ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನಾ ರ್ಯಾಲಿ

Update: 2018-01-17 13:39 GMT

ಶಿವಮೊಗ್ಗ, ಜ. 17:  ಕನಿಷ್ಟ ವೇತನ ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು. ನಂತರ ಜಿಲ್ಲಾಡಳಿತದ ಮೂಲಕ ಕೇಂದ್ರ - ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಅರ್ಪಿಸಿತು. 

ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ತಿಂಗಳಿಗೆ 18 ಸಾವಿರ ರೂ.ಗೆ ಕಡಿಮೆ ಇಲ್ಲದಂತೆ ವೇತನ ನೀಡಬೇಕು. ಮಾಸಿಕ 3 ಸಾವಿರ ರೂ.ಪೆನ್ಸನ್ ಜೊತೆಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು. 45 ನೇ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‍ಸಿ) ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಕನಿಷ್ಠ ವೇತನದ ಸರಿಸಮ ವೇತನ ನೀಡಲು ಐಸಿಡಿಎಸ್, ಎನ್‍ಹೆಚ್‍ಎಂ, ಎಂಡಿಎಂ, ಎಸ್‍ಎಸ್‍ಎ ಮತ್ತಿತರ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಗುಣಮಟ್ಟ, ಸಮರ್ಪಕ ಅನುಷ್ಟಾನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಬೇಕಾಗುವ ಖರ್ಚು ವೆಚ್ಚಗಳನ್ನು ಸರಿದೂಗಿಸುವಷ್ಟು ಹಣವನ್ನು ಮುಂದಿನ ಬಜೆಟ್‍ನಲ್ಲಿ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

ಯೋಜನೆಯನ್ನು ನಗದು ಹಣ ವರ್ಗಾವಣೆಯಂತಹ ಯಾವುದೇ ರೀತಿಯಲ್ಲಿ ಮಾರ್ಪಡಿಸುವುದು, ಬದಲಾಯಿಸುವುದು ಮತ್ತು ಖಾಸಗಿಯವರಿಗೆ ವಹಿಸಬಾರದು. ದೇಶದ ವಿವಿಧ ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು. ನಿವೃತ್ತಿ ಜೀವನಕ್ಕೆ ಬೇಕಾಗುವ ನಿವೃತ್ತಿ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ರಾಜೇಶ್ವರಿ,ಪ್ರೇಮಾ ಅರಳಸುರಳಿ ಸೇರಿದಂತೆ ಮೊದಲಾದವರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News