತೆಗೆದುಕೊಳ್ಳೋಣ. ಯಾವುದೇ ಒಂದು ಮಗುವಿನಲ್ಲಿ ಭಯವೆಂಬುದು ಸಹಜ ಗುಣ. ಆದರೆ ಆ ಭಯವು ಎಷ್ಟರಮಟ್ಟಿಗೆ ಇದೆ ಎಂಬುವುದನ್ನು ಗಮನಿಸುವುದರಲ್ಲಿ ಪೋಷಕರ ಸಾಮರ್ಥ್ಯವಿರುವುದು. ಅತಿಯಾದ ಭಯವಿದೆ ಎಂದಾದರೂ, ಭಯವೇ ಇಲ್ಲ ಎಲ್ಲದ್ದಕ್ಕೂ ಮೊಂಡನಂತೆ ಮುನ್ನುಗ್ಗುತ್ತದೆ ಎಂದರೂ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಕೆಲವೊಮ್ಮೆ ಭಯ ಪಡಬೇಕಾದ ವಿಷಯಗಳಿಗೆ ಭಯಪಡದಿರುವುದು. ಹೆದರಬಾರದ ವಿಷಯಗಳಿಗೆ ವಿಪರೀತ ಹೆದರುವುದು; ಇತ್ಯಾದಿಗಳನ್ನು ಗಮನಿಸಿದರೆ ಅವರಿಗೆ ಸಮಾಲೋಚನೆ ಮಾಡಲು ಸಹಕಾರಿಯಾಗುವುದು. ಒಟ್ಟಾರೆ ಮಕ್ಕಳು ದೈನಂದಿನ ಚಟುವಟಿಕೆಗಳಲ್ಲಿ ಎಷ್ಟರಮಟ್ಟಿಗೆ ಸಹಜತೆಯನ್ನು ಕಾಯ್ದುಕೊಳ್ಳುತ್ತಾರೆ ಎಂಬುದನ್ನು ಗಮನಿಸಬೇಕಾಗುವುದು.
►ಸಾಮಾಜಿಕ ಸಹಜ ವರ್ತನೆಗಳು
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಮಗು ವಿನೊಂದಿಗೆ ಪೋಷಕರು ಎಲ್ಲಾದರೂ ಹೋದಾಗ ಮಗುವು ಹೇಗೆ ವರ್ತಿಸುತ್ತದೆ ಎಂಬುದನ್ನು ಗಮನಿಸಬೇಕು. ಕೆಲವು ಮನೆಗಳಲ್ಲಿ ಅತಿಥಿಗಳು ಬಂದಾಗ ಪೋಷಕರು ಮಗುವನ್ನು ಅವರಿಗೆ ಪರಿಚಯಿಸಿದರೂ ಅದು ತನ್ನ ಕಡೆಯಿಂದ ಯಾವ ರೀತಿಯಲ್ಲಿಯೂ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನುಕೊಡುವುದಿಲ್ಲ. ಹಲೋ, ಹಾಯ್, ನಮಸ್ಕಾರ ಎಂತದ್ದೂ ಇಲ್ಲ. ಬಂದ ಅತಿಥಿಗಳ ಮುಂದೆ ಮಗುವನ್ನು ಅದು ಹೇಳು ಇದು ಹೇಳು ಎಂದು ಜಗ್ಗಾಡುವ ಬದಲು, ಇಂತಹ ಗುಣಗಳನ್ನು ಕಂಡಾಗ ತಾವು ಮಾತ್ರ ಇರುವಾಗ ಮಗುವಿಗೆ ತಿಳುವಳಿಕೆಯನ್ನು ನೀಡಬೇಕು. ಅವರೊಬ್ಬರು ಲೇಖಕರು. ನಾನು ರಂಗಕರ್ಮಿ ಮತ್ತು ಸಿನೆಮಾ ನಿರ್ದೇಶಕನೆಂದು ವಿಶೇಷವಾಗಿ ಪರಿಗಣಿಸುತ್ತಾ ಅವರ ಮನೆಗೆ ಕರೆದೊಯ್ದರು. ಹೈಸ್ಕೂಲುಗಳಲ್ಲಿ ಓದುತ್ತಿರುವ ಅವರ ಮಕ್ಕಳನ್ನುನನಗೆ ತೋರಿಸಿ ಅವರನ್ನು ನನ್ನ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಅವರ ಮಗ ಕೋಣೆ ಸೇರಿಕೊಂಡಿದ್ದವನು ಎಷ್ಟು ಕರೆದರೂ, ಅಪ್ಪ ಮತ್ತು ಅಮ್ಮ ಇಬ್ಬರೂ ಅದೆಷ್ಟು ಗೋಗರೆದರೂ ಹೊರಗೆಯೇ ಬರಲಿಲ್ಲ. ಸಾಲದಕ್ಕೆ ಒಳಗಿಂದ ಏನೂ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಆ ಹುಡುಗನ ತಂದೆ ಹೇಳಿದ್ದೇನೆಂದರೆ, ‘‘ಅವನಿಗೆ ತುಂಬಾ ಸಂಕೋಚ. ಅವನು ಸಣ್ಣ ವಯಸ್ಸಿನಿಂದಲೂ ಹೀಗೆ. ಆಮೇಲೆ ಸರಿ ಹೋಗುತ್ತಾನೆ’’ ಎಂದು. ನನಗೆ ಆಘಾತವಾದ ವಿಷಯವೇನೆಂದರೆ, ಸಣ್ಣ ವಯಸ್ಸಿನಿಂದಲೂ ಪೋಷಕರು ಅವನ ಬಗ್ಗೆ ಎಚ್ಚೆತ್ತುಕೊಂಡೇ ಇಲ್ಲ ಎನ್ನುವುದು. ನೋಡಿ, ಯಾವುದೇ ವರ್ತನೆಯಾದರೂ ಅದು ಅಭಿವ್ಯಕ್ತಗೊಳ್ಳುವಾಗ ಸಕಾರಣವಾಗಿರದಿದ್ದರೆ ಅಲ್ಲೇನೋ ಸಮಸ್ಯೆ ಇದೆ ಎಂದೇ ಅರ್ಥ. ಮನೋರೋಗಿಗಳ ಸಾಮಾನ್ಯ ಲಕ್ಷಣಗಳಲ್ಲಿ ಗಮನಾರ್ಹವಾಗಿರುವುದೆಂದರೆ, ಕಾರಣವಿಲ್ಲದ ವರ್ತನೆಗಳು. ಯಾರು ಬಾಹ್ಯ ಕಾರಣವಿಲ್ಲದೇ ಅಳುತ್ತಾರೆ, ನಗುತ್ತಾರೆ, ಭಯಪಡುತ್ತಾರೆ, ಕೋಪಗೊಳ್ಳುತ್ತಾರೆ, ಬೇಸರದಿಂದ ಇರುತ್ತಾರೆ ಎಂದರೆ, ಕಾರಣವಿಲ್ಲದೇ ದ್ವೇಷಿಸುತ್ತಾರೆಂದರೆ ಒಳಗೇನೋ ಅಸ್ವಾಸ್ಥದ ಕಾರಣವಿದೆ ಎಂದರ್ಥ. ತಮ್ಮ ಅಳು, ನಗು, ಬೇಸರ, ಕೋಪಗಳ ಕಾರಣವನ್ನು ತಾವಾದರೂ ಹೇಳಬೇಕಾಗುತ್ತದೆ. ಕೆಲವೊಮ್ಮೆ ಹೊರಗಿನಿಂದ ಕಾಣುವವರಿಗೆ ತಿಳಿಯುವುದಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಅವರಾದರೂ ತಮ್ಮ ಕಾರಣವನ್ನು ತಾವು ಹೇಳಬೇಕಾಗುತ್ತದೆ. ಒಂದು ವೇಳೆ ತಾವೇ ಕಾರಣವನ್ನು ಕಂಡುಕೊಳ್ಳದೇ ವಿವಿಧ ಭಾವುಕತೆಗಳಿಗೆ ಒಳಗಾಗುತ್ತಿದ್ದಾರೆಂದರೆ ಅದನ್ನು ಗಂಭೀರವಾಗಿ ಗಮನಿಸಲೇ ಬೇಕು. ತಂದೆಯ ಜೊತೆಗೆ ಬಂದಿರುವ ಯಾರೋ ಒಬ್ಬ ಅಂಕಲ್‌ಗೆ ಹಾಯ್ ಹೇಳಿ, ಹೋಗುವಾಗ ಬಾಯ್ ಹೇಳುವಷ್ಟು