ಚಿಕ್ಕಮಗಳೂರು: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಿ.ಸತ್ಯಭಾಮ ಕರೆ

Update: 2018-01-22 11:33 GMT

ಚಿಕ್ಕಮಗಳೂರು, ಜ.22: ಹದಿನೆಂಟು ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳೂ ತಪ್ಪದೇ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಪಂ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ. ಸತ್ಯಭಾಮ ಮನವಿ ಮಾಡಿದರು.

ಅವರು ಸೋಮವಾರ ನಗರದ ಎ.ಐ.ಟಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮತದಾನ ಎಲ್ಲರ ಹಕ್ಕು ಮತ್ತು ಕರ್ತವ್ಯ. ಅದನ್ನು ನಿರ್ಲಕ್ಷ್ಯ ಮಾಡದೇ ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಧೋರಣೆಯನ್ನು ಯುವ ಜನತೆ ಬಿಡಬೇಕು. ಎಷ್ಟೋ ಸಂದರ್ಭಗಳಲ್ಲಿ ಕೇವಲ ಒಂದು ಮತ ನಿರ್ಣಾಯಕವಾಗುತ್ತದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಇಂದು ಅಂತಿಮ ದಿನವಾಗಿದ್ದರೂ ಮುಂದಿನ ದಿನಗಳಲ್ಲೂ ಸೇರ್ಪಡೆಗೊಳಿಸಲಾಗುತ್ತದೆ, 1-1-2000ದಲ್ಲಿ ಜನಿಸಿ 1-1-2018ಕ್ಕೆ 18 ವರ್ಷ ತುಂಬಿ ಈ ವರ್ಷ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಜನತೆ ಮಿಲೇನಿಯಂ ಓಟರ್ಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಯುವ ಜನತೆ ಈ ದೇಶದ ಆಸ್ತಿ ಮತ್ತು ಆಧಾರ ಸ್ತಂಭ, ಅವರೇ ನಿರ್ಣಾಯಕ ಮತದಾರರು. ಅವರು ಮನಸ್ಸು ಮಾಡಿದಲ್ಲಿ ದೇಶದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದ ಅವರು ಇದನ್ನು ಅರ್ಥಮಾಡಿಕೊಳ್ಳಿ, ಯಾರಿಗಾದರೂ ಮತ ನೀಡಿ. ಆದರೆ ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ದೇಶದಲ್ಲಿ ಗಟ್ಟಿಯಾಗಬೇಕಾದರೆ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರದಲ್ಲಿ ಬದಲಾವಣೆ ತರುವ ಶಕ್ತಿ ಯುವ ಜನತೆಗಿದೆ. ಯುವಜನತೆ ನಿರಾಸಕ್ತಿ ತೊರೆದು ದೇಶದ ಅಭಿವೃದ್ಧಿಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಮತದಾನ ಮಾಡುವಂತೆ ಇತರರನ್ನೂ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.

ಎ.ಐ.ಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಮತದಾನ ಮಾಡುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು, ಮತದಾನ ಮಾಡದಿದ್ದರೆ ನೀವು ನಾಗರೀಕರಾಗಿರುವುದೇ ವ್ಯರ್ಥ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ಎ.ಐ.ಟಿ ಕಾಲೇಜು ಮತ್ತು ಐ.ಡಿ.ಎಸ್.ಜಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮತ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಅರ್ಜಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ಜಿಲ್ಲಾ ವಾರ್ತಾಧಿಕಾರಿ ಜೆ. ಮಂಜೇಗೌಡ, ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಕೆ.ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಣ್ಣ, ಐ.ಡಿ.ಎಸ್.ಜಿ ಕಾಲೇಜಿನ ಪ್ರಾಚಾರ್ಯ ಟಿ.ಸಿ.ಬಸವರಾಜಪ್ಪ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಪ್ರೊ. ಟಿ.ಎನ್. ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.


‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿ, ಅದರ ಜೊತೆಗೆ ನಿಮ್ಮ ಕುಟುಂಬದವರ ಹೆಸರು ಮತಪಟ್ಟಿಯಲ್ಲಿದೆಯೇ ಎಂದು ಪರೀಕ್ಷಿಸಿ, ಒಂದು ವೇಳೆ ಹೆಸರುಗಳು ತಪ್ಪಾಗಿದ್ದಲ್ಲಿ ಅರ್ಜಿ ನಮೂನೆ 8 ರ ಮೂಲಕ ಅದನ್ನು ಸರಿಪಡಿಸಿಕೊಳ್ಳಿ’
- ಸತ್ಯಭಾಮ, ಜಿಪಂ ಸಿಇಓ, ಚಿಕ್ಕಮಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News