ಹನೂರು: ವಿವಿಧ ಸಮುದಾಯಗಳ ಮುಖಂಡರ ಸಭೆ

Update: 2018-01-19 17:08 GMT

ಹನೂರು,ಜ.19: ಪಟ್ಟಣದಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಸಮುದಾಯ ಭವನವನ್ನು ಇತರೆ ಗ್ರಾಮಗಳ ಸಮುದಾಯ ಭವನದ ರೀತಿ ಉದ್ಘಾಟನೆಗೊಳಿಸದೆ ಸಾಮೂಹಿಕ ವಿವಾಹ ನಡೆಸುವ ಮೂಲಕ ಉದ್ಘಾಟನೆಗೊಳಿಸಬೇಕು ಎಂದು ಶಾಸಕ ನರೇಂದ್ರ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಶಾಸಕ ನರೇಂದ್ರ, ಹನೂರು ಪಟ್ಟಣವು ನೂತವಾಗಿ ತಾಲೂಕು ಕೇಂದ್ರವಾಗಿದೆ. ಆದುದರಿಂದ ಅಂಬೇಡ್ಕರ್ ಸಮುದಾಯ ಭವನವನ್ನು ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಫೆ.18ಕ್ಕೆ ದಿನಾಂಕ ನಿಗದಿಪಡಿಸಿ ಎಲ್ಲಾ ಸಮುದಾಯದವರಿಗೂ ಮಾಹಿತಿ ನೀಡಿ ಸಾಮೂಹಿಕ ವಿವಾಹವನ್ನು ನೆರವೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಮುಖಂಡರಿಗೆ ಸೂಚಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ಕಡ್ಡಾಯವಾಗಿ ಆಗಿರಲೇಬೇಕು. ಈ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ವಿವಾಹ ನೋಂದಣಿ ಮಾಡಿಕೊಳ್ಳಬೇಕು. ಒಂದೊಮ್ಮೆ ಶಾಲೆಗಳಿಗೆ ತೆರಳದೆ ಇರುವ ಕಾಡಂಚಿನ ಸೋಲಿಗ ವಾಸಿಗಳು ಮದುವೆ ಮಾಡಿಕೊಳ್ಳಲು ಮುಂದಾದಲ್ಲಿ ಅವರ ಬಳಿ ಯಾವುದೇ ದಾಖಲೆಗಳು ಇಲ್ಲದಿದ್ದರೆ ತಾಲೂಕು ವೈದ್ಯಾಧಿಕಾರಿಗಳಿಂದ ವಯಸ್ಸು ದೃಢೀಕರಣ ಪತ್ರ ಪಡೆದು ನೋಂದಾಯಿಸಿಕೊಳ್ಳುವಂತೆ ಸೂಚಿಸಿದರು.

ಶಾಸಕ- ಸಂಸದರಿಂದ ಬಟ್ಟೆ, ಮಾಂಗಲ್ಯ: ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧುಗೆ ಸೀರೆ ಮತ್ತು ಕುಪ್ಪಸ, ವರನಿಗೆ ಪಂಚೆ-ಶರ್ಟು ಮತ್ತು ಮಾಂಗಲ್ಯ ಹಾಗೂ ಕಾಲುಂಗುರವನ್ನು ಶಾಸಕ ನರೇಂದ್ರ ಮತ್ತು ಸಂಸದ ಧ್ರುವನಾರಾಯಣ್ ಭರಿಸುತ್ತಾರೆ. ಅಲ್ಲದೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ತಮ್ಮ ಸಂಬಂಧಿಗಳನ್ನು ಯಾವುದೇ ಮಿತಿಯಿಲ್ಲದೆ ಕರೆತರಬಹುದು ಎಂದು ತಿಳಿಸಿದರು.

ಶಾಸಕರಿಗೆ ಸನ್ಮಾನ: ಇದೇ ವೇಳೆ ಹನೂರು ಕ್ಷೇತ್ರ ವ್ಯಾಪ್ತಿಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿಸಿಕೊಟ್ಟ ಹಿನ್ನೆಲೆ ಕ್ಷೇತ್ರ ವ್ಯಾಪ್ತಿಯ ಪ್ರಗತಿಪರ ರೈತರಾದ ವೆಂಕಟರಮಣನಾಯ್ಡು, ರಾಮಚಂದ್ರು, ರಮೇಶ್‍ನಾಯ್ಡು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೆಂಪಯ್ಯ, ಈಶ್ವರ್, ತಾ.ಪಂ ಸದಸ್ಯ ಜವಾದ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್, ಪ.ಪಂ ಸದಸ್ಯರುಗಳಾದ ಬಾಲರಾಜ್‍ನಾಯ್ಡು, ರಮೇಶ್‍ನಾಯ್ಡು, ವೆಂಕಟೇಶ್, ಮುಖಂಡರುಗಳಾದ ಮಾದೇಶ್, ವೆಂಕಟರಮಣನಾಯ್ಡು, ಬಂಡಳ್ಳಿ ನಿಂಗರಾಜು, ಪ್ರಸನ್ನಕುಮಾರ್, ಸುದೇಶ್, ಮಂಗಲ ಪುಟ್ಟರಾಜು, ರಾಮಲಿಂಗಂ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News