ಸಹಜವಾದ ವರ್ತನೆಗಳು ಅವರಲ್ಲಿ ಇರಬೇಕು. ಆ ಹುಡುಗನೇನೂ ನನ್ನೊಡನೆ ಕೂತು ಏನು ಅಂಕಲ್, ಏನು ಮಾಡ್ತಿದ್ದೀರಿ? ಮದ್ವೆ ಮಕ್ಕಳು, ಕಸುಬು ಏನು ಮಾಡಿಕೊಂಡಿದ್ದೀರಿ ಎಂದೇನೂ ಕೇಳುವ ಅಗತ್ಯವಿಲ್ಲ. ಹಾಗೆ ಕೇಳಿದರೂ ಅವನು ಅಸಹಜ ವಿಭಾಗಕ್ಕೇ ಸೇರುವನು. ಬಂದ ಅತಿಥಿಗಳಿಗೆ ವಂದಿಸಿ, ಅವರು ಕೇಳುವ, ಏನು ಹೆಸರು, ಯಾವ ತರಗತಿ, ಯಾವ ಶಾಲೆ ಇತ್ಯಾದಿ ಸ್ಟೀರಿಯೋ ಟೈಪ್ ಪ್ರಶ್ನೆಗಳಿಗೆ ಉತ್ತರಿಸಿ, ಬಾಯ್ ಎಂದು ಹೇಳಿ ಒಂದೆರಡು ನಿಮಿಷಯದ ಸಂಭಾಷಣೆಯನ್ನು ಮುಗಿಸಿಕೊಂಡು ಹೋಗುವಂತಹ ವ್ಯವಧಾನ ತೋರದ ಮಗುವಿಗೆ ವರ್ತನೆಯ ಸಮಸ್ಯೆ ಇದೆ ಎಂದಾಗುತ್ತದೆ. ನನ್ನ ಲೇಖಕ ಮಿತ್ರರ ಮಗ ಹೊರಗೆ ಬರಲೇ ಇಲ್ಲ. ನಾನೋ, ಆ ಹೊತ್ತಿನ ಅವನ ವೈಯಕ್ತಿಕ ಕಾರಣವೇನಾದರೂ ಇದೆಯೇನೋ ಎಂದುಕೊಂಡರೆ, ಅವರ ಮನೆಯವರು ಹೇಳುವ ಪ್ರಕಾರ ಅವನು ಇರುವುದೇ ಹಾಗೆಯಂತೆ. ಅವನು ಸಹಜವಾಗಿ ಹಾಗೇ ಇರುತ್ತಾನೆ ಎಂದು ಅವನ ತಂದೆ ಹೇಳಿದಾಗ ಅದು ಸಹಜ ಅಲ್ಲ. ಅವನ ಅಸಹಜತೆಯನ್ನು ಪುನರಾವರ್ತಿತವಾಗಿ ನೋಡಿ ಅದನ್ನು ಸಹಜವೆಂದು ಕರೆಯುತ್ತಿದ್ದೀರಿ ಎಂದೆ. ಆದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಎಂದು ನನ್ನ ಸಮಾಧಾನಿಸಲು ಅಥವಾ ತಮ್ಮನ್ನು ಸಮಾಧಾನಿಸಿಕೊಳ್ಳಲು ಯತ್ನಿಸಿದರು. ಮನಸ್ಸಿನ ಆರೋಗ್ಯದ ಮೊದಲ ಲಕ್ಷಣವೇ ಸಂಯಮ. ಯಾವ ವ್ಯಕ್ತಿಗಳಲ್ಲಿ ಸಂಯಮವು ಸಹಜಗುಣವಾಗಿರುವುದಿಲ್ಲವೋ ಆತ ಸಹಜವಾಗಿ ಎಲ್ಲಾ ವಿಷಯಗಳಲ್ಲಿ ಅಸಹಜವಾಗಿ ವರ್ತಿಸುತ್ತಿರುತ್ತಾನೆ. ಸಂಯಮ ಎಂಬ ಗುಣದ ಅಭಿವ್ಯಕ್ತಿಯೇ ಸಹಜವರ್ತನೆ ಎಂದು ತಿಳಿಯಬಹುದು. ಹಾಗಾಗಿ ಮಕ್ಕಳಿಗೆ ಸಹಜವಾದ ವರ್ತನೆಯನ್ನು ವ್ಯಕ್ತಿಗತವಾಗಿಯಾದರೂ ಅಥವಾ ಸಾಮಾಜಿಕವಾಗಿಯಾದರೂ ರೂಢಿಸಬೇಕೆಂದರೆ ಅವರು ಸಂಯಮವನ್ನು ಧಾರಣೆ ಮಾಡುವುದನ್ನು ಅಭ್ಯಾಸ ಮಾಡಿಸಬೇಕು.
