ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ
ಕನ್ನಡ ಸಾಹಿತ್ಯದಲ್ಲಿ ವೈದಿಕ ಪರಂಪರೆಯ ಎರಡು ಶಾಖೆಗಳಾದ ಅದ್ವೈತ ಮತ್ತು ದೈತ ತತ್ವಗಳು ಹಾಸು ಹೊಕ್ಕಾಗಿ ಬಳಕೆಯಾಗಿವೆ. ಈ ಎರಡು ತತ್ವಗಳನ್ನಾಧರಿಸಿದ ಅನೇಕ ಕೃತಿಗಳು ಸಾಹಿತ್ಯ ಚರಿತ್ರೆಯಲ್ಲಿ ಕಾಣ ಸಿಗುತ್ತವೆ. ಆದರೆ ಇನ್ನೊಂದು ವೈದಿಕ ಶಾಖೆಯಾದ ವಿಶಿಷ್ಟಾದ್ವೈತ ತತ್ವದಲ್ಲಿ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ರಚನೆಯಾಗಿಲ್ಲ ಎನ್ನುವುದು ಈವರೆಗಿನ ತಿಳುವಳಿಕೆಯಾಗಿತ್ತು. ಆದರೆ 16ನೇ ಶತಮಾನದಿಂದಲೇ ವಿಶಿಷ್ಟಾದ್ವೈತದಲ್ಲೂ ಕನ್ನಡದಲ್ಲಿ ಸಾಹಿತ್ಯ ರಚನೆಯಾಗಿರುವುದನ್ನು ‘ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ’ ಕೃತಿ ಗುರುತಿಸುತ್ತದೆ. ವಿಶಿಷ್ಟಾದೈತದ ಪ್ರಭಾವವನ್ನು ಗುರುತಿಸಿ ಹಲವು ಹಿರಿಯ ವಿದ್ವಾಂಸರು ಬರೆದಿರುವ ಲೇಖನಗಳನ್ನು ಡಾ. ನಾ. ಗೀತಾಚಾರ್ಯ ಅವರು ಸಂಪಾದಿಸಿದ್ದಾರೆ. ವಿಚಾರಗೋಷ್ಠಿಯೊಂದರಲ್ಲಿ ಮಂಡಿಸಿದ ಪ್ರಬಂಧಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ.
ವೈದಿಕ ಪರಂಪರೆಯಲ್ಲಿ ರಾಮಾನುಜಾಚಾರ್ಯರ ಕೊಡುಗೆ ಮಹತ್ವವಾದುದು. ಇಂದು ‘ಶೂದ್ರರೆಲ್ಲ ಶಾಶ್ವತ ನರಕವಾಸಿಗಳು’ ಎಂದು ಪ್ರತಿಪಾದಿಸಿದ ಮಧ್ವಾಚಾರ್ಯರಿಗೆ ಸಿಕ್ಕಿದ ಮಹತ್ವ, ತಮ್ಮ ಮಿತಿಯಲ್ಲಿ ಜಾತಿಯನ್ನು ನಿವಾರಿಸಲು ಪ್ರಯತ್ನಿಸಿದ ರಾಮಾನುಜಾಚಾರ್ಯರಿಗೆ ಸಿಕ್ಕಿಲ್ಲ. ಈ ನೆಲೆಯಲ್ಲಿ ವಿಶಿಷ್ಟಾದ್ವೈತದ ಪ್ರಭಾವದಲ್ಲಿ ರೂಪುಗೊಂಡು ಕನ್ನಡ ಸಾಹಿತ್ಯವನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ. ಹರಿದಾಸ ಸಾಹಿತ್ಯದಿಂದ ಹಿಡಿದು ಕನಕದಾಸ, ಲಕ್ಷ್ಮೀಶ ಮೊದಲಾದವರು ವಿಶಿಷ್ಟಾದ್ವೈತ ಅನುಯಾಯಿಗಳೇ ಆಗಿದ್ದಾರೆ ಎಂದು ಈ ಕೃತಿ ಹೇಳುತ್ತದೆ. 2000ಕ್ಕೂ ಅಧಿಕ ಕೀರ್ತನೆಗಳು ಸಂಗ್ರಹವಾಗಿವೆ. ಕೀರ್ತನ ಸಾಹಿತ್ಯವಷ್ಟೇ ಅಲ್ಲದೆ ಕಂದ, ವೃತ್ತದ ಪದ್ಯ ಗ್ರಂಥಗಳು, ಷಟ್ಪದಿ ಕಾವ್ಯಗಳು, ಗದ್ಯ ಕೃತಿಗಳನ್ನೂ ರಚಿಸಿದ್ದಾರೆ ಎನ್ನುವುದನ್ನು ಕೃತಿ ಹೇಳುತ್ತದೆ. ಡಾ. ಪಿ.ವಿ ನಾರಾಯಣ ಅವರು ‘ಧರ್ಮ ಮತ್ತು ಸಾಹಿತ್ಯ’ವನ್ನು ಅವಲೋಕಿಸಿದ್ದಾರೆ. ನೀಲತ್ತ ಹಳ್ಳಿ ಕಸ್ತೂರಿ ಅವರು ‘ಕನ್ನಡ ವಿಶಿಷ್ಟಾದ್ವೈತ ಧರ್ಮ ಮತ್ತು ಸಂಸ್ಕೃತಿ’ಯನ್ನು ಇಟ್ಟು ಬರೆದಿದ್ದಾರೆ. ಪ್ರೊ. ಜಿ. ಅಶ್ವತ್ಧನಾರಾಯಣ ವಿಶಿಷ್ಟಾದ್ವೈತ ಸಾಹಿತ್ಯ ಕೃತಿಗಳನ್ನು ಪರಿಚಯಿಸಿದ್ದಾರೆ. ರಾಮಶೇಷನ್ ಅವರು ಹರಿದಾಸ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿಶಿಷ್ಟಾದ್ವೈತದಲ್ಲಿ ಹರಿದಾಸ ಚಳವಳಿ ಮತ್ತು ದೇಸೀ ಸಂಸ್ಕೃತದ ಕುರಿತು ಗೀತಾಚಾರ್ಯರು ಬರೆದಿದ್ದಾರೆ.
148 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.