ಜ.20 ರಂದು ತುಮಕೂರು ವಿವಿ 11ನೇ ಘಟಿಕೋತ್ಸವ

Update: 2018-01-19 10:52 GMT

ತುಮಕೂರು, ಜ.19: ತುಮಕೂರು ವಿಶ್ವವಿದ್ಯಾಲಯದ 11ನೇ ವಾರ್ಷಿಕ ಘಟಿಕೋತ್ಸವ ಜನವರಿ 20ರ ಶನಿವಾರ ಬೆಳಗ್ಗೆ 11 ಗಂಟೆಗೆ ವಿವಿ ಆವರಣದ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಬಾರ ಕುಲಪತಿ ಪ್ರೊ.ಜಯಶೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ತುಮಕೂರು ವಿವಿ ಕುಲಾಧಿಪತಿಗಳು, ರಾಜ್ಯಪಾಲರಾದ ವಜುಭಾಯಿ ರುಢಾಬಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು,ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಪಸ್ಥಿತರಿರುವರು.ಘಟಿಕೋತ್ಸವ ಭಾಷಣವನ್ನು ಇಸ್ರೋ ಮಾಜಿ ಮುಖ್ಯಸ್ಥ ಡಾ.ಎ.ಎಸ್.ಕಿರಣ್‍ಕುಮಾರ್ ಮಾಡಲಿದ್ದಾರೆ.

ಈ ಬಾರಿಯ ಘಟಿಕೋತ್ಸವದಲ್ಲಿ 14 ಜನರಿಗೆ ಪಿ.ಹೆಚ್.ಡಿ.,1552 ಜನರಿಗೆ ಸ್ನಾತಕೋತ್ತರ ಪದವಿ,5798 ಜನರಿಗೆ ಸ್ನಾತಕ ಪದವಿ ಪಡೆಯಲಿದ್ದಾರೆ.65 ವಿದ್ಯಾರ್ಥಿಗಳು 85 ಚಿನ್ನದ ಪದಕ ಪಡೆಯಲಿದ್ದು,ಶೋಭಾ ಎಂ.ಎಸ್ಸಿ ಗಣಿತದಲ್ಲಿ 5 ಗೋಲ್ಡ್ ಮೆಡಲ್,ಆಶ್ವಿನಿ, ಕಾವ್ಯ, ಲಾವಣ್ಯ,ಆಶ್ರಿತ ತಲಾ ಮೂರು ಗೋಲ್ಡ್ ಮೆಡಲ್ ಪಡೆದಿದ್ದಾರೆ. ಒಂದು ನಗದು ಬಹುಮಾನವನ್ನು ವಿವಿ ಘೋಷಿಸಿದೆ ಎಂದು ತಿಳಿಸಿದರು.

ಇಬ್ಬರಿಗೆ ಗೌರವ ಡಾಕ್ಟರೇಟ್: ಡಾ.ಹಿ.ಚಿ.ಬೋರಲಿಂಗಯ್ಯ ಅವರ ಆಯ್ಕೆ ಸಮಿತಿ ಮಾಡಿದ ಶಿಫಾರಸ್ಸಿನ ಅನ್ವಯ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಮತ್ತು ಅರೆವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಟಿ.ದಿಲೀಫ್ ಅವರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಅಂಕಿತ ಹಾಕಿದ್ದು, ಇಂದಷ್ಟೇ ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಗಣ್ಯರ ಸಂಪರ್ಕ ಮಾಡಿ,ಅವರ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಸಂಜೆ ವೇಳೆ ಶುಭ ಸೂಚನೆ ದೊರೆಯುವ ನಿರೀಕ್ಷೆಯಿದೆ ಎಂದರು.

ಸರಾಸರಿ ಶೇ35.24 ರಷ್ಟು ಫಲಿತಾಂಶ: ಪ್ರಸಕ್ತ ಸಾಲಿನಲ್ಲಿ ವಿವಿಯ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಈ ಹಿಂದಿನ ವರ್ಷಗಳಿಗಿಂತಲೂ ಕುಸಿದಿದ್ದು, ಶೇ35.24ರಷ್ಟು ವಿದ್ಯಾರ್ಥಿಗಳು ಮಾತ್ರ ಪದವಿಯಲ್ಲಿ ತೆರ್ಗಡೆ ಹೊಂದಿದ್ದು,88 ಅಪಿಲೇಟೆಡ್ ಕಾಲೇಜುಗಳಲ್ಲಿ ಕೆಲ ಕಾಲೇಜುಗಳು ಶೇ10ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ.ಈ ಕಾಲೇಜುಗಳ ಫಲಿತಾಂಶ ಹೆಚ್ಚಳಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಕುಲಪತಿಗಳಾದ ಪ್ರೊ.ಜಯಶೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಬಿ.ಎಸ್.ಗುಂಜಾಳ್,ಪರೀಕ್ಷಾಂಗ ಕುಲಸಚಿವ ಡಾ.ಪರಮಶಿವಮೂರ್ತಿ, ಹಣಕಾಸು ಅಧಿಕಾರಿ ಡಾ.ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News