ಜಗತ್ತಿನ ವಿವಿಧ ವೈದ್ಯ ಪದ್ಧತಿಗಳು

Update: 2018-01-20 12:05 GMT

ಗ್ರೀಕ್ ತತ್ವಜ್ಞಾನಿ ಹಿಪೋಕ್ರೆಟಿಸ್‌ನ ಬರವಣಿಗೆಗಳಲ್ಲೂ ಸಹ ಭಾರತೀಯ ಔಷಧ ಜ್ಞಾನಕ್ಕೆ ಸಂಬಂಧಪಟ್ಟಂತಹ ಹಲವು ಪ್ರಸ್ತಾಪಗಳು ಹಾಗೂ ಔಷಧಗಳ ಹೆಸರನ್ನು ದಾಖಲಿಸಿದ್ದಾನೆ ಎನ್ನಲಾಗಿದೆ. ಜಗತ್ಪ್ರಸಿದ್ಧ ಸೇನಾನಿ ಅಲೆಗ್ಸಾಂಡರ್ ಚಕ್ರವರ್ತಿಯ ಆಸ್ಥಾನದಲ್ಲೂ ಕೆಲವು ಭಾರತೀಯ ವೈದ್ಯರನ್ನು ನೇಮಿಸಿಕೊಳ್ಳಲಾಗಿತ್ತು. ಹಾಗೆಯೇ ಅರಬ್ ದೇಶಗಳಲ್ಲೂ ಸಹ ಭಾರತೀಯ ವೈದ್ಯ ಪರಂಪರೆಯ ಪ್ರಭಾವವು ಇತ್ತೆಂದು ಹೇಳುತ್ತಾರೆ. ಕ್ರಿ.ಶ. 8ನೆ ಶತಮಾನದಲ್ಲಿ ಬಾಗ್ದಾದಿನ ಹಾರೂನ್-ಅಲ್-ರಶೀದ್ ಎಂಬ ಮುಖ್ಯಸ್ಥನು ತಮ್ಮಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಪಾಠ ಹೇಳುವ ಸಲುವಾಗಿ ಇಬ್ಬರು ಭಾರತೀಯ ವೈದ್ಯತಜ್ಞರಾದ ಮಾನಕ ಮತ್ತು ಸಲಹ ಎಂಬವರನ್ನು ಬರಮಾಡಿಕೊಂಡಿದ್ದನು ಎಂದು ಹೇಳಲಾಗುತ್ತದೆ.

ವೈದ್ಯಕೀಯ ಕ್ಷೇತ್ರವು ಇಂದು ಆಧುನಿಕ ತಂತ್ರಜ್ಞಾನದ ನೆರವಿನಿಂದ ಮುನ್ನಡೆದಿದೆ. ಮನುಷ್ಯ ಸಮಾಜಕ್ಕೆ ಆರೋಗ್ಯ ಸಂಬಂಧಿತ ಹೊಸ ಸಮಸ್ಯೆಗಳು ಎದುರಾದಾಗ ಅದಕ್ಕೆಲ್ಲಾ ಹೊಸ ಪರಿಹಾರಗಳನ್ನು ಶೋಧಿಸಲಾಗುತ್ತಿದೆ. ನಾಗರಿಕತೆಯ ವಿಕಾಸದ ಹಾದಿಯಲ್ಲಿ ಜಗತ್ತಿನ ಅನೇಕ ಸಮುದಾಯಗಳು ತಮ್ಮದೇ ಆದ ವೈದ್ಯಕೀಯ ಚಿಕಿತ್ಸಾ ಪದ್ಧತಿ ಹಾಗೂ ಜ್ಞಾನ ಹೊಂದಿದ್ದವು. ಅವುಗಳ ಬಗ್ಗೆ ತಿಳಿಯುವುದು ಬಹಳ ಆಸಕ್ತಿದಾಯಕವಾಗಿದೆ.