►ಸಂಯಮದ ಅಭ್ಯಾಸ
ಸಂಯಮದ ಅಭ್ಯಾಸ ಮಾಡಿಸುವುದೆಂದರೆ ತನ್ನ ವಿಚಾರಗಳನ್ನು, ಭಾವನೆಗಳನ್ನು, ಅವುಗಳ ಏರಿಳಿತಗಳನ್ನು ಅದುಮಿಡುವುದು ಎಂದಲ್ಲ. ಸಮರ್ಪಕವಾಗಿ, ಸಹಜವಾಗಿ ಮತ್ತು ತನಗೂ ಹಾಗೂ ಇತರರಿಗೂ ಘಾಸಿಯಾಗದಂತೆ ಅಭಿವ್ಯಕ್ತಗೊಳಿಸುವುದು. ತಾನು ಮತ್ತು ಪರ; ಈ ಎರಡಕ್ಕೂ ಘಾಸಿಯಾಗದಂತೆ ವರ್ತಿಸುವ ಮನೋಭಾವವೇ ಸಂಯಮದ ಗುಣ. ಸಾಮಾನ್ಯವಾಗಿ ಸಂಯಮದಿಂದ ಕೂಡಿಲ್ಲದೇ ಇರುವುದೆಲ್ಲವೂ ಅಸಹಜವೇ ಆಗಿರುತ್ತದೆ. ತಮ್ಮ ಎಲ್ಲಾ ನಡವಳಿಕೆ ಮತ್ತು ವರ್ತನೆಗಳಲ್ಲಿ ಸಂಯಮವನ್ನು ಅಭ್ಯಾಸ ಮಾಡುವುದರಿಂದ ಸಹಜ ವರ್ತನೆಗಳನ್ನು ಹೊಂದಬಹುದು ಎಂದೇ ಹೇಳಬಹುದು. ಒಂದು ಸಣ್ಣ ಮಾತಿನಲ್ಲಿ, ವರ್ತನೆಯಲ್ಲಿ ಅಸಹನೆಯ ಪರಮಾವಧಿಗಳನ್ನು ಗುರುತಿಸಬಹುದು. ಹಾಗೆಯೇ ಬಹು ದೀರ್ಘ ಬದುಕಿನಲ್ಲಿ, ವ್ಯವಹಾರಗಳಲ್ಲಿ ಸಂಯಮದ ಸ್ವಭಾವವನ್ನು ಗುರುತಿಸಬಹುದು. ಮಕ್ಕಳಿಗೆ ಸಹಜ ವರ್ತನೆಗಳನ್ನು ಅಭ್ಯಾಸ ಮಾಡಿಸಬೇಕೆಂದರೆ ನೇರವಾಗಿ ಅವರಿಗೆ ಸಂಯಮವನ್ನು ಉಂಟುಮಾಡುವ ಚಟುವಟಿಕೆಗಳನ್ನು ಮಾಡಿಸಬೇಕು ಮತ್ತು ತರಬೇತಿ ನೀಡಬೇಕು. ಹೀಗೂ ಆಲೋಚಿಸುವ, ಮಕ್ಕಳಲ್ಲಿ ಅಥವಾ ಹಿರಿಯರಲ್ಲಿ ಸಹಜ ವರ್ತನೆಗಳು ಇವೆಯೇ ಇಲ್ಲವೇ ಎಂದು ನೋಡಲೂ ಕೂಡ ನಾವು ಬಳಸಬಹುದಾದ ಮಾನದಂಡವೆಂದರೆ ಸಂಯಮಪೂರಿತ ನಡವಳಿಕೆಗಳು, ಸಂಯಮದ ಆಲೋಚನೆಗಳು, ಸಂಯಮದ ಅಭಿವ್ಯಕ್ತಿಗಳು, ಸಂಯಮದ ಪ್ರತಿಕ್ರಿಯೆಗಳು, ಸಂಯಮದ ಸ್ಪಂದನಗಳು. ಯಾವುದೇ ವರ್ತನೆಯು ಸಂಯಮದ ಎಲ್ಲೆಯನ್ನು ಮೀರುತ್ತಿದೆ ಎಂದರೆ ಅಸಹಜತೆ ಮೂಡುತ್ತಿದೆ ಎಂದೇ ಅರ್ಥ. ಹಾಗಾಗಿ, ಆಲೋಚನೆಗಳಲ್ಲಿ, ನಡವಳಿಕೆಗಳಲ್ಲಿ, ಊಟದಲ್ಲಿ, ನಿದ್ರೆಯಲ್ಲಿ, ಲೈಂಗಿಕತೆಯಲ್ಲಿ; ಯಾವುದನ್ನೇ ಹೆಸರಿಸಿ, ಅದರಲ್ಲಿ ಸಂಯಮದ ಗಡಿ ದಾಟುತ್ತಿದೆ ಎಂದರೆ ಅಲ್ಲಿ ಅಸಹಜತೆ ಮೈದೋರಿದೆ ಎಂದಾಗುತ್ತದೆ. ನಮ್ಮ ಮಗುವಿಗೆ ತೀರಾ ಸಂಕೋಚ. ನಮ್ಮ ಮಗು ತೀರಾ ಚೂಟಿ. ನಮ್ಮ ಮಗು ಹೀಗೆಯೇ ಹಾಗೆಯೇ ಎಂದೆಲ್ಲಾ ಸಮರ್ಥಿಸಿಕೊಳ್ಳುವ ಬದಲು ನಾವು ಯಾವಾಗಲೂ ಗಮನಿಸಬೇಕಾದ್ದು ಅದು ಸಂಯಮವನ್ನು ತನ್ನ ನಡವಳಿಕೆಗಳಲ್ಲಿ ಹೊಂದಿದೆಯೇ ಇಲ್ಲವೇ ಅಥವಾ ಸಹಜವಾದ ವರ್ತನೆಗಳನ್ನು ತೋರುತ್ತಿದೆಯೇ ಇಲ್ಲವೇ ಎಂದು. ನಮ್ಮ ಮಗುವನ್ನು ನಾವು ಸದಾ ಸಮರ್ಥಿಸಿಕೊಳ್ಳುವ ಸಾಹಸ ಮಾಡಬಾರದು. ಏಕೆಂದರೆ ಅದರ ಅಸಹಜ ಗುಣಗಳನ್ನು ನಾವೇ ಪೋಷಿಸಿದಂತಾಗುತ್ತದೆ. ಮಗುವನ್ನು ಸದಾ ಕ್ಷಮಿಸೋಣ. ಆದರೆ ಸದಾ ಸಮರ್ಥಿಸಿಕೊಳ್ಳದಿರೋಣ.
ಮಕ್ಕಳಿಗೆ ಸಹಜ ವರ್ತನೆಗಳನ್ನು ಅಭ್ಯಾಸ ಮಾಡಿಸಬೇಕೆಂದರೆ ನೇರವಾಗಿ ಅವರಿಗೆ ಸಂಯಮವನ್ನು ಉಂಟುಮಾಡುವ ಚಟುವಟಿಕೆಗಳನ್ನು ಮಾಡಿಸಬೇಕು ಮತ್ತು ತರಬೇತಿ ನೀಡಬೇಕು. ಹೀಗೂ ಆಲೋಚಿಸುವ, ಮಕ್ಕಳಲ್ಲಿ ಅಥವಾ ಹಿರಿಯರಲ್ಲಿ ಸಹಜ ವರ್ತನೆಗಳು ಇವೆಯೇ ಇಲ್ಲವೇ ಎಂದು ನೋಡಲೂ ಕೂಡ ನಾವು ಬಳಸಬಹುದಾದ ಮಾನದಂಡವೆಂದರೆ ಸಂಯಮಪೂರಿತ ನಡವಳಿಕೆಗಳು, ಸಂಯಮದ ಆಲೋಚನೆಗಳು, ಸಂಯಮದ ಅಭಿವ್ಯಕ್ತಿಗಳು, ಸಂಯಮದ ಪ್ರತಿಕ್ರಿಯೆಗಳು, ಸಂಯಮದ ಸ್ಪಂದನಗಳು.