ಪದ್ಯಗಳಂತಹ ನ್ಯಾನೋ ಕತೆಗಳು

Update: 2018-01-15 18:37 GMT

ಸಾಮಾಜಿಕ ಜಾಲತಾಣಗಳು, ವಾಟ್ಸ್‌ಆ್ಯಪ್ ಪ್ರಭಾವವೋ ಏನೋ ಇತ್ತೀಚಿನ ದಿನಗಳಲ್ಲಿ ಕತೆ ಹೇಳುವ ತಂತ್ರಗಳು ಬದಲಾಗುತ್ತಿವೆ. ಮುಖ್ಯವಾಗಿ ಈ ಹಿಂದಿನಂತೆ ದೀರ್ಘ ಕತೆಗಳಿಗೆ ಮಾರುಕಟ್ಟೆಗಳಿಲ್ಲ ಎಂದು ಭಾವಿಸಿರುವ ಒಂದು ತಲೆಮಾರೂ ಹುಟ್ಟಿಕೊಂಡಿವೆ. ಸಾಮಾಜಿಕ ಜಾಲತಾಣಗಳ ಓದುಗರಿಗೆ ಅನುಕೂಲವಾಗುವಂತೆ ಕಿರುಕತೆಗಳು ಹುಟ್ಟಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ‘ನ್ಯಾನೋ ಕತೆ’ಗಳೆಂಬ ವಿಭಿನ್ನವಾದ ಪ್ರಯೋಗಗಳೂ ನಡೆಯುತ್ತಿವೆ. ಕೆಲವೇ ಸಾಲುಗಳಲ್ಲಿ ಧ್ವನಿಯನ್ನು ಸ್ಫೋಟಿಸುವ ಈ ಪ್ರಯೋಗ ಹೆಚ್ಚು ಹೆಚ್ಚು ಜನಪ್ರಿಯವೂ ಆಗುತ್ತಿದೆ. ಸಣ್ಣ ಝಲಕ್‌ನ್ನು ಇಟ್ಟುಕೊಂಡು ನಾಲ್ಕೇ ಸಾಲುಗಳಲ್ಲಿ ಕತೆಗಳನ್ನು ಹೇಳುವುದು. ಒಂದು ರೀತಿಯಲ್ಲಿ ಝೆನ್ ಮಾದರಿಯ ಅನುಕರಣೆ ಇದು. ಝೆನ್ ಕತೆಗಳು ಈಗಾಗಲೇ ಜನಪ್ರಿಯವಾಗಿವೆೆ. ಅದು ಬೇರೆ ಬೇರೆ ರೂಪಗಳಲ್ಲಿ ಭಾರತೀಕರಣಗೊಂಡಿದೆ. ಸಾದತ್ ಹಸನ್ ಮಾಂಟೋ ಅವರು, ಭಾರತದ ವಿಭಜನೆಯ ಕ್ರೌರ್ಯಗಳನ್ನು ಹೇಳಲು ಇಂತಹ ಕಿರು ಸಾಲುಗಳ ತಂತ್ರವನ್ನು ಬಳಸಿಕೊಂಡಿದ್ದರು. ಒಂದೆರಡು ವಾಕ್ಯಗಳಲ್ಲಿ ಅಂದಿನ ಕೌರ್ಯದ ದಿನಗಳನ್ನು ವಿಡಂಬನೆ ಮಾಡುತ್ತಿದ್ದರು. ಇತ್ತೀಚೆಗೆ ಈ ತಂತ್ರ ಬೇರೆ ಬೇರೆ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ‘ಬೆಳಕಿನ ಬೇಲಿ’ ಕೃತಿ ಇದೇ ತಂತ್ರದಿಂದ ರೂಪುಗೊಂಡವುಗಳು. ಶರತ್ ಎಚ್. ಕೆ. ಅವರು ಇಲ್ಲಿ ಸಣ್ಣ ಸಣ್ಣ ಹನಿಗಳ ಮೂಲಕ ಓದುಗರನ್ನು ಸೆಳೆಯುತ್ತಾರೆ.

ಹಾಗೆ ನೋಡಿದರೆ ಇದನ್ನು ಕತೆಗಳು ಎಂದು ಕರೆಯುವುದಕ್ಕಿಂತ ನ್ಯಾನೋ ಕವಿತೆಗಳು ಎಂದು ಕರೆಯುವುದು ಹೆಚ್ಚು ಸೂಕ್ತ. ಕೆಲವೊಮ್ಮೆ ಇಲ್ಲಿ ಘಟನೆಗಳು ಸಂಭವಿಸುವುದೇ ಇಲ್ಲ. ಬರೇ ಮಾತು, ರೂಪಕಗಳ ಮೂಲಕ ತಮ್ಮೆಳಗಿನ ಭಾವಗಳನ್ನು ಮಂಡಿಸುತ್ತಾರೆ. ಕಥನ ರೂಪಗಳಿಲ್ಲದ ಸಾಲುಗಳಾದರೂ, ಇಲ್ಲಿರುವ ಕಾವ್ಯದ ಲಯ ನಮ್ಮನ್ನು ಸೆಳೆಯುತ್ತದೆ.
‘ಸಿರಿವಂತಿಕೆ-ಎಲ್ಲ ಇರುವವನನ್ನು ಕಾಡುವ ಅನಾಥ ಪ್ರಜ್ಞೆಗೆ ಉಳ್ಳವನು ಇಟ್ಟ ಹೆಸರು’ ‘ಕಥೆ-ನಿಗಿ ನಿಗಿ ಸುಡುವ ಮಳೆ, ಬಿಡದೆ ಕಾಡುವ ಖುಷಿ, ಉಣ್ಣದೆ ತುಂಬುವ ಹೊಟ್ಟೆ, ಎಂದಿಗೂ ಅರ್ಥವಾಗದ ಕಥೆ ಹೇಳುತ್ತಿವೆ’ ‘ವಿಸರ್ಜನೆ-ಊರ ನಡುವಲ್ಲಿ ಬೆತ್ತಲಾದ ದೇಹ, ಮಾನ ಮರ್ಯಾದೆಗಳನ್ನು ತನ್ನೊಳಗಿಂದ ಹೊರ ನೂಕಿದೆ’ ‘ರಸಿಕತೆ- ಎಳೆ ಬಿಸಿಲು ಎಲೆಯ ಮೈ ಮುಚ್ಚಿದ ಇಬ್ಬನಿಯ ಸೆರಗು ಸರಿಸುತ್ತಿದೆ’ ಹೀಗೆ ಸಣ್ಣ ಸಣ್ಣ ಸಾಲುಗಳ ಮೂಲಕ ಅವರು ನಮ್ಮನ್ನು ಚಕಿತಗೊಳಿಸುತ್ತಾರೆ.
ಪ್ರಜೋದಯ ಪ್ರಕಾಶನ ಹಾಸನ ಇವರು ಪ್ರಕಟಿಸಿರುವ ಈ ಕೃತಿಯ ಒಟ್ಟು ಪುಟಗಳು 64. ಮುಖಬೆಲೆ 60 ರುಪಾಯಿ

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News