►ಭಾರತೀಯ ವೈದ್ಯ ಪದ್ಧತಿ

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಆಯುರ್ವೇದ ಎಂಬ ವೈದ್ಯಶಾಸ್ತವು ಜನಪ್ರಿಯವಾಗಿದೆ. ಆಯುರ್ವೇದದ ಪಂಡಿತರು ತಮ್ಮ ಕುಶಲತೆಯನ್ನು ಸಾರ್ವಜನಿಕರಿಗೆ ತಿಳಿಸದೆ ತಮ್ಮಲ್ಲೇ ಮುಚ್ಚಿಟ್ಟುಕೊಳ್ಳುತ್ತಿದ್ದುದರಿಂದ ಅದು ತಂದೆಯಿಂದ ಮಕ್ಕಳಿಗೆ ಹಾಗೂ ಗುರುವಿನಿಂದ ಶಿಷ್ಯರಿಗೆ ಮಾತ್ರ ಮುಂದುವರಿಯುವ ಪರಂಪರೆ ಹೊಂದಿತ್ತು. ಅಂಗರಚನೆ, ದೇಹಶಾಸ್ತ್ರ, ಔಷಧಶಾಸ್ತ್ರ, ಶಸ್ತ್ರವೈದ್ಯ ಮುಂತಾದ ವಿಚಾರಗಳಲ್ಲಿ ಭಾರತೀಯ ಪುರಾತನ ವೈದ್ಯಪದ್ಧತಿಯು ಕ್ರಿ.ಪೂ. 6ನೇ ಶತಮಾನದಿಂದಲೂ ಅಭ್ಯಾಸದಲ್ಲಿತ್ತು ಎಂದು ತಜ್ಞರು ಹೇಳುತ್ತಾರೆ. ಭಾರತದ ಪ್ರಾಚೀನ ವೈದ್ಯಶಾಸ್ತ್ರ ಪರಂಪರೆಯ ಪ್ರಖ್ಯಾತ ಜ್ಞಾನಿಗಳೆಂದರೆ ಚರಕ, ಸುಶ್ರುತ, ಮುಂತಾದವರು. ಹಾಗೆಯೇ ಭಾರತದ ವೈದ್ಯಶಾಸ್ತ್ರದಲ್ಲಿ ವಾಗ್ಬಟ, ಧನ್ವಂತರಿ, ನಾಗಾರ್ಜುನ, ಪತಂಜಲಿ, ಆತ್ರೇಯ ಮುಂತಾದ ವೈದ್ಯಶಾಸ್ತ್ರ ತಜ್ಞರು, ಔಷಧ ತಜ್ಞರು, ದೇಹರಚನಾಶಾಸ್ತ್ರಗಳನ್ನು ಬಲ್ಲವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಗ್ರೀಕ್ ನಾಗರಿಕತೆಯಲ್ಲಿ ಹಿಪ್ರೋಕ್ರೆಟಿಸ್ ಹೇಗೆ ವೈದ್ಯಶಾಸ್ತ್ರಕ್ಕೆ ಪಿತಾಮಹ ಎನಿಸಿಕೊಂಡಿದ್ದನೋ ಹಾಗೆಯೇ ಭರತ ಖಂಡದಲ್ಲಿ ಆತ್ರೇಯ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಓರ್ವ ಮುಖ್ಯ ಸಾಧಕನಾಗಿದ್ದನು. ಆತ್ರೇಯನು ತನ್ನ ಆತ್ರೇಯ ಸಂಹಿತೆಯಲ್ಲಿ ಗುಣವಾಗುವ ಮತ್ತು ಗುಣವಾಗದಿರುವ ಎರಡು ಬಗೆಯ ರೋಗಗಳ ಕುರಿತು ವಿವರಿಸುತ್ತಾನೆ. ಚರಕ ಮತ್ತಿತರ ಪಂಡಿತರು ಆತ್ರೇಯನನ್ನು ಬಹಳವಾಗಿ ಗೌರವಿಸುತ್ತಿದ್ದರು. ಚರಕ ಸೇರಿದಂತೆ ಹಲವು ವೈದ್ಯಶಾಸ್ತ್ರಜ್ಞರು ತಾವು ಆತ್ರೇಯನ ಶಿಷ್ಯರೆಂತಲೂ ಹೇಳಿಕೊಳ್ಳುತ್ತಾರೆ. ಭಾರತೀಯ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳಲ್ಲಿ ಚರಕ ಸಂಹಿತೆಗೆ ಮಹತ್ವದ ಸ್ಥಾನವಿದೆ. ಚರಕನು ಮನುಷ್ಯ ದೇಹದ ಅಂಗ ವಿಚ್ಛೇದನ ಮಾಡದೇ ಅಂಗರಚನಾ ಶಾಸ್ತ್ರದ ಬಗ್ಗೆ ಬರೆದಿರಬಹುದು ಎಂದು ಕೆಲವರು ಊಹಿಸುತ್ತಾರೆ. ಚರಕನ ಪ್ರಕಾರ ಮನುಷ್ಯ ಶರೀರದಲ್ಲಿ 306 ಮೂಳೆಗಳಿವೆ ಎಂದು ಹೇಳಲಾಗಿತ್ತು. ಅಲ್ಲದೆ ವಾಯು, ಪಿತ್ತ ಮತ್ತು ಕಫಗಳೆಂಬ 3 ದೋಷಗಳ ಕಾರಣದಿಂದ ಮನುಷ್ಯರಿಗೆ ಕಾಯಿಲೆಗಳು ಬರುತ್ತವೆಂದು ನಿರೂಪಿಸುತ್ತಾನೆ. ಅವುಗಳಲ್ಲಿ ವಾಯುವಿನಿಂದ ಬರುವ ರೋಗಗಳು, ಕಫದಿಂದ ಉಂಟಾಗುವ ಕಾಯಿಲೆಗಳು, ಪಿತ್ತದ ಪರಿಣಾಮದಿಂದ ಉಂಟಾಗುವ ಅನಾರೋಗ್ಯಗಳ ವಿವರಗಳನ್ನು ಅತಿಸಾರ, ಜಠರ ರೋಗ, ಕುಷ್ಠರೋಗ, ತಲೆನೋವು, ಹುಚ್ಚು ಮುಂತಾದ ಕಾಯಿಲೆಗಳ ಕಾರಣ ಹಾಗೂ ಪರಿಣಾಮಗಳನ್ನು ಚರಕ ಸೂಚಿಸುತ್ತಾನೆ. ಅದಲ್ಲದೆ ಸಸ್ಯ, ಪ್ರಾಣಿ ಮತ್ತು ಖನಿಜಗಳ ಗುಂಪಿಗೆ ಸೇರಿದ ಔಷಧಗಳ ವಿವರಗಳನ್ನು ಚರಕ ಸಂಹಿತೆಯಲ್ಲಿ ತಿಳಿಸಿರುವ ಬಗ್ಗೆ ಅಧ್ಯಯನಗಳು ನಡೆದಿವೆ. ಸುಶ್ರುತ ಮತ್ತು ಚರಕ ಇವರು ಹೇಗೆ ಪ್ರಖ್ಯಾತರಾಗಿದ್ದರೋ ಅದೇ ರೀತಿಯಲ್ಲಿ ವಾಗ್ಬಟನು ಸಹ ಭಾರತೀಯ ವೈದ್ಯಪದ್ಧತಿಯಲ್ಲಿ ಗಮನಾರ್ಹ ಕೊಡುಗೆ ನೀಡಿರುವ ವ್ಯಕ್ತಿಯಾಗಿದ್ದಾನೆ. ಈತನ ಅಷ್ಟಾಂಗ ಎಂಬ ಗ್ರಂಥವು ಹೆಸರುವಾಸಿಯಾಗಿದೆ. ವಾಗ್ಬಟನ ಈ ವೈದ್ಯಶಾಸ್ತ್ರ ಕುರಿತ ಕೃತಿಯಲ್ಲಿ ಆರೋಗ್ಯಶಾಸ್ತ್ರ, ಅಂಗರಚನೆ, ವೈದ್ಯಶಾಸ್ತ್ರ, ಕಣ್ಣಿಗೆ ಸಂಬಂಧಿಸಿದ ರೋಗಗಳು, ರೋಗನಿಯಂತ್ರಣ, ಸ್ತ್ರೀ ರೋಗಗಳು ಹಾಗೂ ಇವುಗಳಿಗೆ ಚಿಕಿತ್ಸಾ ವಿಧಾನಗಳನ್ನು ವಿವರಿಸಿದ್ದಾನೆ.

