ಇನ್ನು ಮುಂದೆ ರೈಲುಗಳಲ್ಲಿ ಕಿತಾಪತಿ ಮಾಡುವಂತಿಲ್ಲ!

Update: 2018-01-22 13:50 GMT

ಹೊಸದಿಲ್ಲಿ, ಜ.22: ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಭದ್ರ ಪ್ರಯಾಣದ ಅನುಭವ ನೀಡುವ ಸಲುವಾಗಿ ದೇಶಾದ್ಯಂತವಿರುವ ಎಲ್ಲಾ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಗೆ ರೈಲ್ವೇ ಇಲಾಖೆ ಕೈಹಾಕಿದೆ.

11,000 ರೈಲುಗಳು ಮತ್ತು ಭಾರತೀಯ ರೈಲ್ವೇ ಜಾಲದಲ್ಲಿರುವ 8,500 ನಿಲ್ದಾಣಗಳಲ್ಲಿ 12 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ರೈಲ್ವೇ ಇಲಾಖೆಯು 2018-19ರ ಬಜೆಟ್‌ನಲ್ಲಿ 3,000 ಕೋಟಿ ರೂ ಒದಗಿಸಲಿದೆ ಎಂದು ವರದಿಗಳು ತಿಳಿಸಿವೆ. ಯೋಜನೆಯ ಪ್ರಕಾರ ರೈಲಿನ ಪ್ರತಿಯೊಂದು ಕೋಚ್‌ನಲ್ಲಿ ಎಂಟು ಸಿಸಿಟಿವಿ ಕ್ಯಾಮೆರಾಗಳಿರಲಿವೆ. ಜೊತೆಗೆ ಪ್ರತಿಯೊಂದು ನಿಲ್ದಾಣದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಪತ್ರಿಕಾ ವರದಿ ತಿಳಿಸಿದೆ. ಸದ್ಯ 50 ರೈಲುಗಳಲ್ಲಿ ಮತ್ತು 395 ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜಧಾನಿ, ಶತಾಬ್ಧಿ, ಡುರೊಂಟೊ ಮತ್ತು ಸ್ಥಳೀಯ ಪ್ರಯಾಣಿಕ ರೈಲುಗಳೂ ಸೇರಿದಂತೆ ಎಲ್ಲಾ ರೈಲುಗಳಲ್ಲೂ ಮುಂದಿನ ಎರಡು ವರ್ಷಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವಾಲಯವು ತಿಳಿಸಿದೆ.

ಕಳೆದ ವರ್ಷ ಹಳಿ ತಪ್ಪಿ ನಡೆದಿರುವ ಅನೇಕ ರೈಲು ದುರಂತಗಳನ್ನು ಗಮನದಲ್ಲಿಟ್ಟು ಈ ಬಾರಿ ರೈಲ್ವೇ ಬಜೆಟ್‌ನಲ್ಲಿ ಸುರಕ್ಷತೆ ಮತ್ತು ಅಪಘಾತ ತಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಪೂರೈಸುವತ್ತ ಗಮನಹರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. 2020ರ ವೇಳೆಗೆ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News