ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನ: ಬಿಎಸ್‌ಎಫ್ ವರಿಷ್ಠ

Update: 2018-01-18 15:11 GMT

ಹೊಸದಿಲ್ಲಿ, ಜ. 18: ಭಾರತ-ಪಾಕ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಗುರುವಾರ ಹೇಳಿರುವ ಗಡಿ ಭದ್ರತಾ ಪಡೆಯ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮಾ, ಪೂರ್ಣ ಬಲದೊಂದಿಗೆ ಪ್ರತಿದಾಳಿ ನಡೆಸುವಂತೆ ಹಾಗೂ ಶತ್ರುಗಳಿಗೆ ಒಂದು ಪಾಠ ಕಲಿಸುವಂತೆ ಪಡೆಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಈಗ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿಂದೆ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಆದರೆ, ಈಗ ಪಾಕ್ ಸೇನೆ ಅಂತಾರಾಷ್ಟ್ರೀಯ ಗಡಿ ರೇಖೆಗುಂಟ ಕೂಡ ಗುಂಡಿನ ದಾಳಿ ಆರಂಭಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ಬುಧವಾರ ರಾತ್ರಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಗಡಿ ಭದ್ರತಾ ಪಡೆಯ ಹೆಡ್ ಕಾನ್ಸ್‌ಟೆಬಲ್ ಎ. ಸುರೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸುರೇಶ್ ಅವರ ಸಾವು ದುರದೃಷ್ಟಕರ ಎಂದು ಹೇಳಿರುವ ಶರ್ಮಾ, ಬಂಕರ್‌ನಲ್ಲಿರುವ ಸಣ್ಣ ಎಡೆಯಲ್ಲಿ ಹಾದು ಹೋಗುತ್ತಿರುವಾಗ ಸುರೇಶ್ ಅವರು ಗುಂಡಿನ ದಾಳಿಗೆ ಬಲಿಯಾದರು ಎಂದರು.

ಸೇನಾ ಪಡೆ ಯೋಧರು ಗುಂಡಿನ ದಾಳಿಗೆ ಗಾಯಗೊಳ್ಳುವುದನ್ನು ತಪ್ಪಿಸಲು ಗುಂಡು ನಿರೋಧಕ ಹೆಲ್ಮೆಟ್ ಹಾಗೂ ಜಾಕೆಟ್ ಧರಿಸುವ ಅವಕಾಶ ಇದೆ. ಆದರೆ, ದೇಹದ ಎಲ್ಲ ಭಾಗಗಳನ್ನು ಮುಚ್ಚಲು ಸಾಧ್ಯವಾಗುವುದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ. ಭಾರತೀಯ ಭಾಗದತ್ತ ಪಾಕಿಸ್ತಾನದ ರೇಂಜರ್‌ಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸುವುದು ಇದು ಮೊದಲಲ್ಲ ಎಂದು ಹೇಳಿರುವ ಅವರು, ಜನವರಿ 3ರಂದು ಪಾಕಿಸ್ತಾನ ಸೇನೆ ಹಾರಿಸಿದ ಗುಂಡಿಗೆ ಗಡಿ ಭದ್ರತಾ ಪಡೆಯ ಯೋಧನೋರ್ವ ಮೃತಪಟ್ಟಿದ್ದ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News