 ಪತಂಜಲಿ

ಸಾಮಾಜಿಕವಾಗಿ ಉನ್ನತ ಸ್ಥಾನವನ್ನು ಪಡೆದಿದ್ದ ಧನ್ವಂತರಿಯು ಭಾರತೀಯ ವೈದ್ಯಶಾಸ್ತ್ರ ಪರಂಪರೆಯಲ್ಲಿ ಬಹು ಮಹತ್ವದ ಸ್ಥಾನವನ್ನು ಪಡೆದಿದ್ದಾನೆ. ಧನ್ವಂತರಿಯ ಹೆಚ್ಚುಗಾರಿಕೆ ಏನೆಂದರೆ ಇವನು ತನ್ನ ವೈದ್ಯಕೀಯ ಶಾಸ್ತ್ರದ ಜ್ಞಾನವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಲು ಪ್ರಯತ್ನಪಟ್ಟವರಲ್ಲಿ ಒಬ್ಬನಾಗಿದ್ದಾನೆ. ಭಾರತೀಯ ವೈದ್ಯಪದ್ಧತಿಯ ಇನ್ನೊಬ್ಬ ಮುಖ್ಯ ವ್ಯಕ್ತಿ ನಾಗಾರ್ಜುನ ಆಗಿದ್ದಾನೆ. ಕ್ರಿ.ಪೂ. 1ನೆ ಶತಮಾನದಲ್ಲಿದ್ದ ಎಂದು ಹೇಳಲಾಗುವ ನಾಗಾರ್ಜುನನು ಒಬ್ಬ ತತ್ವಶಾಸ್ತ್ರಜ್ಞ, ರಸಾಯನಶಾಸ್ತ್ರಜ್ಞ, ಹಾಗೂ ವೈದ್ಯಶಾಸ್ತ್ರವನ್ನು ಬಲ್ಲವನೂ ಆಗಿದ್ದನು. ವೈದ್ಯಶಾಸ್ತ್ರವನ್ನು ಕುರಿತಂತೆ ನಾಗಾರ್ಜುನನು ಕೆಲವು ಕೃತಿಗಳನ್ನು ರಚಿಸಿದ್ದು, ರಸೇಂದ್ರ ಮಂಗಳ, ಆರೋಗ್ಯ ಮಂಜರಿ ಮತ್ತು ಯೋಗಸಾರ ಎಂಬ ಕೃತಿಗಳು ಮುಖ್ಯವಾದವುಗಳಾಗಿವೆ.

ಅರಬರ ಪುರಾತನ ಚಿಕಿತ್ಸಾ ವಿಧಾನ

ಪತಂಜಲಿಯ ಹೆಸರು ಇಂದು ಭಾರತ ದೇಶಾದ್ಯಂತ ಅತ್ಯಂತ ಚಿರಪರಿಚಿತ ಹೆಸರಾಗಿದೆ. ಯೋಗತಜ್ಞನು, ರಸಾಯನ ಶಾಸ್ತ್ರಜ್ಞನು ಹಾಗೂ ಲೋಹಶಾಸ್ತ್ರ ತಿಳಿದಿದ್ದವನು ಆಗಿದ್ದ ಪತಂಜಲಿಯು ಮನುಷ್ಯನ ದೇಹ ಹಾಗೂ ನಿಸರ್ಗಗಳ ನಡುವಿನ ಅನನ್ಯತೆಯನ್ನು ತನ್ನದೇ ಆದ ರೀತಿಯಲ್ಲಿ ಸಾಬೀತುಪಡಿಸಿದ ಒಬ್ಬ ಬಹುದೊಡ್ಡ ಸಾಧಕನಾಗಿದ್ದಾನೆ. ವಿಜಯನಗರ ಸಾಮ್ರಾಜ್ಯದಲ್ಲೂ ಸಹ ಮಾಧವನೆಂಬ ವೈದ್ಯಶಾಸ್ತ್ರ ಪಂಡಿತನು ‘ಮಾಧವನಿಧಾನ’ ಎಂಬ ವೈದ್ಯಶಾಸ್ತ್ರ ಕುರಿತ ಗ್ರಂಥವೊಂದನ್ನು ರಚಿಸಿರುತ್ತಾನೆ.

ಸಾರಾಂಶದಲ್ಲಿ ಹೇಳುವುದಾದರೆ ಭರತಖಂಡವೂ ಸಹ ಜಗತ್ತಿನ ಇತರ ನಾಗರಿಕತೆಗಳಂತೆಯೇ ವೈದ್ಯಶಾಸ್ತ್ರ, ಶರೀರ ರಚನಾಶಾಸ್ತ್ರ, ರಾಸಾಯನಿಕ ಶಾಸ್ತ್ರ, ಚಿಕಿತ್ಸಾ ಪದ್ಧತಿಗಳನ್ನು ತನ್ನದೇ ವಿಧಾನದಲ್ಲಿ ರೂಪಿಸಿಕೊಂಡಿದ್ದ ಒಂದು ನಾಗರಿಕತೆಯಾಗಿತ್ತು ಎಂಬುದು ತಿಳಿಯುತ್ತದೆ. ಇತರ ದೇಶಗಳ ಅಥವಾ ನಾಗರಿಕತೆಗಳಿಗೆ ಔಷಧ ತಯಾರಿಕೆಯಲ್ಲಿ ಇದ್ದ ಪರಿಣಿತಿಯು ಭಾರತೀಯ ವೈದ್ಯರುಗಳಿಗೂ ಇತ್ತು ಎಂಬುದು ನಿಜ. ಕಬ್ಬಿಣ, ಚಿನ್ನ, ಬೆಳ್ಳಿ, ತವರ, ತಾಮ್ರ, ಸ್ಫಟಿಕ, ಗಂಧಕ, ಸೀಸ, ಪಾದರಸ ಮುಂತಾದ ಲೋಹಗಳನ್ನು ಬಳಸಿ ಔಷಧಗಳನ್ನು ತಯಾರಿಸುತ್ತಿದ್ದರು. ಸಿಡುಬು ರೋಗದ ಕೆಟ್ಟ ಪರಿಣಾಮಗಳನ್ನು ತಡೆಯಲು ಆ ರೋಗದಿಂದಾಗುವ ಗಾಯಗಳ ಕೀವನ್ನೇ ಒಂದು ಚಿಕಿತ್ಸಾ ಪದ್ಧತಿಯಾಗಿ ಉಪಯೋಗಿಸುವ ವಿಧಾನವು ಪ್ರಾಚೀನ ಭಾರತೀಯ ವೈದ್ಯರಿಗೆ ತಿಳಿದಿತ್ತು. ಭಾರತದಲ್ಲಿ ವೈದ್ಯಶಾಸ್ತ್ರ ಹಾಗೂ ಚಿಕಿತ್ಸಾ ಪದ್ಧತಿಗಳೊಂದಿಗೆ ಆಸ್ಪತ್ರೆಗಳು ಎನ್ನಬಹುದಾದ ಸ್ವರೂಪವನ್ನು ಹೊಂದಿದ್ದ ಚಿಕಿತ್ಸಾ ಕೇಂದ್ರಗಳನ್ನು ಸಹ ಅಲ್ಲಲ್ಲಿ ಸ್ಥಾಪಿಸಲಾಗಿತ್ತು ಎನ್ನಲಾಗಿದೆ. ಕ್ರಿ.ಪೂ. 5ನೇ ಶತಮಾನದ ಸುಮಾರಿನಲ್ಲೇ ಈಗಿನ ಶ್ರೀಲಂಕಾ ಅಥವಾ ಸಿಲೋನ್ ಪ್ರಾಂತದಲ್ಲಿ ಜನರಿಗೆ ಚಿಕಿತ್ಸೆ ನೀಡುವ ಒಂದು ಆಸ್ಪತ್ರೆ ಇತ್ತು ಎಂಬ ದಾಖಲೆಗಳಿವೆ. ಕ್ರಿ.ಪೂ. 2ನೇ ಶತಮಾನದಲ್ಲಿ ಇದ್ದ ಸಾಮ್ರಾಟ್ ಅಶೋಕ ಚಕ್ರವರ್ತಿಯು ಸಹ ತನ್ನ ಸಾಮ್ರಾಜ್ಯದ ಅನೇಕ ಪ್ರಾಂತಗಳಲ್ಲಿ ಸಾರ್ವಜನಿಕರಿಗಾಗಿ ಅನೇಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದ ಎಂದು ಹೇಳಲಾಗಿದೆ. ಅಶೋಕನ ಮಗ ಮಹೇಂದ್ರನು ಸಹ ಶ್ರೀಲಂಕಾದ ಅನುರಾಧಪುರದಲ್ಲಿ ಕಟ್ಟಿಸಿದ್ದ ಆಸ್ಪತ್ರೆಗಳ ಅವಶೇಷಗಳು ಈಗಲೂ ಇವೆ ಎಂದು ಹೇಳಲಾಗುತ್ತದೆ.

