ವೈಜ್ಞಾನಿಕ ತಳಹದಿಯ ಮೇಲೆಯೇ ಭಾರತೀಯ ಔಷಧ ಪದ್ಧತಿಗಳು ನಡೆಯಬೇಕು: ಜಿ.ಎನ್.ಶ್ರೀಕಂಠಯ್ಯ

Update: 2018-01-22 17:51 GMT

ಮೈಸೂರು,ಜ.22: ವೈಜ್ಞಾನಿಕ ತಳಹದಿಯ ಮೇಲೆಯೇ ಭಾರತೀಯ ಔಷಧ ಪದ್ಧತಿಗಳು ನಡೆಯಬೇಕು ಎಂದು ಆಯುಷ್ ಮಾಜಿ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಪ್ರತಿಪಾದಿಸಿದರು.

ನಗರದ ಹೆಬ್ಬಾಳಿನ ಕೈಗಾರಿಕಾ ಪ್ರದೇಶದಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ನಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆ ವತಿಯಿಂದ “ದೃಷ್ಟಿ-ಸೃಷ್ಟಿ”- 2018 ಎರಡು ದಿನಗಳ ಆಯರ್ವೇದ ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ಔಷಧ ಪದ್ಧತಿಯಲ್ಲಿ ಆಯುರ್ವೇದ ಪ್ರಾಮುಖ್ಯತೆಯನ್ನು ಪಡೆದಿದೆ. ಆಯುರ್ವೇದ ರೀತಿಯಲ್ಲೇ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕು. ಅದು ಬಿಟ್ಟು ನಾವು ಹೊಸ ಮಾದರಿಯಲ್ಲಿ ಸಂಶೋಧನೆ ನಡೆಸುವುದು ಸೂಕ್ತ ಅಲ್ಲ ಎಂದು ಅಭಿಪ್ರಾಯಿಸಿದರು.

ಮನುಷ್ಯ ತನ್ನ ಆರೋಗ್ಯವನ್ನು ತಾನೇ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿನ ಸಣ್ಣ ಪುಟ್ಟ ತೊಂದರೆಗಳಿಗೆ ವೈದ್ಯರ ಬಳಿ ತೆರಳದೇ ತಾನೇ ತಮ್ಮ ಮನೆಯ ಮುಂದೆ ಆಯುರ್ವೇದ ಗಿಡ ಮೂಲಿಕೆಗಳನ್ನು ಬೆಳಸಿ ಅವರೇ ಚಿಕಿತ್ಸೆ ಪಡೆಯುವ ಗುಣಗಳನ್ನು ಬೆಳಸಿಕೊಳ್ಳಬೇಕು. ಆಗ ಅಸ್ಪತ್ರೆಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು. 

ಆಯುಷ್‍ನ ಮತ್ತೊಬ್ಬ ಮಾಜಿ ನಿರ್ದೇಶಕ ಡಾ.ಆಂಜನೇಯ ಮೂರ್ತಿ ಮಾತನಾಡಿ, ಹಳೆ ಬೇರು ಹೊಸ ಚಿಗುರು ಎಂಬಂತೆ ಆಯುರ್ವೇದ ಶಕ್ತಿಯನ್ನು ಇಂದಿನ ಆಯುರ್ವೇದ ವೈದ್ಯರುಗಳು ಮತ್ತು ಸಂಶೋಧಕರು ಜನರಿಗೆ ತಿಳಿಸಬೇಕು. ಆಯುರ್ವೇದ ತಕ್ಷಣಕ್ಕೆ ಆರೋಗ್ಯ ಸುಧಾರಿಸುವುದಿಲ್ಲ ಎಂಬ ಆಭಿಪ್ರಾಯ ಜನರಲ್ಲಿ ಇದೆ. ಅದನ್ನು ಹೋಗಲಾಡಿಸುವ ಕೆಲಸವನ್ನು ಮಾಡಬೇಕು. ಪ್ರೋಟಿನ್ ಕಡಿಮೆ ಇರುವ ಮಕ್ಕಳಿಗೆ ಅಶ್ವಗಂಧವನ್ನು ನೀಡಿದರೆ ಪ್ರೋಟಿನ್ ವೃದ್ಧಿಯಾಗುತ್ತದೆ. ಇಂತಹ ಹಲವಾರು ಔಷಧ ಪದ್ಧತಿಗಳು ಆಯುರ್ವೇದಲ್ಲಿ ಇದ್ದು ಅದನ್ನು ಸರಿಯಾಗಿ ಜನರಿಗೆ ಮನವರಿಕೆಯಾಗುವ ರೀತಿಯಲ್ಲಿ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಾಲಸುಬ್ರಮಣ್ಯಂ ಮಾತನಾಡಿ, ಪ್ರಾಚೀನ ವಿಜ್ಞಾನದ ಬಗ್ಗೆ ನಾವುಗಳು ಮಾತನಾಡುತ್ತೇವೆ. ಆದರೆ ಪ್ರಾಚೀನ ವಿಜ್ಞಾನಿಗಳಾಗುತಿದ್ದೇವಾ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಿದೆ. ಆಯುರ್ವೇದ ಭಾರತೀಯ ವಿದ್ಯೆ. ಭಾರತೀಯ ವಿಜ್ಞಾನ, ಅದನ್ನು ಬೆಳಸಿ ಉಳಿಸಿಕೊಳ್ಳವ ಜವಾಬ್ದಾರಿ ಭಾರತೀಯರೆಲ್ಲರ ಮೇಲಿದೆ ಎಂದು ಹೇಳಿದರು.

ಮೈಸೂರು ಸರ್ಕಾರಿ ಆಯುರ್ವೇಧ ಸಂಶೋಧನಾ ಸಂಸ್ಥೆ ಸಹಾಯಕ ನಿರ್ದೇಶಕ ಡಾ.ಲಕ್ಷೀನಾರಾಯಣ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ಮಧುಮೇಹ ಸಂಸ್ಥೆ ನಿರ್ದೇಶಕ ಡಾ.ಶೇಖರ್, ಆಯುಷ್ ಜಂಟಿ ನಿರ್ದೇಶಕಿ ಡಾ.ಅಹಲ್ಯ ಶರ್ಮ ಮಾತನಾಡಿದರು. ಹಿರಿಯ ಆಯರ್ವೇಧ ತಜ್ಞರಾದ ಡಾ.ರವಿಶಂಕರ್, ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News