ಕನೌಜ್‌ನಿಂದ ಚುನಾವಣೆಗೆ ಸ್ಪರ್ಧಿಸಲಿರುವ ಅಖಿಲೇಶ್ ಯಾದವ್

Update: 2018-01-22 13:54 GMT

ಲಕ್ನೊ, ಜ.22: ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಾನು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನೌಜ್ ಕ್ಷೇತ್ರದಿಂದ ಸ್ಪರ್ಧಿಸಲಿರುವುದಾಗಿ ಸೋಮವಾರ ಘೋಷಿಸಿದ್ದಾರೆ. ಸದ್ಯ ಈ ಕ್ಷೇತ್ರದಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಪಾರಮ್ಯ ಹೊಂದಿದ್ದಾರೆ. ಹಿರಿಯ ಸಮಾಜವಾದಿ ನಾಯಕ ಜ್ಞಾನೇಶ್ವರ ಮಿಶ್ರಾ ಅವರ ಪುಣ್ಯತಿಥಿಯ ಸಂದರ್ಭ ಸೋಮವಾರ ಲಕ್ನೊದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಅಖಿಲೇಶ್, ತಾನು ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಮೈನ್‌ಪುರಿಯಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ವರದಿಗಾರರಿಗೆ ತಿಳಿಸಿದರು.

2014 ಚುನಾವಣೆಯಲ್ಲಿ ಆಝಮ್‌ಗಡ್ ಮತ್ತು ಮೈನ್‌ಪುರಿಯಿಂದ ಸ್ಪರ್ಧಿಸಿದ್ದ ಮುಲಾಯಂ ಸಿಂಗ್ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಪೂರ್ವ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಆಝಮ್‌ಗಡ್ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಮುಲಾಯಂರಿಂದ ತೆರವಾದ ಮೈನ್‌ಪುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಅದರಲ್ಲಿ ಅವರ ಮೊಮ್ಮಗ ತೇಜ್ ಪ್ರತಾಪ್ ಯಾದವ್ ಜಯಗಳಿಸಿದ್ದರು.

ಪಕ್ಷವು ವಂಶ ರಾಜಕೀಯ ಮಾಡುತ್ತಿದೆ ಎಂಬ ಆರೋಪದಿಂದ ಮುಕ್ತವಾಗುವ ಉದ್ದೇಶದಿಂದ ಅಖಿಲೇಶ್ ಯಾದವ್ ಕನೌಜ್ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. ಆದರೆ ಕನೌಜ್ ಕ್ಷೇತ್ರದಲ್ಲಿ ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವು ಮೂರರಲ್ಲಿ ಎರಡು ಸ್ಥಾನಗಳಲ್ಲಿ ಸೋಲುಂಡಿತ್ತು ಮತ್ತು ಕನೌಜ್ ನಗರದಲ್ಲಿ ಕೇವಲ 2,000 ಮತಗಳ ಅಂತರದಲ್ಲಿ ಜಯಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News