ಜೇಮ್ಸ್ ಬ್ರೆಸ್ಟೆಡ್ 2

ಪ್ರಾಚೀನ ಭಾರತದಲ್ಲಿ ವೈದ್ಯಶಾಸ್ತ್ರ ಕುರಿತಂತೆ ಶಿಕ್ಷಣ ನೀಡುವ ಕೇಂದ್ರಗಳು ಇದ್ದವು. ಪ್ರಸಿದ್ಧ ತಕ್ಷಶಿಲಾ ವಿಶ್ವವಿದ್ಯಾನಿಲಯದಲ್ಲೂ ವೈದ್ಯಶಾಸ್ತ್ರ ಕುರಿತ ಶಿಕ್ಷಣವನ್ನು ಸಮಾಜದ ಉನ್ನತ ವರ್ಗದವರಿಗಾಗಿ ನೀಡಲಾಗುತ್ತಿತ್ತು. ಗ್ರೀಕ್ ತತ್ವಜ್ಞಾನಿ ಹಿಪ್ರೋಕ್ರೆಟಿಸ್‌ನ ಬರವಣಿಗೆಗಳಲ್ಲೂ ಸಹ ಭಾರತೀಯ ಔಷಧ ಜ್ಞಾನಕ್ಕೆ ಸಂಬಂಧಪಟ್ಟಂತಹ ಹಲವು ಪ್ರಸ್ತಾಪಗಳು ಹಾಗೂ ಔಷಧಗಳ ಹೆಸರನ್ನು ದಾಖಲಿಸಿದ್ದಾನೆ ಎನ್ನಲಾಗಿದೆ. ಜಗತ್ಪ್ರಸಿದ್ಧ ಸೇನಾನಿ ಅಲೆಗ್ಸಾಂಡರ್ ಚಕ್ರವರ್ತಿಯ ಆಸ್ಥಾನದಲ್ಲೂ ಕೆಲವು ಭಾರತೀಯ ವೈದ್ಯರನ್ನು ನೇಮಿಸಿಕೊಳ್ಳಲಾಗಿತ್ತು. ಹಾಗೆಯೇ ಅರಬ್ ದೇಶಗಳಲ್ಲೂ ಸಹ ಭಾರತೀಯ ವೈದ್ಯ ಪರಂಪರೆಯ ಪ್ರಭಾವವು ಇತ್ತೆಂದು ಹೇಳುತ್ತಾರೆ. ಕ್ರಿ.ಶ. 8ನೇ ಶತಮಾನದಲ್ಲಿ ಬಾಗ್ದಾದಿನ ಹಾರೂನ್-ಅಲ್-ರಶೀದ್ ಎಂಬ ಮುಖ್ಯಸ್ಥನು ತಮ್ಮಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಪಾಠ ಹೇಳುವ ಸಲುವಾಗಿ ಇಬ್ಬರು ಭಾರತೀಯ ವೈದ್ಯತಜ್ಞರಾದ ಮಾನಕ ಮತ್ತು ಸಲಹ ಎಂಬವರನ್ನು ಬರಮಾಡಿಕೊಂಡಿದ್ದನು ಎಂದು ಹೇಳಲಾಗುತ್ತದೆ.

►ಗ್ರೀಕ್ -ರೋಮ್ ವೈದ್ಯಪದ್ಧತಿ

ಗ್ರೀಸ್ ದೇಶದ ಪರಂಪರೆಯಲ್ಲಿ ವೈದ್ಯಶಾಸ್ತ್ರ ಹಾಗೂ ತತ್ವಜ್ಞಾನಕ್ಕೆ ಸಂಬಂಧಿಸಿದಂತೆ ಹಿಪ್ರೋಕ್ರೆಟಿಸ್‌ನ ಕೊಡುಗೆ ಮಹತ್ವದ್ದಾಗಿದೆ. ಹಿಪ್ರೋಕ್ರೆಟಿಸ್‌ನನ್ನು ಗ್ರೀಸ್ ವೈದ್ಯಶಾಸ್ತ್ರದ ಪಿತಾಮಹ ಎಂದು ಹೇಳಲಾಗುತ್ತದೆ. ಹಿಪ್ರೋಕ್ರೆಟಿಸ್‌ನ ತತ್ವದ ಪ್ರಕಾರ ಯಾವುದೇ ಅನಾರೋಗ್ಯವು ಗುಣವಾಗಬೇಕೆಂದರೆ ಪ್ರಕೃತಿಯೇ ಪ್ರಧಾನ ಪರಿಹಾರವೆಂತಲೂ, ಮನುಷ್ಯನ ವೈದ್ಯಕೀಯ ಜ್ಞಾನವು ಕೇವಲ ಸಹಾಯ ನೀಡುವ ವಿಷಯ ಮಾತ್ರವೆಂತಲೂ ಪ್ರತಿಪಾದಿಸುತ್ತಿದ್ದನು. ಮನುಷ್ಯ ಶರೀರದ ಅಂಗರಚನಾಶಾಸ್ತ್ರ ಕುರಿತಂತೆ ಹಿಪ್ರೋಕ್ರೆಟಿಸ್ ಅಷ್ಟೇನೂ ವಿವರವಾಗಿ ಬರೆದಿಲ್ಲ. ಆದರೆ ಮನುಷ್ಯನ ದೇಹರಚನೆ ಹೃದಯ, ಶ್ವಾಸಕೋಶಗಳ ಕುರಿತಂತೆ ಅನೇಕ ವಿಚಾರಗಳನ್ನು ಅವನು ಚರ್ಚಿಸುತ್ತಾನೆ. ಮನುಷ್ಯ ದೇಹದಲ್ಲಿ ಅತ್ಯಂತ ಪ್ರಧಾನ ಅಂಗವೆಂದರೆ ಹೃದಯ ಎಂಬ ಹಿಂದಿನ ನಂಬಿಕೆಯನ್ನು ಹಿಪ್ರೋಕ್ರೆಟಿಸ್ ಒಪ್ಪಿರಲಿಲ್ಲ. ಅವನು ಮನುಷ್ಯನ ಪ್ರಧಾನ ಅಂಗ ಮೆದುಳು ಎನ್ನುವುದಾಗಿ ನಿಲುವು ಹೊಂದಿದ್ದನು. ಹಿಪ್ರೋಕ್ರೆಟಿಸ್ ವೈದ್ಯಶಾಸ್ತ್ರ, ಚಿಕಿತ್ಸಾ ವಿಧಾನ, ಹಾಗೂ ಶಸ್ತ್ರ ವೈದ್ಯ ಕುರಿತಂತೆಯೂ ಪರಿಣಿತಿ ಹೊಂದಿದ್ದನು. ವೈದ್ಯಶಾಸ್ತ್ರ ಕುರಿತಂತೆ ಹಿಪ್ರೋಕ್ರೆಟಿಸ್ ಒಟ್ಟು 412 ಸೂತ್ರಗಳನ್ನು ನಿರೂಪಿಸುತ್ತಾನೆ.

