ಮಹಾದಾಯಿ ಹೆಸರಲ್ಲಿ ರಾಜಕೀಯ

Update: 2018-01-16 18:09 GMT

ಮಹಾದಾಯಿ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ನೇರ ಪರಿಣಾಮ

ಗದಗ, ಜ.16: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಹಾದಾಯಿ ವಿವಾದವನ್ನು ರಾಜಕೀಯ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಆದರೆ ಮಹಾದಾಯಿ ಹೋರಾಟಗಾರರೇ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಉತ್ತರ ಕರ್ನಾಟಕದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹೌದು. ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗುತ್ತಿದೆಯೇ ಮಹಾದಾಯಿ ಹೋರಾಟ? ಮಹಾದಾಯಿ ಹೋರಾಟ ಗಾರರಿಂದ ಹೊಸ ಪಕ್ಷ ಸ್ಥಾಪನೆ ವಿವಾದ ಇತ್ಯರ್ಥಕ್ಕೆ ನೆರವಾಗುತ್ತಾ? ರಾಜಕೀಯ ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನರಗುಂದ ಮಹಾದಾಯಿ ಹೋರಾಟಗಾರರು.

ಹತ್ತು ಹಲವು ಅನುಮಾನ, ಆತಂಕ ಗದಗ ಜಿಲ್ಲೆಯ ರೈತರನ್ನು ಕಾಡುತ್ತಿದೆ. ಮಹಾದಾಯಿ ಹಾಗೂ ಕಳಸಾ-ಬಂಡೂರಿಗಾಗಿ 1000ನೇ ದಿನದತ್ತ ಹೋರಾಟ ಮುನ್ನುಗ್ಗುತ್ತಿದೆ. ನೀರಿಗಾಗಿ ನಡೆದ ದಾಖಲೆ ಹೋರಾಟ ಕೂಡ ಇದಾಗಿದೆ. ಆದರೆ ಸೋಮವಾರ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಹೊಸ ಪಕ್ಷವೊಂದು ಜನ್ಮ ತಾಳಿದೆ.

‘ಜನಸಾಮಾನ್ಯರ ಪಕ್ಷ’ದ ಮೂಲಕ ಮಹಾದಾಯಿ ಹೋರಾಟಗಾರರು ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ಸುಮಾರು ನಾಲ್ಕು ದಶಕದ ಈ ಸಮಸ್ಯೆ ಪರಿಹಾರ ಕಾಣದ ರಾಜಕೀಯ ಇಚ್ಛಾಶಕ್ತಿ ಕೊರತೆಗೆ ನೆಲಕಚ್ಚಿದೆ ಎನ್ನುವುದು ಬಹುತೇಕರ ಅಂಬೋಣ.

ಇತ್ತೀಚೆಗೆ ಬೆಂಗಳೂರಿಲ್ಲಿ ಕೆಲ ಮಹಾದಾಯಿ ಹೋರಾಟಗಾರರು ಸಭೆ ಸೇರಿ ಹೊಸ ರಾಜಕೀಯ ಪಕ್ಷ ಸ್ಥಾಪನೆಯ ತೀರ್ಮಾನ ಕೈಗೊಂಡಿದ್ದರು. ಹೀಗಾಗಿ ಜ.15ರಂದು ಕೂಡಲ ಸಂಗಮದಲ್ಲಿ ಅಧಿಕೃತವಾಗಿ ಜನಸಾಮಾನ್ಯರ ಪಕ್ಷವನ್ನು ಸ್ಥಾಪಿಸಲಾಯಿತು. ರಾಜಕೀಯಕ್ಕಾಗಿ ಮಹಾದಾಯಿ ಹೋರಾಟ ಆರಂಭಿಸಲಾಗಿದೆ ಎನ್ನುವ ಮಾತುಗಳು ಒಂದು ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಚುನಾವಣೆ ಸಮೀಪಿ ಸುತ್ತಿದ್ದಂತೆ ಪಕ್ಷ ಸ್ಥಾಪನೆಯಾಗಿದ್ದು ಕುತೂಹಲಕರ. ಇನ್ನು ಜನಸಾಮಾನ್ಯರ ಪಕ್ಷಕ್ಕೆ ರೈತ ಸಂಘದ ಕೆಲ ಮುಖಂಡರು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಮಹಾದಾಯಿ ಹೋರಾಟಕ್ಕೂ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ’

