ಮೂಡಿಗೆರೆ: ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ

Update: 2018-01-16 14:14 GMT

ಮೂಡಿಗೆರೆ, ಜ.16: ಜಗತ್ತು ಆಧುನಿಕತೆ ಕಡೆಗೆ ಮುನ್ನುಗ್ಗುವ ಭರದಲ್ಲಿ ಹಿಂದಿನ ಕಾಲದ ಜಾನಪದ ಸಂಸ್ಕೃತಿಯನ್ನು ಮರೆಯಬಾರದು ಎಂದು ಪತ್ರಕರ್ತ ಕಿರುಗುಂದ ಅಬ್ಬಾಸ್ ಹೇಳಿದರು.

ಅವರು ಚಿನ್ನಿಗ-ಜನ್ನಾಪುರ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್‍ನಿಂದ ಮಂಗಳವಾರ ನಡೆದ ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಶೈಲಿ ಎಂಬುದು ಪ್ರತಿಯೊಬ್ಬರ ಮಾತು, ನೋಟ ಹಾಗೂ ಚಲನವಲನಗಳಲ್ಲಿ ಕಾಣಬಹುದು. ಹಿಂದಿನ ತಲೆಮಾರಿನ ಜೀವನಪದ್ಧತಿ ಬೇಸಾಯ, ಒಕ್ಕಲಾಟ, ಭತ್ತವನ್ನು ಕುಟ್ಟಿ ಅಕ್ಕಿಯಾಗಿಸಿ ರಾಗಿ ಬೀಸಿ, ಆ ಹಿಟ್ಟಿನಿಂದ ರೊಟ್ಟಿ ಸುಡುವುದು, ಮಣ್ಣಿನ ಮಡಿಕೆಯಲ್ಲಿ ಅಡಿಗೆ ಮಾಡುವ ಶೈಲಿ, ಕೆಸವಿನ ಸೊಪ್ಪು, ಏಡಿ, ಕಳಿಲೆ, ಹಳ್ಳದ ಮೀನು ಇತ್ಯಾದಿ ಜಾನಪದ ಶೈಲಿಯ ಸಾಂಬಾರು, ಜಾನಪದ ವಾಹನ ಎತ್ತಿನಗಾಡಿ, ಹಾಡು, ಕಥೆ, ಹಳ್ಳಿಯ ಜೀವನ ಶೈಲಿ, ಇವೆಲ್ಲವೂ ಜಾನಪದ ಕಲಾಪ್ರಕಾರಗಳನ್ನು ಜಗತ್ತಿಗೆ ಸಾರಿ ಸಾರಿ ಹೇಳುತ್ತಿದ್ದವು. ಇಂದು ಇವುಗಳೆಲ್ಲವೂ ಮರೆಯಾಗಿ ಮೊಬೈಲ್, ಕಂಪ್ಯೂಟರ್, ಟಿ.ವಿ. ದಾರಾವಾಹಿ, ಸಿನಿಮಾಗಳ ಕಡೆಗೆ ಜನಾಕರ್ಷಣೆ, ಪಾಶ್ಚಿಮಾತ್ಯ ಸಂಸ್ಕೃತಿಯ ಜೀವನಶೈಲಿ, ಇವುಗಳಿಂದ ಜಾನಪದ ಶೈಲಿಗಳು ವಿನಾಶದ ಅಂಚಿಗೆ ಹೋಗಿವೆ. ಇದನ್ನು ಮತ್ತೆ ಹೆಕ್ಕಿ ತರುವ ಕೆಲಸಗಳನ್ನು ಜಾನಪದ ಸಂಘ, ಸಂಸ್ಥೆಗಳು ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಮಾತನಾಡಿ, ಜನಪದ ಮತ್ತು ಜಾನಪದ ಇವೆರಡೂ ಪ್ರಕರಗಳಿಗೆ ಜೀವಕಳೆ ತುಂಬಲು ತಮ್ಮ ಪರಿಷತ್ ವರ್ಷದಲ್ಲಿ 50ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಜನರಿಗೆ ಜಾನಪದ ಶೈಲಿಯ ಪರಿಚಯ ಮಾಡುತ್ತಿದ್ದು, ತಮ್ಮ ಈ ಕಾರ್ಯಕ್ರಮದಿಂದ ಮುಂದಿನ ತಲೆಮಾರಿನ ಜನ ಸಂಪೂರ್ಣ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಹೋಗದಿರಲಿ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳದಿರಲಿ. ಗ್ರಾಮೀಣ ಸೊಗಡಿನ ಜಾನಪದ ಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು  ಅವಿರತವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಸುನಿತಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಹಾಡು ಹಾಗೂ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬಕ್ಕಿ ಮಂಜುನಾಥ್ ತಂಡದ ಹಾಡುಗಳು ನೆರೆದಿದ್ದವರನ್ನು ರಂಜಿಸಿದವು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಂ.ಎಸ್.ನಾಗರಾಜ್, ಬಕ್ಕಿ ರವೀಂದ್ರ, ಅಶ್ವಿನಿ, ಶಿಕ್ಷಕರಾದ ಲೋಕೇಶ್, ಸುಜಾತ, ಪ್ರಮೀಳಾ, ಬಿ.ಬಿ.ರಾಮು, ಶ್ವೇತಾ, ತ್ರಿವೇಣಿ, ಧ್ರುವರಾಜ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News