ಪ್ಲೇಟೊ

ಸಾರಾಂಶ ರೂಪದಲ್ಲಿ ಹಿಪ್ರೋಕ್ರೆಟಿಸ್‌ನ ಚಿಂತನೆಗಳನ್ನು ಹೇಳಬೇಕೆಂದರೆ ‘ಜೀವನ ಮೊಟಕು, ಕಲೆ ದೀರ್ಘ, ಅನುಭವ ಮೋಸಕರ, ತೀರ್ಪು ಕಷ್ಟಕರ’ ಎಂಬುದಾಗಿತ್ತು. ಹಿಪ್ರೋಕ್ರೆಟಿಸ್‌ನ ನಂತರ ಪ್ಲೇಟೊ, ಅರಿಸ್ಟಾಟಲ್, ಥಿಯೋ ಪ್ರಾಸ್ಟಲ್ ಮುಂತಾದವರು ಗ್ರೀಕ್ ವೈದ್ಯ ವಿಜ್ಞಾನವನ್ನು ಸಸ್ಯ ಶಾಸ್ತ್ರಾಧರಿತ ಚಿಕಿತ್ಸಾ ಪದ್ಧತಿಗಳನ್ನು ಬೆಳೆಸಿದರು. ಕ್ರಿ.ಪೂ. 3ನೇ ಶತಮಾನದ ವೇಳೆಗಾಗಲೇ ಗ್ರೀಸ್‌ನಲ್ಲಿ ಹಿರೋಫಿಲಸ್ ಎಂಬ ತಜ್ಞನು ಶವಗಳನ್ನು ಕುಯ್ದು ಅಂಗರಚನೆಯ ವಿಧಾನಗಳನ್ನು ಅಧ್ಯಯನ ಮಾಡಿದ್ದನೆಂದು ಹೇಳಲಾಗಿದೆ. ಇದಲ್ಲದೆ ಎಸ್ಕು ಲೇಪಿಯಸ್, ಥೇಲಿಸ್, ಆಲ್ಕಮೈನ್ ಮುಂತಾದ ತತ್ವಜ್ಞಾನಿಗಳು ಹಾಗೂ ವೈದ್ಯಶಾಸ್ತ್ರ ಪಂಡಿತರು ಗ್ರೀಕ್ ವೈದ್ಯಕೀಯ ಪದ್ಧತಿಯ ಬೆಳವಣಿಗೆಗೆ ತಮ್ಮದೇ ಕೊಡುಗೆಗಳನ್ನು ನೀಡಿದ್ದರು.

ಅರಿಸ್ಟಾಟಲ್

ರೋಮ್ ನಾಗರಿಕತೆಯಲ್ಲಿ ವೈದ್ಯಶಾಸ್ತ್ರದ ಆರಂಭಿಕ ಬೆಳವಣಿಗೆಯು ಗ್ರೀಕರ ಪ್ರಭಾವವನ್ನು ಹೊಂದಿತ್ತು. ನಂತರ ಸೆಲ್ಸಸ್ ಎಂಬಾತ ‘ದ ಮೆಡಿಸಿನಾ’ ಎಂಬ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಉತ್ತಮ ಕೃತಿಯೊಂದನ್ನು ರಚಿಸಿದ್ದನು. ಇದು ಲ್ಯಾಟಿನ್ ಭಾಷೆಯಲ್ಲಿ ಇತ್ತು. ಈ ಕೃತಿಯು ರಚನೆಯಾಗಿ ಹಲವು ನೂರು ವರ್ಷಗಳ ನಂತರ 1478 ರಲ್ಲಿ ಫ್ಲಾರೆನ್ಸ್ ನಗರದಲ್ಲಿ ಮುದ್ರಣವಾಯಿತು. ಈ ಕೃತಿಯಲ್ಲಿ ಆಹಾರಾಭ್ಯಾಸಗಳು, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ರೋಗಗಳ ಕಾರಣ, ಅವುಗಳ ಲಕ್ಷಣಗಳು, ಜ್ವರ ಮತ್ತು ಜ್ವರದ ಚಿಕಿತ್ಸೆಯ ಪದ್ಧತಿ ಮುಂತಾದವುಗಳನ್ನು ವಿವರಿಸಲಾಗಿತ್ತು. ಅಲ್ಲದೆ ಅಂಗರಚನೆ, ಔಷಧವಾಗಿ ಬಳಸಬಹುದಾದ ವಸ್ತುಗಳ ವಿಚಾರಗಳನ್ನು ಹೇಳಲಾಗಿತ್ತು. ರೋಮ್ ನಾಗರಿಕತೆಯ ವೈದ್ಯಶಾಸ್ತ್ರದ ಕ್ಷೇತ್ರದಲ್ಲಿ ಮಾರ್ಕಸ್ ಪೊರ್ರೊ, ಪ್ಲೀನಿಯಸ್, ಸೋರನಸ್, ರೂಫಸ್ ಹಾಗೂ ಗ್ಯಾಲನ್ ಮುಂತಾದವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ರೋಮನ್ನರ ಕಾಲಘಟ್ಟದಲ್ಲಿ ಅವರ ಸೈನ್ಯದಳದೊಂದಿಗೆ ವೈದ್ಯಶಾಲೆಗಳೂ ಸಹ ಗಮನಾರ್ಹ ಸಂಖ್ಯೆಯಲ್ಲಿ ಇರುತ್ತಿದ್ದವು.

