ಕತ್ತಲಲ್ಲಿ ಮುಳುಗಿದೆ ಪ್ರಧಾನಿ ದತ್ತು ಪಡೆದ ಗ್ರಾಮ !

Update: 2018-01-19 10:01 GMT

ವಾರಣಾಸಿ, ಜ.19: ವಾರಣಾಸಿ ಜಿಲ್ಲೆಯ ಜಯಪುರ ಗ್ರಾಮವು ಪ್ರಧಾನಿ ನರೇಂದ್ರ ಮೋದಿ ದತ್ತು ಪಡೆದಿರುವ ಗ್ರಾಮವಾಗಿದೆ. ನವೆಂಬರ್ 2014ರಲ್ಲಿ ಪ್ರಧಾನಿ ಈ ಗ್ರಾಮವನ್ನು ದತ್ತು ಪಡೆದಿದ್ದರೆ, 2015ರ ಮಧ್ಯಭಾಗದಲ್ಲಿ ಇಲ್ಲಿ 135 ಸೌರ ಬೀದಿದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಕಳೆದ ವರ್ಷವೊಂದರಿಂದ ಇಲ್ಲಿನ ಕನಿಷ್ಠ 80 ಬೀದಿ ದೀಪಗಳು ಉರಿಯುತ್ತಿಲ್ಲ. ಕಾರಣ- ಅವುಗಳ ಬ್ಯಾಟರಿಗಳನ್ನು ಕದಿಯಲಾಗಿದೆ.

ಕಳೆದ ವರ್ಷ 50 ಬೀದಿದೀಪಗಳ ಬ್ಯಾಟರಿ ಕಳವಾದಾಗ ಗ್ರಾಮದ ಮುಖ್ಯಸ್ಥ ಶ್ರೀನಾರಾಯಣ ಪಟೇಲ್ ಪೊಲೀಸ್ ದೂರು ನೀಡಿದ್ದರು. ಆದರೆ ಪೊಲೀಸರು ಕಳ್ಳರನ್ನು ಶೋಧಿಸುವ ಮೊದಲೇ ಇನ್ನೂ 30 ಬೀದಿದೀಪಗಳ ಬ್ಯಾಟರಿಗಳು ಕಳವಾದವು. ಇಲ್ಲಿಯವರೆಗೆ ಕಳುವಾದ ಬ್ಯಾಟರಿಗಳನ್ನು ಯಾ ಕಳ್ಳರನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಪಟೇಲ್ ಹೇಳುತ್ತಾರೆ.

ಹಲವಾರು ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೂ ಖಾಸಗಿ ಕಂಪೆನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಂಗವಾಗಿ ಈ ಬೀದಿ ದೀಪಗಳನ್ನು ಅಳವಡಿಸಿದ್ದವು. ಆದರೆ ಬ್ಯಾಟರಿ ಕಳವಾದ ನಂತರ ಹೊಸ ಬ್ಯಾಟರಿಗಳನ್ನು ಅಳವಡಿಸುವ ಗೋಜಿಗೆ ಯಾರೂ ಹೋಗಿಲ್ಲ.

ಗ್ರಾಮದಲ್ಲಿ ರಾತ್ರಿ ಗಸ್ತು ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಶ್ವಜೀತ್ ಮಹಾಪಾತ್ರ ಕೆಲ ದಿನಗಳ ಹಿಂದೆ ಆಗಮಿಸಿದಾಗ ಗ್ರಾಮದ ಮುಖ್ಯಸ್ಥ ಬೀದಿದೀಪ ಸಮಸ್ಯೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರು.

ಪ್ರದೇಶದಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಹಾಗೂ ಬೀದಿ ದೀಪಗಳ ಬ್ಯಾಟರಿ ಕಳವುಗೈದವರನ್ನು ಪತ್ತೆ ಹಚ್ಚಲು ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News