ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

Update: 2018-01-17 17:08 GMT

ಮಡಿಕೇರಿ, ಜ.17 : ದೇಶದ ಸಂಘಟಿತ, ಅಸಘಂಟಿತ ಮತ್ತು ಸ್ಕೀಮ್ ವರ್ಕರ್ಸ್‍ಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ಕಾರ್ಮಿಕರ ಸಂಘ ಇವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಪೆಮ್ಮಂಡ ಸುಮನ್ ಉಮೇಶ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ ಸುಮಾರು 1 ಕೋಟಿ ಸ್ಕೀಮ್ ವರ್ಕರ್ಸ್ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಎನ್.ಹೆಚ್.ಎಂ. ನಲ್ಲಿ ಸೇವೆ ಸಲ್ಲಿಸುತ್ತಿರುವ 10 ಲಕ್ಷ ಆಶಾ ಕಾರ್ಯಕರ್ತೆಯರು ಮತ್ತು ಐ.ಸಿ.ಡಿ.ಎಸ್ ಯೋಜನೆಯಲ್ಲಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ಯೋಜನೆಗಳು ದೇಶದ ಜನರಿಗೆ ಆರೋಗ್ಯ, ಪೌಷ್ಠಿಕಾಂಶ, ಶಿಕ್ಷಣ ಮತ್ತಿತರ ಸೌಕರ್ಯಗಳನ್ನು ನೀಡುವ ಮಹತ್ವದ ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಸರಕಾರ ಮಾಸಿಕ ವೇತನ ಮತ್ತು ಭದ್ರತೆಯ ಸೌಕರ್ಯವನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ಗೌರವಧನ ಅಥವಾ ಪ್ರೋತ್ಸಾಹ ಧನದ ಹೆಸರಿನಲ್ಲಿ ಸರಕಾರವೇ ಇವರನ್ನು ಶೋಷಣೆ ಮಾಡುತ್ತಿದೆ ಎಂದು ಸುಮನ್ ಆರೋಪಿಸಿದರು. 

ಬೇಡಿಕೆಗಳು 
ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ವರ್ಕರ್ಸ್ ಅಥವಾ ಕಾರ್ಮಿಕರೆಂದು ಪರಿಗಣಿಸಬೇಕು, ತಿಂಗಳಿಗೆ ರೂ.18 ಸಾವಿರಕ್ಕೆ ಕಡಿಮೆ ಇರದಂತೆ ವೇತನ ನೀಡಬೇಕು ಮತ್ತು ಮಾಸಿಕ ರೂ.3 ಸಾವಿರ ಪಿಂಚಣಿ ಜೊತೆಗೆ ಸಾಮಾಜಿಕ ಭದ್ರತೆ ನೀಡಬೇಕು. 45ನೇ ಭಾರತ ಕಾರ್ಮಿಕ ಸಮ್ಮೇಳನ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಕನಿಷ್ಟ ವೇತನದ ಸರಿಸಮ ವೇತನ ನೀಡಲು ಮತ್ತು ಐಸಿಡಿಎಸ್, ಎನ್,ಹೆಚ್.ಎಂ, ಎಂ.ಡಿ.ಎಂ, ಎಸ್.ಎಸ್.ಎ ಮತ್ತಿತರ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಗುಣಮಟ್ಟ ಮತ್ತು ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಯೋಜನೆಯನ್ನು ಸಾರ್ವತ್ರಿಕರಿಸಲು ಬೇಕಾದ ಖರ್ಚು ವೆಚ್ಚಗಳನ್ನು ಸರಿದೂಗಿಸುವಷ್ಟು ಹಣವನ್ನು ಮುಂಬರುವ 2018-19ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಒದಗಿಸಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್‍ನ ಯೂನಿಯನ್ ಸೆಂಟರ್‍ನ ಜಿಲ್ಲಾ ಸಂಘಟನಾಧಿಕಾರಿ ಮುದ್ದುಕೃಷ್ಣ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷರಾದ ಪೂರ್ಣಿಮಾ, ಕಾರ್ಯದರ್ಶಿ ಲೀಲಾವತಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಜೋತಿ, ವಿರಾಜಪೇಟೆ ತಾಲೂಕು ಕಾರ್ಯದರ್ಶಿಯಾದ ರೇವತಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News