► ಚೀನಿ ವೈದ್ಯಪದ್ಧತಿ

ಜಗತ್ತಿನ ಬೇರೆಲ್ಲಾ ನಾಗರಿಕತೆಗಳಂತೆಯೇ ಚೀನಿಯರ ನಾಗರಿಕತೆಯಲ್ಲೂ ವೈದ್ಯಶಾಸ್ತ್ರ ಹಾಗೂ ಧಾರ್ಮಿಕ ವಿಚಾರಗಳು ಆರಂಭದಲ್ಲಿ ಒಂದರೊಳಗೊಂದು ಬೆರೆತುಹೋಗಿದ್ದವು. ನಂತರ ವೈದ್ಯ ಹಾಗೂ ಧರ್ಮದ ವಿಚಾರಗಳನ್ನು ಬೇರೆ ಬೇರೆ ಎಂದು ನೋಡುವ ಅಭ್ಯಾಸ ಬೆಳೆದುಬಂದಿತ್ತು. ಕ್ರಿ.ಪೂ. 6ನೇ ಶತಮಾನದಲ್ಲಿ ಇದ್ದ ಲೋಸು ಎಂಬ ಪ್ರಖ್ಯಾತ ತತ್ವಜ್ಞಾನಿಯು ಈ ಪ್ರಪಂಚದಲ್ಲಿ ಯಿನ್ ಮತ್ತು ಯಾಂಗ್ ಎಂಬ ಎರಡು ಶಕ್ತಿಗಳಿವೆ ಎಂದು ಪ್ರತಿಪಾದಿಸಿದ್ದನು. ಲೋಸು ಪ್ರಕಾರ ಯಾಂಗ್ ಅಂದರೆ ಪುರುಷ ಶಕ್ತಿಯಾಗಿದ್ದು ಯಿನ್ ಎಂಬುದು ಸ್ತ್ರೀ ಶಕ್ತಿಯ ಸಂಕೇತವಾಗಿತ್ತು.

ಚೀನಿಯರ ವೈದ್ಯಶಾಸ್ತ್ರವು ಅನೇಕ ಶತಮಾನಗಳ ಕಾಲ ಬದಲಾಗದೆ ಮುಂದುವರಿದುಕೊಂಡು ಬಂದಿತ್ತು. ಚೀನೀ ವೈದ್ಯಕೀಯ ತತ್ವಸಿದ್ಧಾಂತ ಹಾಗೂ ನಂಬಿಕೆಗಳ ಪ್ರಕಾರ ಎಲ್ಲರಿಗೂ ಐದು ತರದ ಸಂಕಟಗಳು, ಐದು ತರದ ರೋಗಗಳು, ಐದು ಬಗೆಯ ಗಾಯಗಳು, ಐದು ವಿಧದ ನೋವುಗಳು ಇರುತ್ತವೆಂದು ನಂಬಲಾಗಿತ್ತು. ಕ್ರಿ.ಪೂ. 2800ರ ಅವಧಿಯಲ್ಲಿ ಜೀವಿಸಿದ್ದನೆಂದು ನಂಬಲಾಗಿರುವ ಷೆನ್-ನುಂಗ್ ಎಂಬಾತ ಚೀನೀ ವೈದ್ಯಶಾಸ್ತ್ರದ ಪಿತಾಮಹ ಎನ್ನಲಾಗಿದೆ. ಪ್ರಾಚೀನ ಚೀನೀ ವೈದ್ಯಪದ್ಧತಿಯಲ್ಲಿ ಕಣ್ಣಿನ ರೋಗಗಳು, ಹುಳುಗಳಿಂದ ಆಗುವ ರೋಗಗಳ ಬಗ್ಗೆ ತಿಳಿದುಕೊಳ್ಳಲಾಗಿತ್ತು. ಜಂತುಹುಳಗಳಿಗೆ, ಲಾಡಿ ಹುಳದ ಸಮಸ್ಯೆಗಳಿಗೆ ಅವರಿಗೆ ಔಷಧಗಳು ಗೊತ್ತಿದ್ದವು. ಕ್ರಿ.ಪೂ. 6ನೇ ಶತಮಾನದ ವೇಳೆಗೆ ಚೀನಿಯರಿಗೆ ಕುಷ್ಠರೋಗದ ಬಗ್ಗೆ ತಿಳಿದಿತ್ತು. ಹಾಗೂ ಅದಕ್ಕೆ ಔಷಧಗಳ ಪ್ರಯೋಗ ಮಾಡುವ ಪ್ರಯತ್ನವೂ ನಡೆಯುತ್ತಿತ್ತು. ಆಧುನಿಕ ವೈದ್ಯಪದ್ಧತಿಯ ಬಳಕೆಯಲ್ಲಿರುವ ಇಂಜೆಕ್ಷನ್ ನೀಡುವ ಅಥವಾ ದೇವಿ ಹಾಕುವ ಅಭ್ಯಾಸವನ್ನು ಯೂರೋಪಿಯನ್ ವೈದ್ಯರು ಚೀನೀ ವೈದ್ಯಪದ್ಧತಿಯಿಂದ ಕಲಿತರೆಂದು ಹೇಳಲಾಗುತ್ತದೆ. ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ವೈದ್ಯಶಾಸ್ತ್ರದ ಮುಖ್ಯಾಧಿಕಾರಿ ಡಾ. ಅಲೆಗ್ಸಾಂಡರ್ ಫಿಯರ್‌ಸನ್ ಎಂಬಾತ ದೇವಿ ಹಾಕುವ ವಿಧಾನವನ್ನು 1805 ನೇ ಇಸವಿಯ ವೇಳೆಗೆ ಚೀನಾದಲ್ಲಿ ಅಭಿವೃದ್ಧಿಪಡಿಸಿದನು.