ನರಗುಂದ ಪಟ್ಟಣದಲ್ಲಿ ಮಹಾದಾಯಿ ಹೋರಾಟ ನಿರಂತರ ಮುಂದುವರಿದಿದೆ. ಆದರೆ ಮಹಾದಾಯಿ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಮಾತ್ರ ರಾಜಕೀಯ ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಮಹಾದಾಯಿ ಹೋರಾಟಗಾರರಿಂದ ಪಕ್ಷ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಸ್ಥಾಪನೆಗೆ ನರಗುಂದ ಮಹಾದಾಯಿ ಹೋರಾಟದ ಹೆಸರು ಬಳಕೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಪಕ್ಷಕ್ಕೂ ಮಹಾದಾಯಿ, ಕಳಸಾ-ಬಂಡೂರಿ ಹೋರಾಟ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಮಹಾದಾಯಿ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.

‘ಒಂದು ದಿನವೂ ಹೋರಾಟದಲ್ಲಿ ಭಾಗಿಯಾಗದವರು ಮಹಾದಾಯಿ ಹೋರಾಟಗಾರರು ಆಗಲು ಹೇಗೆ ಸಾಧ್ಯ. ಡಾ.ಅಯ್ಯಪ್ಪ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಹೋರಾಟದ ವೇಳೆಗೆ ಬಂದಿದ್ದರು ಅಷ್ಟೇ. ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಭೇಟಿಯಾದಾಗ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಆದರೆ ನಮಗೆ ಪಕ್ಷ ಬೇಡ ನೀರು ಬೇಕು ಎಂದಿದ್ದೇನೆ. ಇದು ರೈತರನ್ನು ದಾರಿ ತಪ್ಪಿಸುವ ಕೆಲಸ. ನಾವು ಪಕ್ಷ ಸ್ಥಾಪನೆಯ ಪರವೂ ಇಲ್ಲ, ವಿರೋಧವು ಇಲ್ಲ’ ಎಂದು ನರಗುಂದ ಮಹಾದಾಯಿ ಹೋರಾಟಗಾರರೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಒಂದೆಡೆ ಹೋರಾಟ ಮುಂದುವರಿದರೆ ಚುನಾವಣೆ ವೇಳೆ ತಮಗೆ ಬಿಸಿ ತಟ್ಟುತ್ತದೆ ಎನ್ನುವ ಆತಂಕ ಎಲ್ಲ ಪಕ್ಷದವರಲ್ಲಿ ಮನೆಮಾಡಿದೆ. ಹೀಗಾಗಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೇ ಇದೇ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಮಧ್ಯೆ ಹೊಸ ರಾಜಕೀಯ ಪಕ್ಷ ಮತ್ತೊಂದು ಹೊಸ ಸಂಚಲನಕ್ಕೂ ಕಾರಣವಾಗುವ ಲಕ್ಷಣ ಗೋಚರಿಸುತ್ತಿದೆ.

ಸದ್ಯ ಹೋರಾಟದ ದಿಕ್ಕು ತಪ್ಪಿಸಲು ಹವಣಿಸುತ್ತಿರುವ ಕೆಲರಾಜಕೀಯ ಪಕ್ಷದ ಮುಖಂಡರ ಕುತಂತ್ರ ಸಲೀಸಾಗಿ ಕೈಗೂಡುತ್ತದೆ ಎನ್ನುವುದು ಬಹುತೇಕರ ಲೆಕ್ಕಾಚಾರ. ಹೀಗಾಗಿ ಹೋರಾಟವನ್ನು ದಿಕ್ಕು ತಪ್ಪಿಸದೇ ರಾಜಕೀಯ ಇಚ್ಛಾಶಕ್ತಿ ಮರೆತು ತಾರ್ಕಿಕ ಅಂತ್ಯದವರೆಗೂ ಹೋರಾಟ ಮುಂದುವರಿಸಬೇಕು ಎನ್ನುವುದು ಈ ಭಾಗದ ಜನರ ಮನದಾಳ.

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News