ಸರಳತೆ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ: ಬಿ.ಸುರೇಶ ಗೌಡ

Update: 2018-01-22 17:34 GMT

ತುಮಕೂರು,ಜ.22: ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ತಿಳಿಸಿದ್ದಾರೆ.

ಅಮರಶಿಲ್ಪಿ ಜಕಣಾಚಾರಿ ಅವರ ಹುಟ್ಟೂರಾದ ಕೈದಾಳದಲ್ಲಿ ನಿರ್ಮಿಸಿರುವ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ನಾವು ಆಡುವ ಮಾತಿಗೂ, ನಡೆದುಕೊಳ್ಳುವುದಕ್ಕೂ ಅಜಗಜಾಂತರ  ವ್ಯತ್ಯಾಸವಿದ್ದರೆ ಯಾರೂ ನಿಮ್ಮನ್ನು ಇಷ್ಟ ಪಡುವುದಿಲ್ಲ. ಇದು ಹಲವು ಬಾರಿ ನನ್ನ ಅನುಭವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಎಂದೂ ಸುಳ್ಳು ಹೇಳಿಲ್ಲ. ನುಡಿದಂತೆ ನಡೆದಿದ್ದೇನೆ. ಕ್ಷೇತ್ರವನ್ನು ಮಾದರಿಯಾಗಿಸಲು ಎಲ್ಲಾ ರೀತಿಯ ಪ್ರಯತ್ನ ನಡಸಿದ್ದೇನೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ಮಾತನಾಡಿ, ಯಾವುದೇ ಕೆಲಸ ಶಿಸ್ತು ಮತ್ತು ತಾಳ್ಮೆಯಿಂದ ನಿಭಾಯಿಸಿದ್ದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂಬುದಕ್ಕೆ ಶಾಸಕ ಬಿ.ಸುರೇಶಗೌಡ ಅವರೇ ಉದಾಹರಣೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ದುಡಿದಿದ್ದು, ಅತ್ಯಂತ ಹಿಂದುಳಿದಿರುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಮರಶಿಲ್ಪಿ ಜಕಣಾಚಾರಿ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಸಮುದಾಯ ಭವನ ನಿರ್ಮಿಸುವ ಮೂಲಕ ಕೈದಾಳವನ್ನು ಪ್ರವಾಸಿ ತಾಣವಾಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದರು. 

ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 2 ಸಾವಿರ ಶಾಲೆಗಳು ಮುಚ್ಚುವಂತಹ ಸ್ಥಿತಿಯಲ್ಲಿದ್ದು, ಅಭಿವೃದ್ಧಿಯಾಗದಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದಕ್ಕೆ ತದ್ವಿರುದ್ದವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತುಕೊಟ್ಟು,ಗೂಳೂರು ಸುತ್ತಮುತ್ತ 15 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಹೊಂದಿ ಶಾಲೆಗಳು ಮಾದರಿಯಾಗಿದ್ದು, ಕೈದಾಳವನ್ನು ಹೆಚ್ಚು ಅಭಿವೃದ್ದಿ ಪಡಿಸಲು ಧಾರ್ಮಿಕ ಕ್ಷೇತ್ರಕ್ಕೂ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು. 

ಕೈದಾಳವನ್ನು ಅಭಿವೃದ್ದಿ ಮಾಡುವಲ್ಲಿ 14 ಎಕರೆ 20 ಗುಂಟೆಯಲ್ಲಿ ವೃಕ್ಷಗಳನ್ನು ನೆಟ್ಟು ಅರಣ್ಯ ಬೆಳೆಸಿದ್ದು, ಎರಡೂ ಮುಕ್ಕಾಲು ಎಕರೆಯಲ್ಲಿ ಜಕಣಾಚಾರ್ಯರ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಇತಿಹಾಸವನ್ನು ಹೇಳುವ ಜಕಣಾಚಾರ್ಯರ ಪ್ರತಿಮೆ ಕೆತ್ತನೆ ಮಾಡಿ, ಅವರ ದೇವಸ್ಥಾನವನ್ನು ಕೈದಾಳದಲ್ಲಿ ನಿರ್ಮಿಸಿರುವುದು ಅದೃಷ್ಟವಾಗಿದ್ದು, ಇದನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಿದೆ ಎಂದರು. 

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ತಾ.ಪಂ. ಅಧ್ಯಕ್ಷ ಗಂಗಾಂಜನೇಯ, ಜಿ.ಪಂ ಹಾಲಿ ಸದಸ್ಯ ವೈ.ಹೆಚ್.ಹುಚ್ಚಯ್ಯ, ರಾಜೇಶ್‍ಗೌಡ, ಶಿವಮ್ಮ ಡಾ.ನಾಗರಾಜು, ಅನಿತಾ ಸಿದ್ದೆಗೌಡ, ನರಸಿಂಹಮೂರ್ತಿ, ಶಾಂತಕುಮಾರ್, ಎಂ.ಲಕ್ಷ್ಮೀಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News