ಗ್ಯಾಲನ್

11ನೇ ಶತಮಾನದಲ್ಲೇ ಚೀನಾದಲ್ಲಿ ಚಕ್ರವರ್ತಿಗಳ ಬೆಂಬಲದಿಂದ ವೈದ್ಯಕಾಲೇಜನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಕಲಿತು ಪರಿಣಿತಿ ಪಡೆದವರನ್ನು ವೈದ್ಯಾಧಿಕಾರಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು ಅಲ್ಲದೆ ಸೈನ್ಯ ವಿಭಾಗಗಳಲ್ಲೂ ಈ ತರಬೇತಿ ಪಡೆದ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಚೀನಿ ವೈದ್ಯಪದ್ಧತಿಯಲ್ಲಿ ಸ್ವಚ್ಛ ಹಾಗೂ ಬೇಯಿಸಿದ ಆಹಾರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಒಟ್ಟಾರೆಯಾಗಿ ಆಧುನಿಕವಾಗಿ ವೈದ್ಯಶಾಸ್ತ್ರದ ಬೆಳವಣಿಗೆಯಲ್ಲಿ ಹಾಗೂ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಚೀನಿಯರ ಕೊಡುಗೆಯು ಮಹತ್ವದ್ದಾಗಿದೆ.

► ಅರಬೀ ವೈದ್ಯಶಾಸ್ತ್ರ

ಅರಬರ ಜಗತ್ತಿನಲ್ಲಿ ನಾಗರಿಕತೆ, ತತ್ವಜ್ಞಾನ, ಕಲೆ ಹಾಗೂ ವೈದ್ಯಶಾಸ್ತ್ರಗಳು ಬೇರೆಲ್ಲಾ ನಾಗರಿಕತೆಗಳಂತೆಯೇ ಬೆಳೆದು ಸಾಕಷ್ಟು ಪ್ರಭಾವ ಬೀರಿದವು. ಜುಂಡಿ ಶಾಪುರ್ ಎಂಬ ಪ್ರಖ್ಯಾತ ನಗರವು ವೈದ್ಯಶಾಸ್ತ್ರದಲ್ಲಿ ಬಹುದೊಡ್ಡ ಕೇಂದ್ರವಾಗಿತ್ತು. ಅರಬರು ಚೀನಾ, ಇಂಡಿಯಾ, ಪರ್ಶಿಯಾ, ಗ್ರೀಕ್ ಹಾಗೂ ರೋಮನ್ನರಿಗಿದ್ದ ವೈದ್ಯಶಾಸ್ತ್ರ ಕುರಿತ ತಿಳುವಳಿಕೆಗಳನ್ನು ಅಭ್ಯಸಿಸಿ ತಮ್ಮದೇ ಆದ ವೈದ್ಯಕೀಯ ಪರಂಪರೆಯೊಂದನ್ನು ರೂಪಿಸಿದ್ದರು. ಕ್ರಿ.ಶ. 8 ಹಾಗೂ 9ನೇ ಶತಮಾನದ ಕಾಲಗಟ್ಟವು ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಭಾಷಾಂತರಗಳನ್ನೊಳಗೊಂಡಂತಹ ಹಲವು ಕೃತಿಗಳ ರಚನೆಗೆ ಮಹತ್ವದ ಕಾಲಘಟ್ಟವಾಗಿತ್ತು.

ಹೀರೋಡಾಟಾಸ್

ಹುನಾಯಿನ್ ಇಬ್ನು ಇಸ್ಹಾಕ್, ಜಾಬಿರ್, ರಜ್‌ಲಸ್, ಅಲಿ ಅಬ್ಬಾಸ್, ಅವೀಸೆನ್ನ, ಅಬ್ದುಲ್ ಲತೀಫ್ ಮುಂತಾದವರು ಅರಬ್ ನಾಗರಿಕತೆಯಲ್ಲಿ ವೈದ್ಯಶಾಸ್ತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದವರಾಗಿದ್ದಾರೆ. ಪುಸ್ತಕ ಭಂಡಾರಗಳು, ವಿದ್ಯಾಸಂಸ್ಥೆಗಳು, ವೈದ್ಯಶಾಸ್ತ್ರ ತರಬೇತಿ ಹಾಗೂ ಚಿಕಿತ್ಸಾ ಕೇಂದ್ರಗಳನ್ನು ಬಹಳ ಹಿಂದೆಯೇ ಅರಬ್ ದೇಶಗಳಲ್ಲಿ ಸ್ಥಾಪಿಸಲಾಗಿತ್ತು ಎಂಬುದು ನಮಗೆ ಚರಿತ್ರೆಯ ಅಧ್ಯಯನದಿಂದ ತಿಳಿದು ಬರುತ್ತದೆ.

ಯಾವುದೇ ಕ್ಷೇತ್ರದಲ್ಲಿನ ಜ್ಞಾನವು ತಮ್ಮದೇ ಆದ ಒಂದು ಪರಂಪರೆ ಹೊಂದಿದ್ದು, ಹಲವು ತಲೆಮಾರುಗಳ ಶೋಧನೆ ಹಾಗೂ ಅನುಭವಗಳ ಮೊತ್ತವಾಗಿರುತ್ತದೆ. ವೈದ್ಯಶಾಸ್ತ್ರದ ಇತಿಹಾಸ ಹಾಗೂ ಬೆಳವಣಿಗೆಗಳು ಇದಕ್ಕೆ ಒಂದು ಉದಾಹರಣೆಯಾಗಿದೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News